ಖಶೋಗಿ ಹತ್ಯೆ ಹೊಣೆಯನ್ನು ಸೌದಿ ಯುವರಾಜನ ಮೇಲೆ ಹೊರಿಸಿದ ಸೆನೆಟ್

Update: 2018-12-14 15:43 GMT

ವಾಶಿಂಗ್ಟನ್, ಡಿ. 14: ಅಮೆರಿಕದ ಸಂಸತ್ತಿನ ಭಾಗವಾಗಿರುವ ಸೆನೆಟ್ ಗುರುವಾರ ಸೌದಿ ಅರೇಬಿಯಕ್ಕೆ ಸಂಬಂಧಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಎರಡು ಪ್ರಹಾರಗಳನ್ನು ನೀಡಿದೆ. ಒಂದು, ಸೌದಿ ಅರೇಬಿಯದ ದೇಶಭ್ರಷ್ಟ ಪತ್ರಕರ್ತ ಜಮಾಲ್ ಖಶೋಗಿಯ ಹತ್ಯೆಗೆ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರನ್ನು ಅದು ಹೊಣೆಯಾಗಿಸಿದೆ ಹಾಗೂ ಎರಡು, ಯೆಮನ್‌ನಲ್ಲಿ ನಡೆಯುತ್ತಿರುವ ಯುದ್ಧಕ್ಕೆ ಅಮೆರಿಕ ನೀಡುತ್ತಿರುವ ಸೇನಾ ನೆರವನ್ನು ನಿಲ್ಲಿಸುವ ಪರವಾಗಿ ಮತ ಹಾಕಿದೆ.

ಆದರೆ, ಈ ನಿರ್ಣಯಗಳು ಜಾರಿಯಾಗುವುದಿಲ್ಲ, ಸಾಂಕೇತಿಕ ಮಾತ್ರವಾಗಿವೆ. ಯಾಕೆಂದರೆ, ಇವುಗಳು ಕಾನೂನು ಆಗಿ ಜಾರಿ ಆಗಬೇಕಾದರೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲೂ ಅನುಮೋದನೆಗೊಳ್ಳಬೇಕಾಗುತ್ತದೆ. ಆದರೆ, ಸೌದಿ ಅರೇಬಿಯದ ವಿರುದ್ಧದ ಯಾವುದೇ ನಿರ್ಣಯವನ್ನು ರಿಪಬ್ಲಿಕನ್ ಪ್ರಾಬಲ್ಯದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ತಡೆಹಿಡಿಯುತ್ತಿದೆ.

ಐತಿಹಾಸಿಕ ಕ್ರಮವೊಂದರಲ್ಲಿ, ಯೆಮನ್‌ನಲ್ಲಿ ನಡೆಯುತ್ತಿರುವ ಆಂತರಿಕ ಯುದ್ಧದಲ್ಲಿ ಸೌದಿ ಅರೇಬಿಯ ನೇತೃತ್ವದ ಮಿತ್ರಕೂಟಕ್ಕೆ ಅಮೆರಿಕ ನೀಡುತ್ತಿರುವ ಸೇನಾ ಬೆಂಬಲವನ್ನು ನಿಲ್ಲಿಸಬೇಕೆನ್ನುವ ನಿರ್ಣಯವನ್ನು ಸೆನೆಟ್ 56-41 ಮತಗಳ ಅಂತರದಿಂದ ಅಂಗೀಕರಿಸಿತು.

ಇದರ ಬೆನ್ನಿಗೇ ನಡೆದ ಇನ್ನೊಂದು ಮತದಾನದಲ್ಲಿ, ಖಶೋಗಿ ಹತ್ಯೆಯ ಹೊಣೆಯನ್ನು ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಮೇಲೆ ಹೊರಿಸುವ ಹಾಗೂ ಹತ್ಯೆಗೆ ಕಾರಣರಾದವರನ್ನು ಅದಕ್ಕೆ ಹೊಣೆಗಾರರನ್ನಾಗಿ ಮಾಡಬೇಕು ಎಂಬುದಾಗಿ ಸೌದಿ ಅರೇಬಿಯವನ್ನು ಒತ್ತಾಯಿಸುವ ನಿರ್ಣಯವೊಂದನ್ನೂ ಸೆನೆಟ್ ಅಂಗೀಕರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News