ಭಾರತದಲ್ಲಿ ಅಮೆಝಾನ್, ಫ್ಲಿಪ್‌ಕಾರ್ಟ್‌ಗೆ ಸೆಡ್ಡುಹೊಡೆಯಲು ಮುಂದಾದ ಗೂಗಲ್ !

Update: 2018-12-15 14:49 GMT

ಗ್ರಾಹಕರು ತಮಗೆ ಬೇಕಾದ ವಸ್ತುಗಳನ್ನು ಹುಡುಕುವ ಶೋಧ ಕಾರ್ಯವನ್ನು ಸುಲಭಗೊಳಿಸಲು ಗೂಗಲ್ ಭಾರತದಲ್ಲಿ ಹೊಸ ಶಾಪಿಂಗ್ ಸರ್ಚ್ ಇಂಜಿನ್ ಆರಂಭಿಸಿದ್ದು, ಇದು ವಿವಿಧ ವ್ಯಾಪಾರಿಗಳ ಉತ್ಪನ್ನಗಳನ್ನು ಮತ್ತು ಬೆಲೆಗಳನ್ನು ಹೋಲಿಸಿ ನೋಡಲು ಅವಕಾಶ ಕಲ್ಪಿಸಿದೆ. ಶಾಪಿಂಗ್ ಹೋಮ್‌ ಪೇಜ್, ಗೂಗಲ್ ಸರ್ಚ್‌ ನಲ್ಲಿ ಶಾಪಿಂಗ್ ಟ್ಯಾಬ್‌ ಗಳಂತಹ ಹಲವಾರು ಗೂಗಲ್ ಉತ್ಪನ್ನಗಳು ಮತ್ತು ಗೂಗಲ್ ಲೆನ್ಸ್ ಮೂಲಕ ಗ್ರಾಹಕರು ವೈಯಕ್ತಿಕ ಶಾಪಿಂಗ್ ಅನುಭವವನ್ನು ಪಡೆಯಬಹುದು. ವಿವಿಧ ವರ್ಗಗಳಲ್ಲಿ ಚಾಲ್ತಿಯಲ್ಲಿರುವ ಆಫರ್‌ಗಳನ್ನು ನೋಡಲು ಮತ್ತು ಅವುಗಳ ಬೆಲೆಗಳನ್ನು ಹೋಲಿಸಲು ಗ್ರಾಹಕರಿಗೆ ಸಾಧ್ಯವಾಗುತ್ತದೆ.

ಗೂಗಲ್‌ನ ನೂತನ ಶಾಪಿಂಗ್ ಸರ್ಚ್ ವೇದಿಕೆಯು ಫ್ಲಿಪ್‌ಕಾರ್ಟ್ ಮತ್ತು ಅಮಝಾನ್ ಸೇರಿದಂತೆ ಎಲ್ಲ ಇ-ಕಾಮರ್ಸ್ ರಿಟೇಲರ್‌ಗಳ ಯಾದಿಯನ್ನು ಹೊಂದಿರುತ್ತದೆ. ಇದು ಭಾರತದಲ್ಲಿ ಬೆಳೆಯುತ್ತಿರುವ ಇ-ಕಾಮರ್ಸ್ ಕ್ಷೇತ್ರಕ್ಕೆ ಗೂಗಲ್ ಪ್ರವೇಶದ ಪೀಠಿಕೆಯಾಗಿದೆ ಮತ್ತು ತನ್ಮೂಲಕ ಗೂಗಲ್ ಈ ಕ್ಷೇತ್ರದಲ್ಲಿಯ ಬಲಿಷ್ಠ ಕಂಪನಿಗಳಿಗೆ ನೇರ ಸ್ಪರ್ಧೆಯನ್ನೊಡ್ಡಲಿದೆ ಎಂಬ ಸುಳಿವನ್ನು ನೀಡಿದೆ.

 ಭಾರತದಲ್ಲಿ 40 ಕೋಟಿಗೂ ಅಧಿಕ ಇಂಟರ್ನೆಟ್ ಬಳಕೆದಾರರಿದ್ದಾರೆ. ಆದರೆ ಈ ಪೈಕಿ ಕೇವಲ ಮೂರನೇ ಒಂದರಷ್ಟು ಜನರು ಮಾತ್ರ ಆನ್‌ಲೈನ್‌ನಲ್ಲಿ ಶಾಪಿಂಗ್ ನಡೆಸಿದ್ದಾರೆ ಮತ್ತು ಇವರಲ್ಲಿ ಆನ್‌ಲೈನ್‌ನಲ್ಲಿ ರೈಲ್ವೆ ಟಿಕೆಟ್ ಖರೀದಿಸುವವರೂ ಸೇರಿದ್ದಾರೆ. ನುರಿತ ಡೆಸ್ಕ್‌ಟಾಪ್ ಬಳಕೆದಾರರಿಂದ ಹಿಡಿದು ಆರಂಭದ ಹಂತದ ಸ್ಮಾರ್ಟ್‌ಫೋನ್‌ನೊಂದಿಗೆ ಮೊದಲ ಬಾರಿಯ ಬಳಕೆದಾರರವರೆಗೂ ನೂತನ ಸರ್ಚ್ ಇಂಜಿನ್ ಸುಲಭ ಶಾಪಿಂಗ್ ಅನುಭವವನ್ನು ನೀಡಲಿದೆ ಎನ್ನುತ್ತಾರೆ ಗೂಗಲ್ ಉಪಾಧ್ಯಕ್ಷ(ಉತ್ಪನ್ನ ನಿರ್ವಹಣೆ) ಸುರೋಜಿತ್ ಚಟರ್ಜಿ.

