ಅಮೆರಿಕ ವಿಮಾನದಲ್ಲಿ ಲೈಂಗಿಕ ದೌರ್ಜನ್ಯ: ಭಾರತೀಯನಿಗೆ 9 ವರ್ಷ ಜೈಲು

Update: 2018-12-14 16:09 GMT

ವಾಶಿಂಗ್ಟನ್, ಡಿ. 14: ಈ ವರ್ಷದ ಆರಂಭದಲ್ಲಿ, ಅಮೆರಿಕದ ವಿಮಾನವೊಂದರಲ್ಲಿ ಸಹ ಪ್ರಯಾಣಿಕೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಭಾರತೀಯ ಇಂಜಿನಿಯರ್‌ಗೆ ನ್ಯಾಯಾಲಯವೊಂದು ಗುರುವಾರ 9 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

2015ರಲ್ಲಿ ಎಚ್-1ಬಿ ವೀಸಾದಲ್ಲಿ ಅಮೆರಿಕಕ್ಕೆ ಬಂದಿರುವ ತಮಿಳುನಾಡಿನ 35 ವರ್ಷದ ಪ್ರಭು ರಾಮಮೂರ್ತಿಯನ್ನು ಅವರ ಜೈಲು ಶಿಕ್ಷೆ ಮುಗಿದ ಬಳಿಕ ಗಡಿಪಾರು ಮಾಡಲಾಗುವುದು ಎಂದು ಡೆಟ್ರಾಯಿಟ್‌ನಲ್ಲಿರುವ ಫೆಡರಲ್ ನ್ಯಾಯಾಲಯ ಹೇಳಿದೆ.

ಇತರರು ಇಂಥ ಅಪರಾಧಗಳನ್ನು ಮಾಡುವುದನ್ನು ಈ ಶಿಕ್ಷೆ ತಡೆಯುತ್ತದೆ ಎಂಬ ಆಶಾಭಾವವನ್ನು ನ್ಯಾಯಾಧೀಶ ಟೆರೆನ್ಸ್ ಬರ್ಜ್ ವ್ಯಕ್ತಪಡಿಸಿದರು.

ರಾಮಮೂರ್ತಿಗೆ 11 ವರ್ಷಗಳ ಜೈಲು ಶಿಕ್ಷೆ ನೀಡಬೇಕೆಂದು ಫೆಡರಲ್ ಪ್ರಾಸಿಕ್ಯೂಶನ್ ವಾದಿಸಿತ್ತು.

ಆಗಸ್ಟ್‌ನಲ್ಲಿ ನಡೆದ ಐದು ದಿನಗಳ ವಿಚಾರಣೆಯ ವೇಳೆ ರಾಮಮೂರ್ತಿಯ ಅಪರಾಧ ಸಾಬೀತಾಗಿತ್ತು.

ಜನವರಿ 3ರಂದು ರಾಮಮೂರ್ತಿ ತನ್ನ ಹೆಂಡತಿಯೊಂದಿಗೆ ಲಾಸ್ ವೇಗಸ್‌ನಿಂದ ಡೆಟ್ರಾಯಿಟ್‌ಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿತ್ತು. ತನ್ನ ಹೆಂಡತಿ ಪಕ್ಕದಲ್ಲಿದ್ದರೂ ಇನ್ನೊಂದು ಪಕ್ಕದಲ್ಲಿ ಕುಳಿತಿದ್ದ ಮಹಿಳೆ ನಿದ್ದೆಯಲ್ಲಿದ್ದಾಗ ರಾಮಮೂರ್ತಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂಬುದಾಗಿ ಪ್ರಾಸಿಕ್ಯೂಶನ್ ಆರೋಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News