ಬೆಲ್ಜಿಯಂಗೆ ಮೊದಲ ಫೈನಲ್ ಭಾಗ್ಯ

Update: 2018-12-15 18:05 GMT

ಭುವನೇಶ್ವರ, ಡಿ.15: ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಜಯಿಸಿರುವ ಬೆಲ್ಜಿಯಂ ತಂಡ ಪುರುಷರ ಹಾಕಿ ವಿಶ್ವಕಪ್‌ನಲ್ಲಿ ಮೊದಲ ಬಾರಿ ಫೈನಲ್‌ಗೆ ತೇರ್ಗಡೆಯಾಗುವುದರೊಂದಿಗೆ ಇತಿಹಾಸ ನಿರ್ಮಿಸಿದೆ.

ಶನಿವಾರ ಏಕಪಕ್ಷೀಯವಾಗಿ ಸಾಗಿದ ಮೊದಲ ಸೆಮಿ ಫೈನಲ್ ಫೈಟ್‌ನಲ್ಲಿ ಇಂಗ್ಲೆಂಡ್ ತಂಡವನ್ನು 6-0 ಗೋಲುಗಳ ಅಂತರದಿಂದ ಸದೆಬಡಿದ ಬೆಲ್ಜಿಯಂ ಈ ಸಾಧನೆ ಮಾಡಿದೆ.

ಕಳಿಂಗ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬೆಲ್ಜಿಯಂ ಅರ್ಧ ಡಜನ್ ಗೋಲು ಬಾರಿಸಿತು. ಬೆಲ್ಜಿಯಂನ ಪರ ಅಲೆಕ್ಸಾಂಡರ್ ಹೆಂಡ್ರಿಕ್ಸ್(45ನೇ, 50ನೇ ನಿಮಿಷ)ಪೆನಾಲ್ಟಿ ಕಾರ್ನರ್ ಮೂಲಕ ಅವಳಿ ಗೋಲು ಗಳಿಸಿದರು. ಟಾಮ್ ಬೂನ್(8ನೇ ನಿಮಿಷ), ಸೈಮನ್ ಗೌಗ್ನಾರ್ಡ್(19ನೇ ನಿ.), ಸೆಡ್ರಿಕ್ ಚಾರ್ಲಿಯರ್(42ನೇ ನಿ.) ಹಾಗೂ ಸೆಬಾಸ್ಟಿಯನ್ ಡಾಕಿಯರ್(53ನೇ ನಿಮಿಷ)ತಲಾ ಒಂದು ಗೋಲು ದಾಖಲಿಸಿದರು. ರೆಡ್ ಲಯನ್ಸ್ ಖ್ಯಾತಿಯ ಬೆಲ್ಜಿಯಂ ವಿಶ್ವಕಪ್‌ನಲ್ಲಿ ಶ್ರೇಷ್ಠ ನಿರ್ವಹಣೆ ತೋರಿದೆ. ಈ ಹಿಂದೆ 2014ರಲ್ಲಿ ಹಾಲೆಂಡ್‌ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ 5ನೇ ಸ್ಥಾನ ಪಡೆದಿರುವುದು ಬೆಲ್ಜಿಯಂನ ಈತನಕದ ಶ್ರೇಷ್ಠ ಪ್ರದರ್ಶನವಾಗಿತ್ತು.

ಪಂದ್ಯ ಆರಂಭಕ್ಕೆ ಮೊದಲೇ ಸಹ ಆಟಗಾರ ಸೈಮನ್ ತಂದೆ ನಿಧನರಾದ ಸುದ್ದಿ ಲಭಿಸಿದ ಹಿನ್ನೆಲೆಯಲ್ಲಿ ಕೈಗೆ ಕಪ್ಪುಧರಿಸಿ ಆಡಿದ ಬೆಲ್ಜಿಯಂ ತಂಡ ಮೊದಲೆರಡು ಕ್ವಾರ್ಟರ್‌ನಲ್ಲಿ ಪ್ರಾಬಲ್ಯ ಮೆರೆಯಿತು. ಹಲವು ಅವಕಾಶಗಳನ್ನು ಸೃಷ್ಟಿಸಿತು. ಎರಡು ಗೋಲು ದಾಖಲಿಸಲು ಯಶಸ್ವಿಯಾಯಿತು.

ಕೊನೆಯ ಕ್ವಾರ್ಟರ್‌ನಲ್ಲಿ 2 ಗೋಲು ಸಹಿತ ನಿರಂತರ ಮೇಲುಗೈ ಸಾಧಿಸಿದ ಬೆಲ್ಜಿ ಯಂ ಮೊದಲ ಬಾರಿ ಫೈನಲ್‌ಗೆ ಟಿಕೆಟ್ ಗಿಟ್ಟಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News