ರಣಜಿ: ಭಾರೀ ಮುನ್ನಡೆಯತ್ತ ಕರ್ನಾಟಕ

Update: 2018-12-15 18:10 GMT

ಸೂರತ್, ಡಿ.15: ಶತಕ ವಂಚಿತ ಶ್ರೇಯಸ್ ಗೋಪಾಲ್ ಹಾಗೂ ಭರ್ಜರಿ ಅರ್ಧಶತಕ ಸಿಡಿಸಿದ ದೇವದತ್ತ್ ಪಡಿಕಲ್ ಅವರ ಉತ್ತಮ ಪ್ರದರ್ಶನದ ನೆರವಿನಿಂದ ರಣಜಿ ಎಲೈಟ್ ಎ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡ ಗುಜರಾತ್ ವಿರುದ್ಧ ಪ್ರಥಮ ಇನಿಂಗ್ಸ್‌ನಲ್ಲಿ 7 ವಿಕೆಟ್ ಕಳೆದುಕೊಂಡು 348 ರನ್ ಗಳಿಸಿ 132 ರನ್‌ಗಳ ಭಾರೀ ಮುನ್ನಡೆ ಪಡೆದಿದೆ.

ಪ್ರಥಮ ದಿನದಾಟದಲ್ಲಿ ಗುಜರಾತ್ ತಂಡವನ್ನು 216 ರನ್‌ಗಳಿಗೆ ನಿಯಂತ್ರಿಸಿ ತನ್ನ ಮೊದಲ ಇನಿಂಗ್ಸ್ ಆರಂಭಿಸಿದ ಕರ್ನಾಟಕ 45 ರನ್‌ಗೆ 2 ವಿಕೆಟ್ ಕಳೆದುಕೊಂಡಿತ್ತು. 2ನೇ ದಿನದಾಟವಾದ ಶನಿವಾರ ಬ್ಯಾಟಿಂಗ್ ಮುಂದುವರಿಸಿದ ತಂಡಕ್ಕೆ ದೇವದತ್ತ್(74, 10 ಬೌಂಡರಿ) ಹಾಗೂ ಆಲ್‌ರೌಂಡರ್ ಶ್ರೇಯಸ್ ಗೋಪಾಲ್(93, 15 ಬೌಂಡರಿ) ಆಸರೆಯಾದರು. ಗುಜರಾತ್ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದ ಈ ಜೋಡಿ, ಕರ್ನಾಟಕಕ್ಕೆ ನಿರೀಕ್ಷಿತ ಮುನ್ನಡೆಯನ್ನು ದೊರಕಿಸಲು ನೆರವಾದರು. ಕೆ.ಗೌತಮ್ (22) ಅಲ್ಪ ಕಾಣಿಕೆ ನೀಡಿದರು.ವಿಕೆಟ್ ಕೀಪರ್ ದಾಂಡಿಗ ಶ್ರೀನಿವಾಸ್ ಶರತ್(ಅಜೇಯ 47) ಹಾಗೂ 16 ರನ್ ಗಳಿಸಿರುವ ‘ದಾವಣಗೆರೆ ಎಕ್ಸ್‌ಪ್ರೆಸ್’ ಖ್ಯಾತಿಯ ನಾಯಕ ವಿನಯ್‌ಕುಮಾರ್ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಗುಜರಾತ್ ತಂಡದ ಪರ ಬೌಲಿಂಗ್‌ನಲ್ಲಿ ಮಿಂಚಿದ ಅರ್ಝನ್ ನಾಗ್‌ವಾಸ್ವಲ್ಲಾ 3 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಹಾಗೂ ಪಿಯೂಷ್ ಚಾವ್ಲಾ ತಲಾ 2 ವಿಕೆಟ್‌ಗೆ ತೃಪ್ತಿಪಟ್ಟರು.

ಸಂಕ್ಷಿಪ್ತ ಸ್ಕೋರ್

►ಗುಜರಾತ್ ಪ್ರಥಮ ಇನಿಂಗ್ಸ್: 69.4 ಓವರ್‌ಗಳಲ್ಲಿ 216 ಆಲೌಟ್(ಪ್ರಿಯಾಂಕ್ ಪಾಂಚಾಲ್ 74, ಶ್ರೇಯಸ್ ಗೋಪಾಲ್ 21ಕ್ಕೆ2, ಪ್ರತೀಕ್ ಜೈನ್ 28ಕ್ಕೆ 2)

<ಕರ್ನಾಟಕ ಪ್ರಥಮ ಇನಿಂಗ್ಸ್: 105 ಓವರ್‌ಗಳಲ್ಲಿ 348ಕ್ಕೆ 7( ಗೋಪಾಲ್ 93, ದೇವದತ್ತ್ 74, ಶರತ್ ಔಟಾಗದೆ 47, ಅರ್ಝನ್ 48ಕ್ಕೆ 3)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News