ಭಾರತ ಅಮೆರಿಕದ ನಿಜವಾದ ಮಿತ್ರ ಟ್ರಂಪ್ ಹೇಳಿದ್ದಾರೆ: ಅಮೆರಿಕದ ಹಿರಿಯ ಅಧಿಕಾರಿ

Update: 2018-12-14 16:11 GMT

ವಾಶಿಂಗ್ಟನ್, ಡಿ. 14: ಭಾರತವನ್ನು ಅಮೆರಿಕದ ‘ನಿಜವಾದ ಮಿತ್ರ’ ಎಂಬುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆದಿದ್ದಾರೆ ಎಂದು ದಕ್ಷಿಣ ಮತ್ತು ಮಧ್ಯ ಏಶ್ಯ ವ್ಯವಹಾರಗಳ ಪ್ರಧಾನ ಉಪ ಸಹಾಯಕ ವಿದೇಶಾಂಗ ಕಾರ್ಯದರ್ಶಿ ಆ್ಯಲಿಸ್ ವೆಲ್ಸ್ ಹೇಳಿದ್ದಾರೆ.

ವಿಶಾಲ ಭಾರತ-ಪೆಸಿಫಿಕ್ ವಲಯದ ಪ್ರಯೋಜನಕ್ಕಾಗಿ ಭಾರತದೊಂದಿಗಿನ ಸಂಬಂಧವನ್ನು ಬಲಪಡಿಸಲು ಎರಡು ವರ್ಷಗಳಲ್ಲಿ ಅಮೆರಿಕ ತೆಗೆದುಕೊಂಡಿರುವ ಕ್ರಮಗಳನ್ನು ಅವರು ಈ ಸಂದರ್ಭದಲ್ಲಿ ಪಟ್ಟಿ ಮಾಡಿದರು.

ನಿರ್ಗಮಿಸುತ್ತಿರುವ ಭಾರತೀಯ ರಾಯಭಾರಿ ನವತೇಜ್ ಸರ್ನರ ಗೌರವಾರ್ಥ ವಿದೇಶಾಂಗ ಇಲಾಖೆಯು ಗುರುವಾರ ಏರ್ಪಡಿಸಿದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

‘‘ಅಧ್ಯಕ್ಷ ಟ್ರಂಪ್ ಭಾರತವನ್ನು ನಿಜವಾದ ಸ್ನೇಹಿತ ಎಂಬುದಾಗಿ ಕರೆದಿದ್ದಾರೆ ಹಾಗೂ ಭಾರತ-ಅಮೆರಿಕ ಬಾಂಧವ್ಯವು ಪರಸ್ಪರರು ಹಂಚಿಕೊಂಡಿರುವ ವೌಲ್ಯಗಳ ಆಧಾರದಲ್ಲಿ ಬೆಳೆಯುತ್ತಿರುವ ಸಂಬಂಧ ಎಂಬುದಾಗಿ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಪರಿಗಣಿಸಿದ್ದಾರೆ’’ ಎಂದು ಅವರು ನುಡಿದರು.

ಅಮೆರಿಕ ಅಧ್ಯಕ್ಷರ ಅಧಿಕೃತ ಅತಿಥಿಗೃಹ ‘ಬ್ಲೇರ್ ಹೌಸ್’ನಲ್ಲಿ ವಿದಾಯ ಕೂಟವನ್ನು ಏರ್ಪಡಿಸಲಾಗಿತ್ತು. ವಿದೇಶಾಂಗ ಇಲಾಖೆ ಮತ್ತು ಶ್ವೇತಭವನದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News