ಗುಜರಾತ್ 216 ರನ್‌ಗೆ ಸರ್ವಪತನ

Update: 2018-12-14 18:07 GMT

ಸೂರತ್, ಡಿ.14: ಕರ್ನಾಟಕ ಬೌಲರ್‌ಗಳ ಸಂಘಟಿತ ದಾಳಿಗೆ ತತ್ತರಿಸಿದ ಗುಜರಾತ್ ತಂಡ ರಣಜಿ ಕ್ರಿಕೆಟ್‌ನ ‘ಎ’ ಗುಂಪಿನ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ 216 ರನ್ ಗಳಿಸಿ ಸರ್ವಪತನ ಕಂಡಿದೆ. ಗುಜರಾತ್‌ನ್ನು ಕಟ್ಟಿ ಹಾಕಿದ ಖುಷಿಯಲ್ಲಿ ಬ್ಯಾಟಿಂಗ್‌ಗೆ ಇಳಿದ ಕರ್ನಾಟಕ ಕೂಡ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿದೆ.

ಶುಕ್ರವಾರ ಇಲ್ಲಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಗುಜರಾತ್‌ಗೆ ಕಥನ್ ಪಟೇಲ್ ಹಾಗೂ ನಾಯಕ ಪ್ರಿಯಾಂಕ್ ಪಾಂಚಾಲ್ ಮೊದಲ ವಿಕೆಟ್‌ಗೆ 48 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. 13 ರನ್ ಗಳಿಸಿ ಕಥನ್ ಪಟೇಲ್ ಗೌತಮ್‌ಗೆ ವಿಕೆಟ್ ಒಪ್ಪಿಸಿದಾಗ ಪಾಂಚಾಲ್ ತಂಡವನ್ನು ಆಧರಿಸಿದರು. 134 ಎಸೆತಗಳನ್ನು ಎದುರಿಸಿದ ಅವರು, 8 ಬೌಂಡರಿ ಸಹಿತ 74 ರನ್ ಗಳಿಸಿ ಶ್ರೇಯಸ್ ಗೋಪಾಲ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಆನಂತರ ಗುಜರಾತ್ ಬ್ಯಾಟಿಂಗ್ ಹೆಚ್ಚು ಮಿನುಗಲೇ ಇಲ್ಲ. ಸ್ಪಿನ್ನರ್ ಪಿಯೂಷ್ ಚಾವ್ಲಾ(34) ಹಾಗೂ ಮೆಹುಲ್ ಪಟೇಲ್( ಅಜೇಯ 31) ಅಲ್ಪ ಕಾಣಿಕೆ ನೀಡಿದರು. ಗುಜರಾತ್ ಒಟ್ಟು 216 ರನ್ ಗಳಿಸಿ ಆಲೌಟ್ ಆಯಿತು.

ಕರ್ನಾಟಕದ ಪರ ವಿನಯ್ ಕುಮಾರ್, ಪ್ರತೀಕ್ ಜೈನ್, ರೋನಿತ್ ಮೋರೆ. ಕೆ.ಗೌತಮ್ ಹಾಗೂ ಶ್ರೇಯಸ್ ತಲಾ 2 ವಿಕೆಟ್ ಪಡೆದು ಸಾಂಘಿಕ ಪ್ರದರ್ಶನ ನೀಡಿದರು. ಪ್ರಥಮ ಇನಿಂಗ್ಸ್ ಆರಂಭಿಸಿದ ಕರ್ನಾಟಕಕ್ಕೆ ಮಾಯಾಂಕ್ ಅಗರ್ವಾಲ್(25) ಹಾಗೂ ದೇಗಾ ನಿಶ್ಚಲ್(12) ಉತ್ತಮ ಆರಂಭ ನೀಡಿದರೂ ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲರಾದರು. ಪ್ರಥಮ ದಿನದಾಟ ಕೊನೆಗೊಳ್ಳುವ ವೇಳೆ ಕರ್ನಾಟಕದ 2 ವಿಕೆಟ್ ಉರುಳಿದ್ದವು. ರವಿಕುಮಾರ್ ಸಮರ್ಥ್(7) ಕ್ರೀಸ್ ಕಾಯ್ದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್

►ಗುಜರಾತ್ ಪ್ರಥಮ ಇನಿಂಗ್ಸ್: 69.4 ಓವರ್‌ಗಳಲ್ಲಿ 216 ಆಲೌಟ್(ಪ್ರಿಯಾಂಕ್ 74, ಚಾವ್ಲಾ 34, ಮೆಹುಲ್ ಅಜೇಯ 31 ಶ್ರೇಯಸ್ 21ಕ್ಕೆ 2, ಪ್ರತೀಕ್ 28ಕ್ಕೆ 2)

 ►ಕರ್ನಾಟಕ ಪ್ರಥಮ ಇನಿಂಗ್ಸ್: 14.5 ಓವರ್‌ಗಳಲ್ಲಿ 45ಕ್ಕೆ 2 (ಅಗರ್ವಾಲ್ 25, ಅರ್ಝಾನ್ 9ಕ್ಕೆ 1, ಚಾವ್ಲಾ 1ಕ್ಕೆ 1)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News