ಸಂಶೋಧನೆಗಳು ವಿಶ್ವವಿದ್ಯಾನಿಲಯಗಳ ಬೆನ್ನೆಲುಬು: ಫೈಝಲ್ ಇ.ಕೊಟ್ಟಿಕೊಲ್ಲೊನ್

Update: 2018-12-15 16:19 GMT

ಮಣಿಪಾಲ, ಡಿ.15: ದೇಶದ ಅಭಿವೃದ್ಧಿಗೆ ವಿಶ್ವವಿದ್ಯಾನಿಲಯಗಳು ತಳಹದಿಯಾದರೆ, ವಿಶ್ವವಿದ್ಯಾನಿಲಯಗಳ ಬೆನ್ನೆಲುಬು ಅಲ್ಲಿ ನಡೆಯುವ ಸಂಶೋಧನೆ ಗಳಾಗಿವೆ. ಈ ನಿಟ್ಟಿನಲ್ಲಿ ಸಂಶೋಧನೆಗಳಿಗೆ ಹೆಚ್ಚಿನ ಪ್ರಾತಿನಿಧ್ಯತೆಗಳನ್ನು ನೀಡಬೇಕು ಎಂದು ಯುಎಇಯ ಕೆಇಎಫ್ ಹೋಲ್ಡಿಂಗ್ಸ್‌ನ ಸ್ಥಾಪಕ ಮತ್ತು ಚೇಯರ್‌ ಮ್ಯಾನ್ ಫೈಝಲ್ ಇ. ಕೊಟ್ಟಿಕೊಲ್ಲೊನ್ ಹೇಳಿದ್ದಾರೆ.

ಮಣಿಪಾಲ ಎಂಐಟಿಯ ಅಕಾಡೆಮಿಕ್ ಬ್ಲಾಕ್ 2ರ ಸಮೀಪ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಂಶೋಧನೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಾಹೆ ಹಾಗೂ ಫೈಝಲ್ ಆ್ಯಂಡ್ ಶಬಾನಾ ಫೌಂಡೇಶನ್ ಸಹಭಾಗಿತ್ವದಲ್ಲಿ ನಿರ್ಮಿಸಲಾದ ಎಂಐಟಿ-ಕೆಇಎಫ್ ರಿಸರ್ಚ್ ಆ್ಯಂಡ್ ಡೆವಲಪ್‌ಮೆಂಟ್ ಸೆಂಟರನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಫ್ಯಾಕ್ಟರಿಯಲ್ಲಿ ಕಟ್ಟಡ ಬಿಡಿಭಾಗಗಳನ್ನು ವಿನ್ಯಾಸಗೊಳಿಸಿ ಉತ್ಪಾದಿಸುವುದು ನಮ್ಮ ತಂತ್ರಜ್ಞಾನದ ಪರಿಕಲ್ಪನೆಯಾಗಿದೆ. ಈ ಉದ್ಯಮದಲ್ಲಿ ನಾವು ರೋಬೋಟಿಕ್‌ನ್ನು ಕೂಡ ಪರಿಚಯಿಸಿದ್ದೇವೆ. ಎಂಐಟಿಯ ಪ್ರಾಧ್ಯಾಪಕರು ಮತ್ತು ನಮ್ಮ ತಂಡವನ್ನು ಬಳಸಿ ನಮ್ಮ ಪರಿಕಲ್ಪನೆಯನ್ನು ಸಾಕಾರಗೊಳಿಸುವ ದೊಡ್ಡ ಅವಕಾಶ ನನಗಿಲ್ಲಿ ದೊರೆತಿದೆ ಎಂದು ಅವರು ಹೇಳಿದರು.