ಗೂಗಲ್ ಶಾಪಿಂಗ್ ಏನು ಮಾಡುತ್ತದೆ?

ಗೂಗಲ್ ಶಾಪಿಂಗ್ ರಿಟೇಲರ್‌ಗಳು ಮತ್ತು ಬಳಕೆದಾರರನ್ನು ಒಂದೇ ವೇದಿಕೆಗೆ ತರುತ್ತದೆ ಮತ್ತು ವಹಿವಾಟು ಹಾಗೂ ಉತ್ಪನ್ನಗಳ ಪೂರೈಕೆಯನ್ನು ವ್ಯಾಪಾರಿಯೇ ನಿರ್ವಹಿಸುತ್ತಾನೆ. ಆದರೆ ಈ ಸರ್ಚ್ ಇಂಜಿನ್ ವ್ಯಾಪಾರಿಗಳ ಉತ್ಪನ್ನಗಳನ್ನು ತನ್ನ ವೇದಿಕೆಯಲ್ಲಿ ಪಟ್ಟಿ ಮಾಡಿದ್ದಕ್ಕೆ ಅವರಿಂದ ಯಾವುದೇ ಶುಲ್ಕವನ್ನು ಪಡೆಯುವುದಿಲ್ಲ.

ಸ್ಟೈಲ್ ಸರ್ಚ್

ಗೂಗಲ್ ಶಾಪಿಂಗ್ ಗೂಗಲ್ ಲೆನ್ಸ್‌ನಲ್ಲಿ ‘ಸ್ಟೈಲ್ ಸರ್ಚ್’ ಆಯ್ಕೆಯನ್ನೂ ನೀಡುತ್ತದೆ ಮತ್ತು ಇದು ಗ್ರಾಹಕರು ಕೇವಲ ತಮ್ಮ ಸ್ಮಾರ್ಟ್‌ಫೋನ್‌ಗಳಿಂದ ಲೆನ್ಸ್ ಆ್ಯಪ್‌ನ್ನು ಪಾಯಿಂಟ್ ಮಾಡುವ ಮೂಲಕ ಉಡುಪುಗಳು,ಪೀಠೋಪಕರಣಗಳು ಸೇರಿದಂತೆ ಎಲ್ಲ ಉತ್ಪನ್ನಗಳನ್ನು ಸುಲಭವಾಗಿ ಟ್ರಾಕ್ ಮಾಡಬಹುದು.

ಹಿಂದಿಯಲ್ಲಿ ‘ಮರ್ಚಂಟ್ ಸೆಂಟರ್’

ಗೂಗಲ್ ಶಾಪಿಂಗ್ ವ್ಯಾಪಾರಿಗಳಿಗಾಗಿ ಹಿಂದಿಯಲ್ಲಿ ‘ಮರ್ಚಂಟ್ ಸೆಂಟರ್’ನ್ನೂ ಒದಗಿಸಿದೆ. ಮಾರಾಟಗಾರರು ಗೂಗಲ್‌ಗೆ ಜಾಹೀರಾತು ಶುಲ್ಕಗಳನ್ನು ಪಾವತಿಸದೆ ತಮ್ಮ ಉತ್ಪನ್ನಗಳನ್ನು ಗೂಗಲ್ ಶಾಪಿಂಗ್‌ನಲ್ಲಿ ನಮೂದಿಸಬಹುದು.

ಈ ಶಾಪಿಂಗ್ ಪ್ಲಾಟ್‌ಫಾರ್ಮ್ ಭವಿಷ್ಯದಲ್ಲಿ ಎಂಟ್ರಿ ಲೆವೆಲ್ ಫೋನ್ ಬಳಕೆದಾರರಿಗೂ ದೊರೆಯಬಹುದು ಎಂದು ಗೂಗಲ್ ಹೇಳಿದೆ.

ಭಾರತದಲ್ಲಿ ಸುಮಾರು 580 ಲಕ್ಷ ಸಣ್ಣ ಮತ್ತು ಮಧ್ಯಮ ಉದ್ಯಮಗಳಿದ್ದು,ಈ ಪೈಕಿ ಶೇ.35ರಷ್ಟು ಚಿಲ್ಲರೆ ವ್ಯಾಪಾರದಲ್ಲಿ ತೊಡಗಿಕೊಂಡಿವೆ. ಆದರೆ ಇವರಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ವ್ಯಾಪಾರಿಗಳು ಆನ್‌ಲೈನ್‌ನಲ್ಲಿ ಅಸ್ತಿತ್ವವನ್ನು ಹೊಂದಿದ್ದಾರೆ. ತಮ್ಮ ಉತ್ಪನ್ನಗಳನ್ನು ಮಿಲಿಯಗಟ್ಟಲೆ ಆನ್‌ಲೈನ್ ಬಳಕೆದಾರರ ಮುಂದಿಡಲು ಈ ಇಂಜಿನ್ ಚಿಲ್ಲರೆ ವ್ಯಾಪಾರಿಗಳಿಗೆ ಬೃಹತ್ ಅವಕಾಶವನ್ನು ಒದಗಿಸುತ್ತಿದೆ ಎಂದು ಗೂಗಲ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News