ಸೌಥಿ ಮಿಂಚು: ಡಿಕ್ವೆಲ್ಲಾ ಪ್ರತಿರೋಧ

Update: 2018-12-15 18:08 GMT

ವೆಲ್ಲಿಂಗ್ಟನ್, ಡಿ.15: ವೇಗಿ ಟಿಮ್ ಸೌಥಿ ಪಡೆದ 5 ವಿಕೆಟ್ ಗೊಂಚಲು ನೆರವಿನಿಂದ ನ್ಯೂಝಿಲೆಂಡ್ ತಂಡ ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್‌ನ ಪ್ರಥಮ ದಿನದಾಟದಲ್ಲಿ ಮೇಲುಗೈ ಸಾಧಿಸಿದೆ. ಶ್ರೀಲಂಕಾ 9 ವಿಕೆಟ್ ಕಳೆದುಕೊಂಡು 275 ರನ್ ಗಳಿಸಿದೆ.

ಶನಿವಾರ ಇಲ್ಲಿ ಆರಂಭವಾದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಶ್ರೀಲಂಕಾಗೆ ಸೌಥಿ ಆರಂಭದಲ್ಲೇ ಸಿಂಹಸ್ವಪ್ನವಾದರು. ಕೇವಲ 9 ರನ್ ಗಳಿಸುವಷ್ಟರಲ್ಲಿ ಶ್ರೀಲಂಕಾದ ಮೂರು ವಿಕೆಟ್ ಉರುಳಿದ್ದವು. ಈ ಮೂರೂ ವಿಕೆಟ್ ಸೌಥಿ ಪಾಲಾಗಿದ್ದು ವಿಶೇಷ. ಈ ಹಂತದಲ್ಲಿ ಶ್ರೀಲಂಕಾದ ದಿಮುತ್ ಕರುಣರತ್ನೆ(79) ಹಾಗೂ ಆ್ಯಂಜೆಲೊ ಮ್ಯಾಥ್ಯೂಸ್(83) ಭರ್ಜರಿ ಅರ್ಧಶತಕಗಳ ಮೂಲಕ ಕಿವೀಸ್ ಇನಿಂಗ್ಸ್‌ಗೆ ಜೀವ ತುಂಬಿದರು. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ನಿರೋಶನ್ ಡಿಕ್ವೆಲ್ಲಾ 73 ರನ್ ಗಳಿಸಿ ಔಟಾಗದೇ 2ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ನ್ಯೂಝಿಲೆಂಡ್ ಪರ 25 ಓವರ್ ಬೌಲಿಂಗ್ ಮಾಡಿದ ಸೌಥಿ 67 ರನ್ ನೀಡಿ 5 ವಿಕೆಟ್ ಕಬಳಿಸಿದರೆ, ನೀಲ್ ವ್ಯಾಗ್ನರ್ 2 ವಿಕೆಟ್ ಪಡೆದರು.

ವಿಶ್ವ ರ್ಯಾಂಕಿಂಗ್‌ನಲ್ಲಿ 6ನೇ ಸ್ಥಾನದಲ್ಲಿರುವ ಶ್ರೀಲಂಕಾ ನ್ಯೂಝಿಲೆಂಡ್ ವಿರುದ್ಧ ಆಡಿದ ಈ ಹಿಂದಿನ 5 ಟೆಸ್ಟ್‌ಗಳಲ್ಲಿ ಸೋಲುಂಡಿದೆ.

ಸಂಕ್ಷಿಪ್ತ ಸ್ಕೋರ್

►ಶ್ರೀಲಂಕಾ ಪ್ರಥಮ ಇನಿಂಗ್ಸ್: 87 ಓವರ್‌ಗಳಲ್ಲಿ 9 ವಿಕೆಟ್‌ಗೆ 275(ಮ್ಯಾಥ್ಯೂಸ್ 83, ಕರುಣರತ್ನೆ 79, ನಿರೋಶನ್ ಡಿಕ್ವೆಲ್ಲಾ ಅಜೇಯ 73, ಸೌಥಿ 67ಕ್ಕೆ 5, ನೀಲ್ ವ್ಯಾಗ್ನರ್ 75ಕ್ಕೆ 2)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News