ವಿಮಾನ ಮತ್ತು ಕಾರುಗಳನ್ನು ಬಿಡಿಭಾಗಗಳ ಮೂಲಕ ಜೋಡಿಸಿ ತಯಾರಿಸುವುದಾದರೆ ಕಟ್ಟಡವನ್ನು ಯಾಕೆ ಮಾಡಬಾರದೆಂಬುದು ನನ್ನ ಮೂಲ ಚಿಂತನೆಯಾಗಿದೆ. ಇದರಿಂದ ವೇಗವಾಗಿ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಬಹುದಾಗಿದೆ. 50 ಸಾವಿರ ಚದರ ಅಡಿ ವಿಸ್ತೀರ್ಣದ ಈ ಸಂಶೋಧನಾ ಕೇಂದ್ರದ ಕಟ್ಟಡವನ್ನು ಬಿಡಿಭಾಗಗಳನ್ನು ವಿನ್ಯಾಸಗೊಳಿಸಿ ಉತ್ಪಾದಿಸಿದ ಕೇವಲ ಎರಡೇ ತಿಂಗಳಲ್ಲಿ ನಾವಿದನ್ನು ನಿರ್ಮಿಸಿದ್ದೇವೆ ಎಂದು ಅವರು ತಿಳಿಸಿದರು.

ಈ ಕೇಂದ್ರವು ವಿದ್ಯಾರ್ಥಿಗಳಿಗೆ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಹೊಸ ಹೊಸ ಸಂಶೋಧನೆಗೆ ಅವಕಾಶ ಮಾಡಿಕೊಡಲಿದೆ. ಕಟ್ಟಡದ ಬಿಡಿಭಾಗಗಳನ್ನು ತಯಾರಿಸಿ ಜೋಡಿಸುವ ತಂತ್ರಜ್ಞಾನ ಕಲಿಯಲು ಸಾಧ್ಯವಾಗುತ್ತದೆ. ಸಿವಿಲ್, ಆರ್ಕಿಟೆಕ್ಟ್, ರೋಬೊಟಿಕ್ಸ್, ಮೆಕ್ಯಾನಿಕಲ್ ಇಂಜಿನಿಯರ್ ವಿದ್ಯಾರ್ಥಿಗಳು ಈ ಕೇಂದ್ರವನ್ನು ಬಳಸಿಕೊಳ್ಳಬಹುದಾಗಿದೆ ಎಂದರು.

ಮಾಹೆಯ ಉಪಕುಲಾಧಿಪತಿ ಡಾ.ಎಚ್.ವಿನೋದ್ ಭಟ್ ಮಾತನಾಡಿ, ಮಾಹೆಯು ಮುಂದೆ ಕೂಡ ಸಂಶೋಧನ ಕ್ಷೇತ್ರಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಿದೆ. ನಿರ್ಮಾಣ ಕ್ಷೇತ್ರದ ಬಗೆಗಿನ ಫೈಝಲ್ ಅವರ ಆಸಕ್ತಿ ಶ್ಲಾಘನೀಯ ಎಂದು ಹೇಳಿದರು.

ಕೆಇಎಫ್ ಹೋಲ್ಡಿಂಗ್ಸ್‌ನ ಸಹಸ್ಥಾಪಕಿ ಹಾಗೂ ವೈಸ್ ಚೇಯರ್‌ಪರ್ಸನ್ ಶಬಾನಾ ಫೈಝಲ್, ಬೆಂಗಳೂರು ಎಂಇಎಂಜಿ ಚೇಯರ್‌ ಮ್ಯಾನ್ ಡಾ. ರಂಜನ್ ಆರ್.ಪೈ, ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್.ಪೈ, ಮಾಹೆ ಪ್ರೊ. ಚಾನ್ಸೆಲರ್ ಡಾ.ಎಚ್.ಎಸ್.ಬಲ್ಲಾಳ್ ಮುಖ್ಯ ಅತಿಥಿಗಳಾಗಿದ್ದರು.

