ಕ್ಯಾಲ್ಸಿಯಂ ಕೊರತೆಯ ಲಕ್ಷಣಗಳು ಯಾವುದು ಗೊತ್ತಾ?

Update: 2018-12-15 15:12 GMT

ಇಂದು ಸಾಮಾನ್ಯವಾಗಿ ಹೆಚ್ಚಿನವರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಹೊಂದಿದ್ದು,ಸೂಕ್ತ ಆಹಾರಕ್ರಮವನ್ನು ಅನುಸರಿಸುವುದರೊಡನೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಾರೆ. ಇಂತಹ ತಪಾಸಣೆಯಲ್ಲಿ ರಕ್ತದಲ್ಲಿ ಗ್ಲುಕೋಸ್ ಮಟ್ಟ ಮತ್ತು ಥೈರಾಯ್ಡ್ ಪರೀಕ್ಷೆಗಳು ಒಳಗೊಂಡಿರುತ್ತವೆ. ಈಗೀಗ ವೈದ್ಯರು ಕ್ಯಾಲ್ಸಿಯಂ ಪರೀಕ್ಷೆಯನ್ನೂ ಮಾಡಿಸಿಕೊಳ್ಳುವಂತೆ ಸೂಚಿಸುತ್ತಿದ್ದಾರೆ.

ಕ್ಯಾಲ್ಸಿಯಂ ಕಡಿಮೆಯಿರುವ ಆಹಾರ ಸೇವನೆ ಮತ್ತು ನಿಯಮಿತ ವ್ಯಾಯಾಮ ಮಾಡದಿರುವುದರಿಂದ ಶರೀರದಲ್ಲಿ ಕ್ಯಾಲ್ಸಿಯಂ ಕೊರತೆಯುಂಟಾಗುವ ಅಪಾಯವಿರುತ್ತದೆ. ಪುರಸೊತ್ತಿಲ್ಲದ ಕಾರ್ಯಭಾರ ಮತ್ತು ಸುದೀರ್ಘ ದುಡಿಮೆಯ ಅವಧಿಯಿಂದಾಗಿ ಇದು ಇನ್ನಷ್ಟು ಹೆಚ್ಚಬಹುದು.

ಕ್ಯಾಲ್ಸಿಯಂ ಕೊರತೆಯ ಲಕ್ಷಣಗಳು

ಆಹಾರದಲ್ಲಿ ಪೌಷ್ಟಿಕಾಂಶಗಳ ಕೊರತೆ,ಹೆಚ್ಚಿನ ದೈಹಿಕ ಚಟುವಟಿಕೆ ಇಲ್ಲದಿರುವುದು ಮತ್ತು ಹೊತ್ತುಗೊತ್ತಿಲ್ಲದೆ ಕೆಲಸ ಇವುಗಳಿಂದಾಗಿ ಪೌಷ್ಟಿಕಾಂಶಗಳ ಕೊರತೆಯನ್ನು ಸೂಚಿಸಬಹುದಾದ ಶರೀರದಲ್ಲಿಯ ಕಿರು ಬದಲಾವಣೆಗಳನ್ನು ನಾವು ನಿರ್ಲಕ್ಷಿಸುವುದೇ ಹೆಚ್ಚು. ಉಗುರುಗಳು ಸುಲಭವಾಗಿ ಬಿರುಕು ಬಿಡುವುದು,ಕೂದಲು ಒರಟಾಗುವುದು, ಚರ್ಮವು ಒಳಗಿ ಹಪ್ಪಳೆಗಳು ಉಂಟಾಗುವುದು ಮತ್ತು ಸ್ನಾಯುಗಳಲ್ಲಿ ಸೆಳೆತ ಇವು ಕ್ಯಾಲ್ಸಿಯಂ ಕೊರತೆಯ ಲಕ್ಷಣಗಳಾಗಿರಬಹುದು. ಕ್ಯಾಲ್ಸಿಯಂ ಕೊರತೆಯು ಮರೆಗುಳಿತನ,ಗೊಂದಲ,ಖಿನ್ನತೆ ಮತ್ತು ಭ್ರಮೆಗಳಿಗೂ ಕಾರಣವಾಗಬಹುದು.

