ಸಚಿವರ ಮನೆಯೆದುರು ಪ್ರತಿಭಟನೆ ವೇಳೆ ಚಳಿಯಿಂದ ಮೃತಪಟ್ಟ ಬೋಧನಾ ಸಹಾಯಕ

Update: 2018-12-17 16:16 GMT

ರಾಂಚಿ, ಡಿ.17: ಸಚಿವರ ಮನೆಯೆದುರು ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ಬೋಧನಾ ಸಹಾಯಕರೊಬ್ಬರು (ಪ್ಯಾರಾ ಟೀಚರ್) ಚಳಿಯ ಬಾಧೆಯಿಂದ ಮೃತಪಟ್ಟ ಘಟನೆ ಜಾರ್ಖಂಡ್‌ನ ದುಮ್ಕಾ ಎಂಬಲ್ಲಿ ರವಿವಾರ ನಡೆದಿರುವುದಾಗಿ ವರದಿಯಾಗಿದೆ.

ಮೃತಪಟ್ಟವರನ್ನು ರಾಮಗಢ ವಿಭಾಗದ ಚಿನದಂಗಾಲ್‌ನಲ್ಲಿರುವ ಮಾಧ್ಯಮಿಕ ಶಾಲೆಯಲ್ಲಿ 13 ವರ್ಷದಿಂದ ಬೋಧನಾ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ಕಾಂಚನ್ ಕುಮಾರ್ ದಾಸ್ ಎಂದು ಗುರುತಿಸಲಾಗಿದೆ.

ಇವರು ರಾಜ್ಯದ ಸಮಾಜ ಕಲ್ಯಾಣ ಸಚಿವ ಲೂಯಿಸ್ ಮರಾಂಡಿಯವರ ನಿವಾಸದೆದುರು ಶನಿವಾರ ರಾತ್ರಿ ಇತರ ಆರು ಸಹೋದ್ಯೋಗಿಗಳೊಂದಿಗೆ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಜಾರ್ಖಂಡ್‌ನಲ್ಲಿ 45 ಸಾವಿರಕ್ಕೂ ಅಧಿಕ ಬೋಧನಾ ಸಹಾಯಕರು ತಮ್ಮ ಸೇವೆ ಕಾಯಂ ಮಾಡಬೇಕೆಂದು ಒತ್ತಾಯಿಸಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿದ್ದು ,ಇದರಿಂದ 12 ಸಾವಿರಕ್ಕೂ ಅಧಿಕ ಶಾಲೆಗಳು ಮುಚ್ಚಿವೆ. ನೆರೆಯ ಛತ್ತೀಸ್‌ಗಢದಲ್ಲಿ ಎಂಟು ವರ್ಷ ಸೇವೆ ಸಲ್ಲಿಸಿರುವ ಬೋಧನಾ ಸಹಾಯಕರನ್ನು ಖಾಯಂಗೊಳಿಸಿರುವಂತೆ ತಮ್ಮನ್ನೂ ಖಾಯಂಗೊಳಿಸಬೇಕೆಂದು ಬೋಧನಾ ಸಹಾಯಕರು ಆಗ್ರಹಿಸುತ್ತಿದ್ದು, ಬಿಜೆಪಿ ಸಚಿವರು, ಸಂಸದರು ಹಾಗೂ ಶಾಸಕರ ನಿವಾಸದೆದುರು ಧರಣಿ ಮುಷ್ಕರ ಪ್ರತಿಭಟನೆ ಆರಂಭಿಸಿದ್ದಾರೆ. ಇದರಂತೆ ಶನಿವಾರ ರಾತ್ರಿ ದುಮ್ಕ ಪಟ್ಟಣದಲ್ಲಿರುವ ಸಚಿವ ಮರಾಂಡಿ ನಿವಾಸದೆದುರು ದಾಸ್ ಹಾಗೂ ಇತರ ಆರು ಮಂದಿ ಧರಣಿ ನಡೆಸುತ್ತಿದ್ದರು. ತೀವ್ರ ಚಳಿಯಿಂದ ದಾಸ್ ಮೃತಪಟ್ಟಿರುವ ಸಾಧ್ಯತೆಯಿದೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ ಎಂದು ದುಮ್ಕ ಪೊಲೀಸ್ ಅಧೀಕ್ಷಕ ವೈ.ರಮೇಶ್ ಹೇಳಿದ್ದಾರೆ.

ತನ್ನ ಮಗನಿಗೆ ಯಾವುದೇ ಆರೋಗ್ಯ ಸಮಸ್ಯೆಯಿರಲಿಲ್ಲ ಎಂದು ಕಾಂಚನ್‌ದಾಸ್ ತಂದೆ ಅಖಿಲೇಶ್ ದಾಸ್ ತಿಳಿಸಿದ್ದಾರೆ. ಮಗ ಚಳಿಯಿಂದ ಸಾವನ್ನಪ್ಪಲು ರಾಜ್ಯ ಸರಕಾರ ಕಾರಣವಾಗಿದೆ ಎಂದವರು ಆರೋಪಿಸಿದ್ದಾರೆ. ಶಿಕ್ಷಕರು ಸಾವನ್ನಪ್ಪಿರುವ ಘಟನೆಗೆ ತೀವ್ರ ದುಖ ಸೂಚಿಸಿರುವ ಸಚಿವ ಮರಾಂಡಿ, ಮುಷ್ಕರವನ್ನು ಕೈಬಿಡುವಂತೆ ವಿನಂತಿಸಿದ್ದಾರೆ. ಸರಕಾರ ಶಿಕ್ಷಕರ ಬೇಡಿಕೆ ಈಡೇರಿಸುವ ಕುರಿತು ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರ ಜೊತೆ ಮಾತುಕತೆ ನಡೆಸುವುದಾಗಿ ಅವರು ತಿಳಿಸಿದ್ದಾರೆ. ಸರಕಾರದ ನಿರ್ಲಕ್ಷ್ಯದ ಧೋರಣೆಯಿಂದ ಶಿಕ್ಷಕರೊಬ್ಬರು ಸಾವನ್ನಪ್ಪಿದ್ದಾರೆ ಎಂದು ವಿಪಕ್ಷಗಳು ಆರೋಪಿಸಿವೆ. ಬೋಧನಾ ಸಹಾಯಕರ ಬೇಡಿಕೆ ಈಡೇರಿಸಲು ಕೇಂದ್ರ ಸರಕಾರ ಮಧ್ಯಪ್ರವೇಶಿಸಬೇಕು ಎಂದು ಜಾರ್ಖಂಡ್ ಮುಕ್ತಿ ಮೋರ್ಛಾ (ಜೆಎಂಎಂ) ಆಗ್ರಹಿಸಿದೆ. ರಾಜ್ಯದ ಬಿಜೆಪಿ ಸರಕಾರ ಮಾನವೀಯತೆ ಮರೆತಿದೆ. ಸಚಿವರ ವಿರುದ್ದ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಜೆಎಂಎಂ ವಕ್ತಾರ ಸುಪ್ರಿಯೊ ಭಟ್ಟಾಚಾರ್ಯ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಿಭಟನೆ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿರುವ ‘ಏಕೀಕೃತ್ ಪ್ಯಾರ ಶಿಕ್ಷಕ್ ಸಂಘರ್ಷ ಮೋರ್ಛಾ’ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News