ಮಹಿಳೆಯರ ವಿರುದ್ಧ ತಾರತಮ್ಯದ ಸಾಮಾಜಿಕ ಮಾನದಂಡಗಳನ್ನು ಭಾರತ ನಿವಾರಿಸಬೇಕು: ಯುನಿಸೆಫ್

Update: 2018-12-14 18:24 GMT

ಹೊಸದಿಲ್ಲಿ,ಡಿ.14: ಮಹಿಳೆಯರ ವಿರುದ್ಧದ ತಾರತಮ್ಯವು ದೇಶದ ಅಭಿವೃದ್ಧಿಯನ್ನು ತಡೆಯುವುದರಿಂದ ಇಂತಹ ಭೇದಭಾವಗಳಿಗೆ ಕಾರಣವಾಗಿರುವ,ಸಮಾಜದಲ್ಲಿ ಆಳವಾಗಿ ಬೇರೂರಿರುವ ಮಾನದಂಡಗಳನ್ನು ಭಾರತವು ನಿವಾರಿಸುವ ಅಗತ್ಯವಿದೆ ಎಂದು ಯುನಿಸೆಫ್‌ನ ಉಪ ಕಾರ್ಯಕಾರಿ ನಿರ್ದೇಶಕ ಉಮರ್ ಅಬ್ದಿ ಹೇಳಿದ್ದಾರೆ.

ಬಿಹಾರದ ಪಾಟ್ನಾದಲ್ಲಿಯ ಮಕ್ಕಳ ಆಸ್ಪತ್ರೆಯೊಂದರ ಉದಾಹರಣೆಯನ್ನು ನೀಡಿದ ಅವರು,ಅಲ್ಲಿ ಕುಟುಂಬಗಳು ತಮ್ಮ ಹೆಣ್ಣುಮಕ್ಕಳನ್ನು ಚಿಕಿತ್ಸೆಗೆ ಕರೆತರದಿರುವುದನ್ನು ತಾನು ಕಂಡಿದ್ದೇನೆ. ಹೆಣ್ಣುಮಕ್ಕಳನ್ನು ಆರ್ಥಿಕ ಹೊರೆಯೆಂದು ಹೆತ್ತವರು ಭಾವಿಸುತ್ತಿದ್ದು,ಇದೇ ಕಾರಣದಿಂದ ಅವರು ಅನಾರೋಗ್ಯಕ್ಕೆ ಗುರಿಯಾದರೂ ಆಸ್ಪತ್ರೆಗೆ ಕರದೊಯ್ಯುತ್ತಿಲ್ಲ ಎಂದು ಹೇಳಿದರು.

ಇಂತಹ ಕೆಲವು ಅಂತರ್ ಸಂಬಂಧಿತ ಸಾಮಾಜಿಕ ಸಮಸ್ಯೆಗಳಿದ್ದು,ಶಿಕ್ಷಣ ಮತ್ತು ನಗದು ವರ್ಗಾವಣೆ ಯೋಜನೆಗಳಂತಹ ಸರಕಾರಿ ನೀತಿಗಳಿಂದ ಇವುಗಳನ್ನು ಬಗೆಹರಿಸಬಹುದಾಗಿದೆ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅಬ್ದಿ ಹೇಳಿದರು.

ಹೆಣ್ಣುಮಕ್ಕಳ ಮೇಲೆ ಹೂಡಿಕೆಯು ಹೇಗೆ ಅವರನ್ನು ಸಬಲಗೊಳಿಸುತ್ತದೆ ಎನ್ನುವುದನ್ನು ತೋರಿಸಲು ಲಿಂಗ ಅಸಮಾನತೆಯನ್ನು ನಿವಾರಿಸುವಲ್ಲಿ ಶೈಶವಾವಸ್ಥೆಯ ಬಾಲ್ಯಾಭಿವೃದ್ಧಿ(ಇಸಿಡಿ) ಕಾರ್ಯಕ್ರಮವು ಪ್ರಮುಖ ಪಾತ್ರವನ್ನು ವಹಿಸಬಲ್ಲದು ಎಂದ ಅವರು,ಗಂಡುಮಕ್ಕಳಿಗೆ ಹೋಲಿಸಿದರೆ ಸಮಾಜವು ಹೆಣ್ಣುಮಕ್ಕಳನ್ನು ಬೇರೆಯೇ ಆಗಿ ನೋಡುತ್ತದೆ ಮತ್ತು ಇದನ್ನು ನಿವಾರಿಸುವ ಅಗತ್ಯವಿದೆ,ಆದರೆ ಇದಕ್ಕೆ ಸಮಯಾವಕಾಶ ಬೇಕಾಗುತ್ತದೆ ಎಂದರು.

ಜೀವನದ ಮೊದಲ 1000 ದಿನಗಳು ಮಗುವಿನ ಪಾಲಿಗೆ ಅತ್ಯಂತ ನಿರ್ಣಾಯಕವಾಗಿರುತ್ತವೆ. ಮಗು ಬದುಕುಳಿಯುವುದಕ್ಕೆ ಮಾತ್ರವಲ್ಲ,ದೈಹಿಕ ಮತ್ತು ಮಿದುಳಿನ ಬೆಳವಣಿಗೆ ಸೇರಿದಂತೆ ಅದರ ಸರ್ವಾಂಗೀಣ ಬೆಳವಣಿಗೆ ಈ ದಿನಗಳಲ್ಲಿ ಆಗುತ್ತದೆ. ಹೀಗಿರುವಾಗ ಹೆಣ್ಣುಮಕ್ಕಳ ವಿರುದ್ಧ ತಾರತಮ್ಯಕ್ಕೆ ಅವಕಾಶವಿರಬಾರದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News