ಕ್ಯಾಲ್ಸಿಯಂ ಮಟ್ಟ ಕಡಿಮೆಯಾಗಲು ಕಾರಣಗಳು

ರಕ್ತದಲ್ಲಿ ಕ್ಯಾಲ್ಸಿಯಂ ಮಟ್ಟ ಕಡಿಮೆಯಾದಾಗ ಆ ಸ್ಥಿತಿಯನ್ನು ಹೈಪೊಕ್ಯಾಲ್ಸಿಮಿಯಾ ಎಂದು ಕರೆಯಲಾಗುತ್ತದೆ. ಕ್ಯಾಲ್ಸಿಯಂ ಕೊರತೆಯಿರುವ ಆಹಾರ ಸೇವನೆ, ಪ್ಯಾರಾಥೈರಾಯ್ಡಾ ಗ್ರಂಥಿಯ ಕಾರ್ಯಕ್ಷಮತೆಯನ್ನು ಕುಂಠಿಸುವ ಹೈಪೊಪ್ಯಾರಾಥೈರಾಯ್ಡಿಸಂ,ಮೂತ್ರಪಿಂಡ ವೈಫಲ್ಯ,ಮೇದೋಜ್ಜೀರಕ ಗ್ರಂಥಿಯ ಉರಿಯೂತವನ್ನುಂಟು ಮಾಡುವ ಪ್ಯಾಂಕ್ರಿಯಾಟಿಟಿಸ್, ಕಾರ್ಟಿಕೊಸ್ಟಿರಾಯ್ಡಿಗಳು ಮತ್ತು ರಿಫಾಮ್‌ಪಿಸಿನ್‌ನಂತಹ ಕೆಲವು ಔಷಧಿಗಳು,ಅಲ್ಬುಮಿನ್ ಮಟ್ಟ ಕುಸಿಯಲು ಕಾರಣವಾಗುವ ಯಕೃತ್ತಿನ ಕಾಯಲೆಗಳು ಹೈಪೊಕ್ಯಾಲ್ಸಿಮಿಯಾವನ್ನುಂಟು ಮಾಡುತ್ತವೆ.

ಕ್ಯಾಲ್ಸಿಯಂ ಪರೀಕೆಯನ್ನೇಕೆ ಮಾಡಿಸಬೇಕು?

ರಕ್ತದಲ್ಲಿಯ ಕ್ಯಾಲ್ಸಿಯಂ ಮಟ್ಟವನ್ನು ತಿಳಿದುಕೊಳ್ಳಲು ಈ ಪರೀಕ್ಷೆಯನ್ನು ಮಾಡಲಾಗುತ್ತದೆ. ಕ್ಯಾಲ್ಸಿಯಂ ಮೂಳೆಗಳು ಮತ್ತು ಹಲ್ಲುಗಳ ಆರೋಗ್ಯವನ್ನು ಕಾಯ್ದುಕೊಳ್ಳಲು ಅಗತ್ಯವಾಗಿರುವ ಮಹತ್ವದ ಖನಿಜವಾಗಿದೆ. ರಕ್ತದಲ್ಲಿ ಕ್ಯಾಲ್ಸಿಯಂ ಕೊರತೆಯುಂಟಾದರೆ ಅದು ನಮ್ಮನ್ನು ಮೂಳೆ ಮುರಿತ ಮತ್ತು ಅಸ್ಥಿರಂಧ್ರತೆಯ ಅಪಾಯಗಳಿಗೆ ಗುರಿಯಾಗಿಸಬಹುದು. ಸ್ನಾಯುಗಳು,ನರಗಳು ಮತ್ತು ಹೃದಯದ ಸೂಕ್ತ ಕಾರ್ಯ ನಿರ್ವಹಣೆಗೂ ಕ್ಯಾಲ್ಸಿಯಂ ಅಗತ್ಯವಾಗಿದೆ. ಹೀಗಾಗಿ ನಿಮ್ಮ ಶರೀರದಲ್ಲಿ ಕ್ಯಾಲ್ಸಿಯಂ ಕೊರತೆಯಿದೆ ಎಂದು ವೈದ್ಯರು ಶಂಕಿಸಿದರೆ ಅಥವಾ ನಿಮ್ಮಲ್ಲಿ ಕ್ಯಾಲ್ಸಿಯಂ ಕೊರತೆಯ ಲಕ್ಷಣಗಳಿದ್ದರೆ ಕ್ಯಾಲ್ಸಿಯಂ ಪರೀಕ್ಷೆಯನ್ನು ಮಾಡಿಸಿಕೊಳ್ಳಲು ಅವರು ಸೂಚಿಸಬಹುದು.

