ಆದಿತ್ಯನಾಥ್ ದ್ವೇಷ ಭಾಷಣ ಪ್ರಕರಣ: ದೂರುದಾರನ ವಿರುದ್ಧ ಎಫ್‍ಐಆರ್ ದಾಖಲಿಸಲು ಗೋರಖಪುರ್ ನ್ಯಾಯಾಲಯ ಆದೇಶ

Update: 2018-12-15 15:20 GMT

ಹೊಸದಿಲ್ಲಿ, ಡಿ.15: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಮಾಡಿದ್ದರೆನ್ನಲಾದ ದ್ವೇಷದ ಭಾಷಣದ ವಿರುದ್ಧ 2007ರಲ್ಲಿ ದೂರು ದಾಖಲಿಸಿದ್ದ ಸಾಮಾಜಿಕ ಕಾರ್ಯಕರ್ತ ಹಾಗೂ ಪತ್ರಕರ್ತ ಪರ್ವೇಝ್ ಪರ್ವಝ್ ಎಂಬವರ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಗೋರಖಪುರ ನ್ಯಾಯಾಲಯ ಆದೇಶಿಸಿದೆ.

ಬಿಜೆಪಿ ನಾಯಕ ವೈ.ಡಿ. ಸಿಂಗ್ ಎಂಬವರು 2016ರಲ್ಲಿ ದಾಖಲಿಸಿದ್ದ ಪ್ರಕರಣದ ವಿಚಾರಣೆಯನ್ನು ಶುಕ್ರವಾರ ನಡೆಸಿದ ನ್ಯಾಯಾಲಯ, ತಿರುಚಿದ ವಿಡಿಯೋ ದಾಖಲೆಯನ್ನು ಪ್ರಸ್ತುತಪಡಿಸಿದ್ದ ಪರ್ವೇಝ್ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಸೂಚಿಸಿದೆ.

ಆದಿತ್ಯನಾಥ್ ಅವರು ಗೋರಖಪುರ ಸಂಸದ ಹಾಗೂ ಹಿಂದೂ ಯುವ ವಾಹಿನಿ ನಾಯಕರಾಗಿದ್ದಾಗ ಅವರ ವಿರುದ್ಧ  ದೂರು ದಾಖಲಿಸಿದ್ದವರಲ್ಲಿ ಪರ್ವಝ್ ಒಬ್ಬರಾಗಿದ್ದರು. ಅವರು ತಮ್ಮ ದೂರಿನಲ್ಲಿ ಅಂದಿನ ಮೇಯರ್ ಅಂಜು ಚೌಧುರಿ, ಅಂದಿನ ಪರಿಷತ್ ಸದಸ್ಯ ವೈ.ಡಿ. ಸಿಂಗ್, ಹಾಲಿ ಗೋರಖಪುರ್ ಶಾಸಕ ರಾಧಾಮೋಹನದಾಸ್ ಅಗರ್ವಾಲ್ ಹಾಗೂ ಈಗಿನ ಸಹಾಯಕ ವಿತ್ತ ಸಚಿವ ಶಿವ್ ಪ್ರತಾಪ್ ಶುಕ್ಲ ಅವರನ್ನು ಕೂಡ ಹೆಸರಿಸಿದ್ದರು. ಗೋರಖಪುರದಲ್ಲಿ 2007ರಲ್ಲಿ ಮೊಹರಂ ಮೆರವಣಿಗೆಯ ಸಂದರ್ಭದ ಮತೀಯ ಹಿಂಸಾಚಾರದಲ್ಲಿ ಒಬ್ಬ ವ್ಯಕ್ತಿ ಸಾವಿಗೀಡಾದ ನಂತರ ಅಲ್ಲಿಗೆ ಭೇಟಿ ನೀಡಿದ್ದ ಆದಿತ್ಯನಾಥ್ ತಮ್ಮ ಭಾಷಣದಲ್ಲಿ  ಪ್ರತೀಕಾರಕ್ಕೆ ಕರೆ ನೀಡಿದ್ದರೆಂದು ಆರೋಪಿಸಲಾಗಿತ್ತು.

ಪ್ರಕರಣವನ್ನು ಸಿಐಡಿಗೆ ವಹಿಸಿದ ನಂತರ ಪರ್ವಝ್ ಸಾಕ್ಷಿಯ ರೂಪದಲ್ಲಿ ಡಿವಿಡಿ ಸಲ್ಲಿಸಿದ್ದರು. ಈ ಡಿವಿಡಿಯನ್ನು ಫೊರೆನ್ಸಿಕ್ ಪರೀಕ್ಷೆಗೆ ಅಕ್ಟೋಬರ್ 2014ರಲ್ಲಿ ಕಳುಹಿಸಿದಾಗ ಅದು ತಿರುಚಲ್ಪಟ್ಟಿದೆ ಎಂದು ವರದಿ ಬಂದಿತ್ತು. ಅದರ ಆಧಾರದಲ್ಲಿ ಸಿಐಡಿ ಅಂತಿಮ ವರದಿ ಸಲ್ಲಿಸಿದ್ದರೂ ಪರ್ವಝ್ ಅದನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು. ಆದರೆ ಹೈಕೋರ್ಟ್ ಅವರ ಅಪೀಲನ್ನು ತಿರಸ್ಕರಿಸಿತ್ತು.

ಆದಿತ್ಯನಾಥ್ ಅವರು 2017ರಲ್ಲಿ ಸಿಎಂ ಆಗಿ ಅಧಿಕಾರ ವಹಿಸುತ್ತಿದ್ದಂತೆಯೇ ಅವರು ಹಾಗೂ ಇತರರ ವಿರುದ್ಧದ ಪ್ರಕರಣ ಕೈಬಿಡಲಾಗಿತ್ತು. ಪರ್ವಝ್ ಸೆಪ್ಟೆಂಬರ್ ತಿಂಗಳಿನಿಂದ ಅತ್ಯಾಚಾರ ಪ್ರಕರಣವೊಂದರಲ್ಲಿ ಜೈಲಿನಲ್ಲಿದ್ದಾರೆ. ಆತನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಆತನ ಕುಟುಂಬ ಆರೋಪಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News