ಈ ಸಂದರ್ಭದಲ್ಲಿ ಡಾ.ಜಿ.ಕೆ.ಪ್ರಭು, ಮಾಹೆ ಪ್ರೊವೈಸ್ ಚಾನ್ಸೆಲರ್ ಡಾ. ಪೂರ್ಣಿಮಾ ಬಾಳಿಗಾ, ಕೆಇಎಫ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಚರ್ಡ್ ಪ್ಯಾಟಲೇ, ಸ್ಟಕ್ಚರಲ್ ಇಂಜಿನಿಯರ್ ಸ್ಪೈರೋಸ್, ಕೇಂದ್ರದ ನಿರ್ದೇಶಕ ಗೋಪಿನಾಥ್ ನಾಯಕ್, ಫೈಝಲ್ ಅವರ ಮಕ್ಕಳಾದ ಸೋಫಿಯಾ ಫೈಝಲ್ ಮತ್ತು ಝಾಕ್ ಫೈಝಲ್ ಉಪಸ್ಥಿತರಿದ್ದರು. ಎಂಐಟಿ ನಿರ್ದೇಶಕ ಡಾ.ಶ್ರೀಕಾಂತ್ ರಾವ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

2012ರಲ್ಲಿ ಮೂಡಿದ ಪರಿಕಲ್ಪನೆ

2012ರಲ್ಲಿ ಎಂಐಟಿಯಲ್ಲಿ ನಡೆದ ಹಳೆ ವಿದ್ಯಾರ್ಥಿಗಳ ಪುನರ್ ಮಿಲನ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಫೈಝಲ್ ಇ.ಕೊಟ್ಟಿ ಕೊಲ್ಲೊನ್ ಈ ಸಂಶೋಧನಾ ಕೇಂದ್ರವನ್ನು ನಿರ್ಮಿಸುವ ಪ್ರಸ್ತಾಪವನ್ನು ಇಟ್ಟಿದ್ದರು. ಅದರಂತೆ ಫೈಝಲ್ ಆ್ಯಂಡ್ ಶಬಾನಾ ಫೌಂಡೇಶನ್ ನೀಡಿರುವ ಎಂಟು ಕೋಟಿ ರೂ. ದೇಣಿಗೆ ಸೇರಿದಂತೆ ಒಟ್ಟು 16 ಕೋಟಿ ರೂ. ವೆಚ್ಚದಲ್ಲಿ ಎರಡು ಹಂತದಲ್ಲಿ ಈ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ ಎಂದು ಎಂಐಟಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಅವಿನಾಶ್ ಎ.ಆರ್. ತಿಳಿಸಿದರು.

ಇದೀಗ ಉದ್ಘಾಟನೆಗೊಂಡ ಮೊದಲ ಹಂತದ ಕಟ್ಟಡದಲ್ಲಿ ಸಾಮಗ್ರಿಗಳ ಗುಣಮಟ್ಟ ಪರೀಕ್ಷಿಸುವ ಪ್ರಯೋಗಾಲಯ, ಶೋರೂಂ, ಡಿಸೈನ್ ಸ್ಟುಡಿಯೋ, ಪ್ರಿಕಾಸ್ಟ್ ಟೆಕ್ನಾಲಜಿಯ ವಸ್ತುಸಂಗ್ರಹಾಲಯ, 135 ಮಂದಿಯ ಆಸನ ಸಾಮರ್ಥ್ಯ ಇರುವ ಮೀಟಿಂಗ್ ರೂಂ ಮತ್ತು ಹಾಲ್‌ಗಳಿವೆ.

ಇದೀಗ ನಿರ್ಮಾಣಗೊಳ್ಳುತ್ತಿರುವ ಎರಡನೆ ಹಂತದ ಕಟ್ಟಡದಲ್ಲಿ ಪ್ರಿಕಾಸ್ಟ್ ಎಲೆಮೆಂಟ್ ಟೆಸ್ಟಿಂಗ್ ಮತ್ತು ಸ್ಟಕ್ಚರಲ್ ಇಂಜಿನಿಯರಿಂಗ್ ಪ್ರಯೋಗಾಲಯ, ಗ್ಯಾಲರಿ, ನಿರ್ದೇಶಕರ ಕಚೇರಿ, ಮೀಟಿಂಗ್ ರೂಮ್, ಸ್ನಾತಕೋತ್ತರ ಸಂಶೋ ಧನಾ ಲ್ಯಾಬ್, ಕಂಪ್ಯೂಟರ್ ಲ್ಯಾಬ್, ಟ್ಯುಟೋರಿಯಲ್ ಮತ್ತು ಸಿಬ್ಬಂದಿಗಳ ಕೊಠಡಿಗಳು ಬರುತ್ತವೆ ಎಂದು ಅವರು ಮಾಹಿತಿ ನೀಡಿದರು.