ಕ್ಯಾಲ್ಸಿಯಂ ಮಟ್ಟ ಕಡಿಮೆಯಿದ್ದರೆ ನೀವೇನು ಮಾಡಬೇಕು?

ಇಂತಹ ಸಂದರ್ಭದಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವಂತೆ ನಿಮ್ಮ ವೈದ್ಯರು ಸೂಚಿಸಬಹುದು. ಕೊರತೆಯು ತೀವ್ರವಾಗಿದ್ದರೆ ಕ್ಯಾಲ್ಸಿಯಂ ಪೂರಕಗಳೂ ಅಗತ್ಯವಾಗಬಹುದು. ಈ ಪೂರಕಗಳನ್ನು ವೈದ್ಯರ ಸಲಹೆಯ ಮೇರೆಗೇ ಸೇವಿಸಬೇಕು ಎನ್ನುವುದು ನೆನಪಿರಲಿ.

ರಕ್ತದಲ್ಲಿ ಕ್ಯಾಲ್ಸಿಯಂ ಮಟ್ಟ ಹೆಚ್ಚಾಗಿದ್ದರೆ ಹಾನಿಕಾರಕವೇ?

ಕ್ಯಾಲ್ಸಿಯಂ ಪರೀಕ್ಷೆಯಿಂದ ರಕ್ತದಲ್ಲಿ ಕ್ಯಾಲ್ಸಿಯಂ ಮಟ್ಟ ಹೆಚ್ಚಾಗಿದೆಯೇ ಎನ್ನುವುದೂ ಗೊತ್ತಾಗುತ್ತದೆ. ರಕ್ತದಲ್ಲಿ ಕ್ಯಾಲ್ಸಿಯಂ ಮಟ್ಟ ಅಧಿಕವಾಗಿರುವ ಸ್ಥಿತಿಯನ್ನು ಹೈಪರ್‌ಕ್ಯಾಲ್ಸಿಮಿಯಾ ಎಂದು ಕರೆಯಲಾಗುತ್ತದೆ. ದಣಿವು ಅಥವಾ ನಿಶ್ಶಕ್ತಿ,ಹಸಿವು ಕ್ಷೀಣಗೊಳ್ಳುವುದು,ವಾಕರಿಕೆ ಅಥವಾ ವಾಂತಿಯಾಗುತ್ತಿದೆ ಎಂಬ ಭಾವನೆ,ಹೊಟ್ಟೆನೋವು,ಪದೇಪದೇ ಮೂತ್ರವಿಸರ್ಜನೆ,ಮಲಬದ್ಧತೆ,ಅತಿಯಾದ ಬಾಯಾರಿಕೆ ಮತ್ತು ಮೂಳೆಗಳಲ್ಲಿ ನೋವು ಇವು ಹೈಪರ್‌ಕ್ಯಾಲ್ಸಿಮಿಯಾದ ಸಾಮಾನ್ಯ ಲಕ್ಷಣಗಳಾಗಿವೆ.

