ಭಾರತ ಸೋಲಿಗೆ ಕಳಪೆ ಅಂಪೈರಿಂಗ್ ಕಾರಣ

Update: 2018-12-14 18:13 GMT

ಕೋಚ್ ಹರೇಂದ್ರ ಆರೋಪ

ಭುವನೇಶ್ವರ, ಡಿ.14: ಭಾರತ ಹಾಕಿ ತಂಡ ಗುರುವಾರ ವಿಶ್ವಕಪ್‌ನ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಹಾಲೆಂಡ್‌ಗೆ1-2ರಿಂದ ಶರಣಾಗಿತ್ತು. ಭಾರತ ತಂಡದ ಸೋಲಿಗೆ ಕಳಪೆ ಅಂಪೈರಿಂಗ್ ಕಾರಣ ಎಂದು ಮುಖ್ಯ ಕೋಚ್ ಹರೇಂದ್ರ ಸಿಂಗ್ ಆರೋಪಿಸಿದ್ದಾರೆ.

ಈ ಕುರಿತು ಅಂತರ್‌ರಾಷ್ಟ್ರೀಯ ಹಾಕಿ ಫೆಡರೇಶನ್ ಗಂಭೀರ ಚರ್ಚೆ ನಡೆಸಬೇಕಿದೆ. ಯಾಕೆಂದರೆ ಈ ವರ್ಷವೊಂದರಲ್ಲೇ 2 ಬಾರಿ ನಮ್ಮ ತಂಡ ಕಳಪೆ ಅಂಪೈರಿಂಗ್‌ನ ಪರಿಣಾಮವನ್ನು ಅನುಭವಿಸಿದೆ ಎಂದು ಹೇಳಿದ್ದಾರೆ.

‘‘ಅಂಪೈರ್‌ಗಳ ಕಾರ್ಯನಿರ್ವಹಣೆ ಬಗ್ಗೆ ಮರುಪರಿಶೀಲಿಸಲು ಇದೊಂದು ಸಕಾಲವಾಗಿದೆ. ನಾನು ಕ್ಷಮೆ ಕೇಳಲು ಬಯಸುತ್ತೇನೆ. ನಾವು ನೀಡಬೇಕಾಗಿದ್ದಷ್ಟು ಪ್ರದರ್ಶನ ನೀಡಿಲ್ಲ. ಒಂದು ವೇಳೆ ಅವರು (ಅಂಪೈರ್‌ಗಳು) ತಮ್ಮ ಕಾರ್ಯನಿರ್ವಹಣೆಯನ್ನು ತಿದ್ದಿಕೊಳ್ಳದಿದ್ದಲ್ಲಿ ನಾವು ಈ ರೀತಿಯ ಫಲಿತಾಂಶಗಳನ್ನು ಎದುರಿಸಬೇಕಾಗುತ್ತದೆ’’ಎಂದು ಅವರು ನೋವಿನಿಂದ ಹೇಳಿದ್ದಾರೆ.

‘‘ಕಳಪೆ ಅಂಪೈರಿಂಗ್ ಕಾರಣದಿಂದಾಗಿ ಏಶ್ಯನ್ ಗೇಮ್ಸ್ ಹಾಗೂ ಸದ್ಯ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸೋಲು ಅನುಭವಿಸಬೇಕಾಯಿತು. ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ನಾವು ಏನೂ ತಪ್ಪು ಮಾಡದಿದ್ದರೂ ಎರಡು ಬಾರಿ ಹಳದಿ ಕಾರ್ಡ್ ಪಡೆಯಬೇಕಾಯಿತು. ಆದರೆ ಅವರು ತಪ್ಪು ಮಾಡಿದಾಗ (ಹಾಲೆಂಡ್ ತಂಡದ ಆಟಗಾರರು) ಅಂಪೈರ್‌ಗಳು ಏನನ್ನೂ ಹೇಳಲಿಲ್ಲ’’ ಎಂದು ಹರೇಂದ್ರ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News