ಇಂದಿರಾ ಕ್ಯಾಂಟಿನ್‌ಗಳ ನಿರ್ಮಾಣ

ಕೆಇಎಫ್ ‘ಕಟ್ಟಡಗಳ ಉತ್ಪಾದನೆ’ (ಕಟ್ಟಡದ ಬಿಡಿಭಾಗಗಳನ್ನು ಮೊದಲೇ ನಿರ್ಮಿಸಿ ನಂತರ ಕಾಮಗಾರಿ ಸ್ಥಳದಲ್ಲಿ ಜೋಡಿಸುವ) ತಂತ್ರಜ್ಞಾನವನ್ನು ಭಾರತಕ್ಕೆ 2014ರಲ್ಲಿ ಪರಿಚಯಿಸಿತು. ಮೊತ್ತ ಮೊದಲ ಬಾರಿಗೆ ಇದೇ ತಂತ್ರ ಜ್ಞಾನವನ್ನು ಬಳಸಿಕೊಂಡು ಕೆಇಎಫ್ ಬೆಂಗಳೂರಿನಲ್ಲಿ ತನ್ನ ಕಚೇರಿಯನ್ನು ನಿರ್ಮಿಸಿತು. ಮುಂದೆ ದೇಶಾದ್ಯಂತ ಇದೇ ತಂತ್ರಜ್ಞಾನದಲ್ಲಿ ಹಲವು ಕಟ್ಟಡ ಗಳನ್ನು ನಿರ್ಮಿಸಿದೆ. ಅಲ್ಲದೆ ಇದೇ ತಂತ್ರಜ್ಞಾನದಲ್ಲಿ ರಾಜ್ಯದ ಎಲ್ಲ ಇಂದಿರಾ ಕ್ಯಾಂಟಿನ್ ಕಟ್ಟಡಗಳನ್ನು ಕೆಇಎಫ್ ನಿರ್ಮಿಸಿದೆ.

ಫೈಝಲ್ ದಂಪತಿಗೆ ಸನ್ಮಾನ

ಮಣಿಪಾಲ ಕೆಎಂಸಿ ಗ್ರೀನ್ಸ್‌ನಲ್ಲಿ ಮಾಹೆ ವತಿಯಿಂದ ಶನಿವಾರ ಸಂಜೆ ನಡೆದ ಮೂರನೆ ದ್ವೈವಾರ್ಷಿಕ ಜಾಗತಿಕ ಮಣಿಪಾಲ ಹಳೆ ವಿದ್ಯಾರ್ಥಿಗಳ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಯುಎಇಯ ಕೆಇಎಫ್ ಹೋಲ್ಡಿಂಗ್ಸ್‌ನ ಸ್ಥಾಪಕ ಮತ್ತು ಚೇಯರ್‌ ಮ್ಯಾನ್ ಫೈಝಲ್ ಇ. ಕೊಟ್ಟಿಕೊಲ್ಲೊನ್ ಹಾಗೂ ಕೆಇಎಫ್ ಹೋಲ್ಡಿಂಗ್ಸ್‌ನ ಸಹಸ್ಥಾಪಕಿ ಹಾಗೂ ವೈಸ್ ಚೇಯರ್‌ಪರ್ಸನ್ ಶಾಬನಾ ಫೈಝ್ ದಂಪತಿಯನ್ನು ಸನ್ಮಾನಿಸಲಾಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News