ಸಿಹಿಗೆಣಸು ಎಂದರೆ ತಾತ್ಸಾರ ಬೇಡ

Update: 2018-12-16 12:51 GMT

ಹೆಚ್ಚಿನವರು ಸಿಹಿಗೆಣಸನ್ನು ಇಷ್ಟ ಪಡುತ್ತಾರೆ. ಅದನ್ನು ಅಡುಗೆಯಲ್ಲಿ ಬಳಸಬಹುದು ಅಥವಾ ಬೇಯಿಸಿ ನೇರವಾಗಿ ತಿನ್ನಬಹುದು. ಆದರೆ ಸಿಹಿಗೆಣಸಿನ ಆರೋಗ್ಯಲಾಭಗಳನ್ನು ತಿಳಿದವರು ಕಡಿಮೆ. ಪೌಷ್ಟಿಕಾಂಶಗಳ ಆಗರವಾಗಿರುವ ಇದನ್ನು ಹಲವಾರು ಖಾದ್ಯಗಳಲ್ಲಿ ಬಳಸಬಹುದು. ಇದು ನೀಡುವ ಆರೋಗ್ಯಲಾಭಗಳ ಕುರಿತು ಮಾಹಿತಿಗಳಿಲ್ಲಿವೆ.....

► ಉತ್ಕರ್ಷಣ ನಿರೋಧಕಗಳ ಗಣಿ

ಸಿಹಿಗೆಣಸು ಸಮೃದ್ಧ ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿದ್ದು,ಇವು ವಿವಿಧ ಕಾಯಿಲೆಗಳನ್ನು ತಡೆಯುವಲ್ಲಿ ನೆರವಾಗುತ್ತವೆ. ಅವು ಫ್ರೀ ರ್ಯಾಡಿಕಲ್ಸ್‌ಗಳಿಂದ ಉಂಟಾಗುವ ಹಾನಿಯ ವಿರುದ್ಧ ರಕ್ಷಣೆಯನ್ನು ನೀಡುತ್ತವೆ. ಸಿಹಿಗೆಣಸು ಸ್ವಲ್ಪ ಪ್ರಮಾಣದಲ್ಲಿ ಉರಿಯೂತ ನಿರೋಧಕ ಗುಣವನ್ನೂ ಹೊಂದಿದೆ. ಅದು ಮಿದುಳಿನ ಅಂಗಾಂಶಗಳಲ್ಲಿಯ ಉರಿಯೂತವನ್ನು ಕಡಿಮೆ ಮಾಡುತ್ತದೆ. ಮಧುಮೇಹ,ಕ್ಯಾನ್ಸರ್,ಹೃದ್ರೋಗಗಳು ಮತ್ತು ಅಧಿಕ ರಕ್ತದೊತ್ತಡದಂತಹ ದೀರ್ಘಕಾಲೀನ ರೋಗಗಳ ಅಪಾಯಗಳನ್ನೂ ಸಿಹಿಗೆಣಸು ತಗ್ಗಿಸುತ್ತದೆ.

► ಸಿ ಮತ್ತು ಎ ವಿಟಾಮಿನ್‌ಗಳ ಮೂಲವಾಗಿದೆ

ಸಿಹಿಗೆಣಸು ಇವೆರಡೂ ವಿಟಾಮಿನ್‌ಗಳನ್ನು ಒಳಗೊಂಡಿದ್ದು,ಇವು ಶರೀರದ ರೋಗ ನಿರೋಧಕ ವ್ಯವಸ್ಥೆಯ ಸೂಕ್ತ ಕಾರ್ಯ ನಿರ್ವಹಣೆಗೆ ಅತ್ಯಗತ್ಯವಾಗಿವೆ. ವಿಟಾಮಿನ್ ಫ್ಲೂ ಮತ್ತು ಶೀತದ ವಿರುದ್ಧ ರಕ್ಷಣೆ ನೀಡುತ್ತದೆ. ಅದು ಕಣ್ಣು,ಚರ್ಮ ಮತ್ತು ಮೂಳೆಗಳ ಆರೋಗ್ಯವನ್ನು ಕಾಯ್ದುಕೊಳ್ಳಲೂ ನೆರವಾಗುವ ಜೊತೆಗೆ,ಶರೀರದ ವಿವಿಧ ಅಂಗಾಂಗಗಳು ಸೂಕ್ತವಾಗಿ ಕಾರ್ಯ ನಿರ್ವಹಿಸುವಂತೆಯೂ ಮಾಡುತ್ತದೆ. ವಿಟಾಮಿನ್ ಸಿ ಶರೀರವನ್ನು ವಿವಿಧ ಕಾಯಿಲೆಗಳಿಂದ ರಕ್ಷಿಸುವ ಬಿಳಿಯ ರಕ್ತಕಣಗಳನ್ನು ಹೆಚ್ಚಿಸುತ್ತದೆ.

► ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸುವುದಿಲ್ಲ

ಸಿಹಿಗೆಣಸು ಸಿಹಿಯಾಗಿರಬಹುದು,ಆದರೆ ಅದು ರಕ್ತದಲ್ಲಿಯ ಸಕ್ಕರೆ ಮಟ್ಟದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುವುದಿಲ್ಲ. ಸಿಹಿಗೆಣಸಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ನಾರು ಅದು ರಕ್ತದಲ್ಲಿಯ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟಗಳಲ್ಲಿ ಹಸ್ತಕ್ಷೇಪ ಮಾಡಲು ಅವಕಾಶ ನೀಡುವುದಿಲ್ಲ. ನಾರು ಜೀರ್ಣಕ್ರಿಯೆಯನ್ನೂ ಹೆಚ್ಚಿಸುತ್ತದೆ ಮತ್ತು ಕರುಳನ್ನು ಆರೋಗ್ಯಯುತವಾಗಿರಿಸುತ್ತದೆ. ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿಯ ಸಕ್ಕರೆ ಮಟ್ಟಗಳನ್ನು ಕಾಯ್ದುಕೊಳ್ಳಲೂ ಅದು ನೆರವಾಗುತ್ತದೆ. ಹೆಚ್ಚು ನಾರು ಸೇವಿಸಿದಾಗ ಅದು ತುಂಬ ಹೊತ್ತು ಹಸಿವೆಯನ್ನುಂಟು ಮಾಡುವುದಿಲ್ಲ,ತನ್ಮೂಲಕ ನಾವು ಹೆಚ್ಚುವರಿ ಕ್ಯಾಲರಿಗಳನ್ನು ಸೇವಿಸುವುದನ್ನು ತಡೆಯುತ್ತದೆ. ಹೀಗೆ ದೇಹತೂಕವನ್ನು ಕಾಯ್ದುಕೊಳ್ಳಲೂ ಸಿಹಿಗೆಣಸು ನೆರವಾಗುತ್ತದೆ.

► ರಕ್ತದೊತ್ತಡವನ್ನು ಕ್ರಮಬದ್ಧಗೊಳಿಸುತ್ತದೆ

ಸಿಹಿಗೆಣಸಿನಲ್ಲಿರುವ ಪೊಟ್ಯಾಷಿಯಂ ಶರೀರದಲ್ಲಿಯ ಹೆಚ್ಚುವರಿ ಸೋಡಿಯಂ ಮತ್ತು ದ್ರವಗಳನ್ನು ಹೊರಹಾಕಲು ನೆರವಾಗುವ ಮೂಲಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹೃದಯ ಬಡಿತವನ್ನು ಮತ್ತು ಸ್ನಾಯು ಸಂಕುಚನವನ್ನು ಕಾಯ್ದುಕೊಳ್ಳಲೂ ಅದು ನೆರವಾಗುತ್ತದೆ ಮತ್ತು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ಒಂದು ಕಪ್‌ನಷ್ಟು ಸಿಹಿಗೆಣಸನ್ನು ಸೇವಿಸಿದರೆ ಶರೀರಕ್ಕೆ ಸಾಕಷ್ಟು ಪೊಟ್ಯಾಷಿಯಂ ದೊರೆಯುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News