ಹಾಕಿ ವಿಶ್ವಕಪ್‌: ರೋಚಕ ಪೈಪೋಟಿಯಲ್ಲಿ ಹಾಲೆಂಡ್ ಫೈನಲ್‌ಗೆ

Update: 2018-12-15 15:34 GMT

ಭುವನೇಶ್ವರ, ಡಿ.15: ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸಿದ ಪುರುಷರ ಹಾಕಿ ವಿಶ್ವಕಪ್‌ನ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಹಾಲೆಂಡ್ ತಂಡ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ತಂಡವನ್ನು ‘‘ಪೆನಾಲ್ಟಿ ಶೂಟೌಟ್’ರೌಂಡ್‌ನಲ್ಲಿ ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಕಳಿಂಗ ಸ್ಟೇಡಿಯಂನಲ್ಲಿ ಶನಿವಾರ ಉಭಯ ತಂಡಗಳ ನಡುವಿನ ನಿಗದಿತ 60 ನಿಮಿಷಗಳ ಪಂದ್ಯ 2-2 ರಿಂದ ಡ್ರಾಗೊಂಡಿತು. ಆಗ ಫಲಿತಾಂಶ ನಿರ್ಧರಿಸಲು ‘ಪೆನಾಲ್ಟಿ ಶೂಟೌಟ್’ ಮೊರೆ ಹೋಗಲಾಯಿತು. ಶೂಟೌಟ್ ಸುತ್ತಿನಲ್ಲೂ ಎರಡೂ ತಂಡಗಳು 3-3 ರಿಂದ ಸಮಬಲ ಸಾಧಿಸಿದವು. ಆಗ ಅನಿವಾರ್ಯವಾಗಿ ‘ಸಡನ್‌ಡೆತ್’ ರೌಂಡ್‌ಗೆ ಮೊರೆ ಹೋಗಲಾಯಿತು. ಸಡನ್‌ಡೆತ್ ರೌಂಡ್‌ನಲ್ಲಿ ಹಾಲೆಂಡ್‌ನ ಹೆರ್ಟ್‌ಬರ್ಗರ್ ತನ್ನ ಮೊದಲ ಯತ್ನದಲ್ಲೇ ಗೋಲು ಗಳಿಸಿದರು. ಆದರೆ, ಆಸ್ಟ್ರೇಲಿಯದ ಡೇನಿಯಲ್ ಬೇಲ್ ಗೋಲು ಗಳಿಸಲು ವಿಫಲರಾದರು. ಹೀಗಾಗಿ ಹಾಲೆಂಡ್ ವಿಜಯಿ ಎಂದು ನಿರ್ಧರಿಸಲಾಯಿತು.

2010 ಹಾಗೂ 2014ರ ವಿಶ್ವಕಪ್‌ನಲ್ಲಿ ಚಾಂಪಿಯನ್ ಕಿರೀಟ ಧರಿಸಿದ್ದ ಆಸ್ಟ್ರೇಲಿಯ ಈ ಬಾರಿ ಹ್ಯಾಟ್ರಿಕ್ ಪ್ರಶಸ್ತಿ ಕನಸಿನೊಂದಿಗೆ ಸೆಮಿ ಫೈನಲ್ ಪ್ರವೇಶಿಸಿತ್ತು. ಕೊನೆಯ ತನಕ ಹೋರಾಟ ನೀಡಿ ವೀರೋಚಿತ ಸೋಲನುಭವಿಸಿತು.

ವಿಶ್ವದ ನಂ.4ನೇ ತಂಡ ಹಾಲೆಂಡ್ ಈ ಹಿಂದೆ ಮೂರು ಬಾರಿ ವಿಶ್ವಕಪನ್ನು ಜಯಿಸಿದ್ದು 1998ರಲ್ಲಿ ಕೊನೆಯ ಬಾರಿ ವಿಶ್ವಕಪನ್ನು ಎತ್ತಿ ಹಿಡಿದಿತ್ತು. ರವಿವಾರ ನಡೆಯಲಿರುವ ಫೈನಲ್‌ನಲ್ಲಿ ಬೆಲ್ಜಿಯಂ ತಂಡವನ್ನು ಎದುರಿಸಲಿರುವ ಡಚ್ಚರು 20 ವರ್ಷಗಳ ಪ್ರಶಸ್ತಿ ಬರವನ್ನು ನೀಗಿಸಿಕೊಳ್ಳುವ ವಿಶ್ವಾಸದಲ್ಲಿದೆ.

 ರೋಚಕ ಪಂದ್ಯದಲ್ಲಿ ಹಾಲೆಂಡ್‌ನ ಪರ ಗ್ಲೆನ್ ಶುರ್ಮೆನ್(9ನೇ ನಿಮಿಷ) ಹಾಗೂ ಸೆವ್ ವ್ಯಾನ್(20ನೇ ನಿ.)ತಲಾ ಒಂದು ಗೋಲು ಗಳಿಸಿದರು. ಆಸ್ಟ್ರೇಲಿಯ 44ನೇ ಹಾಗೂ 60ನೇ ನಿಮಿಷದಲ್ಲಿ ಗೋಲು ಗಳಿಸಿ ಪಂದ್ಯವನ್ನು ರೋಚಕ ಡ್ರಾಗೊಳಿಸಿತು. ಕೊನೆಯ ನಿಮಿಷದ ತನಕ 2-1 ಮುನ್ನಡೆಯಲ್ಲಿದ್ದ ಹಾಲೆಂಡ್ ಪಂದ್ಯ ಗೆಲ್ಲುವ ಫೇವರಿಟ್ ತಂಡವಾಗಿತ್ತು. ಆದರೆ, ಆಸ್ಟ್ರೇಲಿಯ ಕೊನೆಯ ಕ್ಷಣದಲ್ಲಿ ಗೋಲು ಗಳಿಸಿ ಪಂದ್ಯವನ್ನು ಶೂಟೌಟ್ ಹಂತಕ್ಕೆ ವಿಸ್ತರಿಸಿತು.

ಶೂಟೌಟ್ ಸುತ್ತಿನಲ್ಲಿ ಎದುರಾಳಿ ತಂಡಕ್ಕೆ ಗೋಲುಗಳನ್ನು ನಿರಾಕರಿಸಿದ ಹಾಲೆಂಡ್‌ನ ಗೋಲ್‌ಕೀಪರ್ ಪಿರ್ಮಿನ್ ಬ್ಲಾಕ್ ಪಂದ್ಯಶ್ರೇಷ್ಠ ಗೌರವ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News