ಪ್ಯಾರಾಥೈರಾಯ್ಡ್ ಗ್ರಂಥಿಯನ್ನು ಅತಿಯಾಗಿ ಕ್ರಿಯಾಶೀಲಗೊಳಿಸುವ ಪ್ರೈಮರಿ ಹೈಪರ್‌ಪ್ಯಾರಾಥೈರಾಯ್ಡಿಸಂ, ಥೈರಾಯ್ಡ್ ಗ್ರಂಥಿಯ ಅತಿಯಾದ ಚಟುವಟಿಕೆಗಳಿಗೆ ಕಾರಣವಾಗುವ ಹೈಪರ್‌ಥೈರಾಯ್ಡಿಸಂ, ಸಾರ್ಕೊಯ್ಡಿಸಿಸ್‌ನಂತಹ ಉರಿಯೂತದ ಕಾಯಿಲೆಗಳು,ಲಿಥಿಯಂ ಮತ್ತು ಥಯಾಝೈಡ್ ಮೂತ್ರವರ್ಧಕ ಗಳಂತಹ ಕೆಲವು ಔಷಧಿಗಳು,ಕ್ಯಾಲ್ಸಿಯಂ ಅಥವಾ ವಿಟಾಮಿನ್ ಡಿ ಪೂರಕಗಳ ಅತಿಯಾದ ಸೇವನೆ ಇವು ಹೈಪರ್‌ಕ್ಯಾಲ್ಸಿಮಿಯಾವನ್ನುಂಟು ಮಾಡುತ್ತವೆ.

ನಿಮ್ಮ ರಕ್ತದಲ್ಲಿ ಕ್ಯಾಲ್ಸಿಯಂ ಮಟ್ಟ ಹೆಚ್ಚಾಗಿದ್ದರೆ ಕ್ಯಾಲ್ಸಿಯಂ ಕಡಿಮೆಯಿರುವ ಆಹಾರಗಳನ್ನು ಸೇವಿಸುವಂತೆ ವೈದ್ಯರು ನಿಮಗೆ ಸೂಚಿಸಬಹುದು. ಶರೀರದಲ್ಲಿಯ ಹೆಚ್ಚಿನ ಕ್ಯಾಲ್ಸಿಯಂ ಅನ್ನು ಹೊರಹಾಕಲು ನೀವು ದ್ರವಪದಾರ್ಥಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕಾಗುತ್ತದೆ. ಕ್ಯಾಲ್ಸಿಯಂ ಮಟ್ಟವನ್ನು ತಗ್ಗಿಸುವ ಕೆಲವು ಔಷಧಿಗಳನ್ನೂ ವೈದ್ಯರು ನಿಮಗೆ ಸೂಚಿಸಬಹುದು.

 ಹೀಗೆ ಕ್ಯಾಲ್ಸಿಯಂ ಪರೀಕ್ಷೆಯನ್ನು ಮಾಡಿಸುವುದರಿಂದ ಮೂಳೆಗಳು,ಹೃದಯ,ನರಗಳು,ಮೂತ್ರಪಿಂಡ ಮತ್ತು ಹಲ್ಲುಗಳಿಗೆ ಸಂಬಂಧಿಸಿದ ಯಾವುದೇ ಸ್ಥಿತಿಯನ್ನು ತಿಳಿದುಕೊಳ್ಳಲು ನಿಮಗೆ ನೆರವಾಗುತ್ತದೆ. ವಯಸ್ಸಾಗುತ್ತ ಹೋದಂತೆ ವ್ಯಕ್ತಿಯ ಮೂಳೆಗಳು ದುರ್ಬಲಗೊಳ್ಳುತ್ತವೆ ಮತ್ತು ಮುರಿತ ಹಾಗೂ ಅಸ್ಥಿರಂಧ್ರತೆಗೆ ಗುರಿಯಾಗುವ ಅಪಾಯವು ಹೆಚ್ಚುತ್ತದೆ. ಆದ್ದರಿಂದ ಮೂಳೆಗಳ ಸದೃಢತೆ ಮತ್ತು ಸಾಂದ್ರತೆಯನ್ನು ಕಾಯ್ದುಕೊಳ್ಳಲು ನಮ್ಮ ರಕ್ತದಲ್ಲಿ ಸಾಕಷ್ಟು ಕ್ಯಾಲ್ಸಿಯಂ ಇರುವಂತೆ ನೋಡಿಕೊಳ್ಳುವುದು ಮುಖ್ಯವಾಗುತ್ತದೆ. ಅತಿಯಾದ ಕ್ಯಾಲ್ಸಿಯಂ ಮಟ್ಟವೂ ಹಾನಿಯನ್ನುಂಟು ಮಾಡುವುದರಿಂದ ಅದನ್ನು ನಿಯಂತ್ರಿಸಲೂ ನಿಯಮಿತವಾಗಿ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಅಗತ್ಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News