ಗೋಹತ್ಯೆ ನಡೆಸುವವರ ವಿರುದ್ಧ ಗೂಂಡಾ, ರಾಷ್ಟ್ರೀಯ ಭದ್ರತಾ ಕಾಯ್ದೆ: ಉ.ಪ್ರದೇಶ ಪೊಲೀಸರ ಬೆದರಿಕೆ

Update: 2018-12-15 13:02 GMT

ಹೊಸದಿಲ್ಲಿ, ಡಿ.15: ಉತ್ತರ ಪ್ರದೇಶದ ಬುಲಂದ್ ‍ಶಹರ್ ನಲ್ಲಿ ಗೋಹತ್ಯೆ ವದಂತಿ ನಂತರ ಉಂಟಾದ ಹಿಂಸಾಚಾರದ ವೇಳೆ ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ಸಿಂಗ್ ರನ್ನು ಉದ್ರಿಕ್ತ ಗುಂಪು ಗುಂಡಿಕ್ಕಿ ಹತ್ಯೆಗೈದ ಘಟನೆ ನಡೆದು ಹಲವಾರು ದಿನಗಳೇ ಕಳೆದರೂ ಘಟನೆಯ ಪ್ರಮುಖ ಆರೋಪಿ ಬಜರಂಗದಳದ ಯೋಗೇಶ್ ರಾಜ್ ‍ನನ್ನು ಇನ್ನೂ ಬಂಧಿಸಿಲ್ಲ. ಆದರೆ ಪೊಲೀಸರು ಶುಕ್ರವಾರ ಗ್ರಾಮ ಸಭಾವೊಂದನ್ನು ನಡೆಸಿ “ಗೋ ಹತ್ಯೆಯಲ್ಲಿ ಭಾಗಿಯಾಗಿರುವವರಿಗೆ ಸಾಮಾಜಿಕ ಬಹಿಷ್ಕಾರ ಹೇರಲಾಗುವುದು ಅಥವಾ ಅಂತಹವರನ್ನು ಪೊಲೀಸರಿಗೆ ಒಪ್ಪಿಸಲಾಗುವುದು'' ಎಂದು ಗ್ರಾಮಸ್ಥರು ಪ್ರತಿಜ್ಞೆಗೈಯ್ಯುವಂತೆ ಮಾಡಿದ್ದಾರೆ.

ವೈರಲ್ ಆಗಿರುವ ಸಭೆಯ ವೀಡಿಯೋದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಗ್ರಾಮಸ್ಥರಿಗೆ ಪ್ರತಿಜ್ಞೆ ಬೋಧಿಸುತ್ತಿರುವುದು ಹಾಗೂ ಆತ ಹೇಳಿದಂತೆ ಗ್ರಾಮಸ್ಥರು ಪ್ರತಿಜ್ಞೆ ಮಾಡುತ್ತಿರುವುದೂ ಕಾಣಿಸುತ್ತದೆ.

“ಮೀರತ್ ಜಿಲ್ಲೆಯ ಪ್ರತಿ  ಗ್ರಾಮ ಮಟ್ಟದಲ್ಲಿ ಮುಖ್ಯವಾಗಿ ಗೋಹತ್ಯೆಗೆ ಕುಖ್ಯಾತವಾಗಿರುವ ಸುಮಾರು 20ಕ್ಕೂ ಅಧಿಕ ಗ್ರಾಮಗಳಲ್ಲಿ ಅಭಿಯಾನ ಆರಂಭಿಸಿದ್ದು, ಸ್ಥಳೀಯ ಪೊಲೀಸ್ ಠಾಣಾ ಸಿಬ್ಬಂದಿ ಗೋಹತ್ಯೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ, ಗ್ರಾಮಸ್ಥರು ಗೋಹತ್ಯೆಯ ವಿರುದ್ಧ ಪ್ರತಿಜ್ಞೆಗೈಯ್ಯುವಂತೆ ಮಾಡುವುದು ಇಂತಹ ಜಾಗೃತಿ ಕಾರ್ಯಕ್ರಮಗಳಲ್ಲೊಂದು''ಎಂದು ಮೀರತ್ ಎಸ್‍ಪಿ (ಗ್ರಾಮೀಣ) ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡುತ್ತಾ ತಿಳಿಸಿದ್ದಾರೆ.

``ಗೋಹತ್ಯೆ ನಡೆಸುವವರ ವಿರುದ್ಧ ಗೂಂಡಾ ಕಾಯಿದೆ ಹಾಗೂ ರಾಷ್ಟ್ರೀಯ ಭದ್ರತಾ ಕಾಯಿದೆಯನ್ವಯ ಪ್ರಕರಣ ದಾಖಲಿಸಲಾಗುವುದು, ಅವರ ಕುಟುಂಬ ಸದ್ಯರ ವಿರುದ್ಧವೂ ಪ್ರಕರಣ ದಾಖಲಿಸಿ ಜೈಲಿಗಟ್ಟಲಾಗುವುದು'' ಎಂದು ಕುಮಾರ್ ಎಚ್ಚರಿಸಿದ್ದಾರೆಂದು ವರದಿ ತಿಳಿಸಿದೆ. “ಗೋಹತ್ಯೆಯಿಂದ ಒಂದು ಸಮುದಾಯದ ಭಾವನೆಗೆ ನೋವಾಗಿದೆ. ಇದನ್ನು ನಿಲ್ಲಿಸಬೇಕಿದೆ'' ಎಂದೂ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News