ಇಂದು ಐಪಿಎಲ್ ಆಟಗಾರರ ಹರಾಜು: ಒಟ್ಟು 346 ಕ್ರಿಕೆಟಿಗರು ಕಣದಲ್ಲಿ

Update: 2018-12-17 18:19 GMT

ಜೈಪುರ, ಡಿ.17: 2019ರ ಆವೃತ್ತಿಯ ಐಪಿಎಲ್ ಟ್ವೆಂಟಿ-20 ಟೂರ್ನಿಗೆ ವಿವಿಧ 8 ಫ್ರಾಂಚೈಸಿಗಳ ಆಟಗಾರರ ಹರಾಜು ಪ್ರಕ್ರಿಯೆ ಮಂಗಳವಾರ ‘ಪಿಂಕ್ ಸಿಟಿ’ಖ್ಯಾತಿಯ ಜೈಪುರದಲ್ಲಿ ಒಂದೇ ದಿನ ನೆರವೇರಲಿದೆ.

ಈ ಹಿಂದೆ 1,003 ಆಟಗಾರರು ಹೆಸರನ್ನು ನೋಂದಾಯಿಸಿದ್ದರು. ಫ್ರಾಂಚೈಸಿಗಳು ತಮ್ಮ ಅಂತಿಮ ಪಟ್ಟಿಯನ್ನು ಸಲ್ಲಿಸಿದ ಬಳಿಕ ಒಟ್ಟು 346 ಕ್ರಿಕೆಟಿಗರು ಹರಾಜಿನ ಅಂಗಣದಲ್ಲಿದ್ದಾರೆ. 70 ಸ್ಥಾನಗಳಿಗಾಗಿ ಉತ್ತಮ ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆ.

ಹರಾಜಿನಲ್ಲಿ ಭಾಗವಹಿಸುವ ತಂಡಗಳ ವಿವರ

►ಚೆನ್ನೈ ಸೂಪರ್ ಕಿಂಗ್ಸ್:

ಹಾಲಿ ಚಾಂಪಿಯನ್ ಚೆನ್ನೈ 2018ರಲ್ಲಿ ಮೂರನೇ ಬಾರಿ ಐಪಿಎಲ್ ಟ್ರೋಫಿ ಜಯಿಸಿದ್ದ ಹೆಚ್ಚಿನೆಲ್ಲಾ ಆಟಗಾರರನ್ನು ಉಳಿಸಿಕೊಂಡಿದೆ. ಚೆನ್ನೈ ತಂಡದಲ್ಲಿ ಇನ್ನು 2 ಸ್ಥಾನ ಖಾಲಿಯಿದೆ. ಎರಡೂ ಸ್ಥಾನಗಳು ಭಾರತದ ಆಟಗಾರರು ತುಂಬಲಿದ್ದಾರೆ. ತಂಡದ ಕೈಯ್ಯಲ್ಲಿ 8.40 ಕೋ.ರೂ.ಇದೆ.

►ಸನ್‌ರೈಸರ್ಸ್ ಹೈದರಾಬಾದ್:2016ರ ಐಪಿಎಲ್ ಚಾಂಪಿಯನ್‌ಗೆ ಹರಾಜಿನಲ್ಲಿ ಭರ್ತಿ ಮಾಡಲು 5 ಸ್ಥಾನ ಖಾಲಿಯಿದೆ. ಕಳೆದ ಋತುವಿನಲ್ಲಿದ್ದ 17 ಆಟಗಾರರನ್ನು ಉಳಿಸಿಕೊಂಡಿದೆ. 2018ರಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಹೈದರಾಬಾದ್ ಫೈನಲ್‌ನಲ್ಲಿ ಎಡವಿ 2ನೇ ಸ್ಥಾನ ಪಡೆದಿತ್ತು.9.70 ಕೋ.ರೂ.ಹೊಂದಿರುವ ಸನ್‌ರೈಸರ್ಸ್ ಭಾರತ 3 ಹಾಗೂ ವಿದೇಶದ ಇಬ್ಬರನ್ನು ಆಯ್ಕೆ ಮಾಡಬೇಕು.

►ಕೋಲ್ಕತಾ ನೈಟ್ ರೈಡರ್ಸ್: ಎರಡು ಬಾರಿಯ ಚಾಂಪಿಯನ್ ಕೆಕೆಆರ್ 2018ರಲ್ಲಿ ಫೈನಲ್‌ಗೆ ತಲುಪಲು ವಿಫಲವಾದ ಹಿನ್ನೆಲೆಯಲ್ಲಿ ಈ ಬಾರಿ ತಂಡವನ್ನು ಬಲಿಷ್ಠಗೊಳಿಸಲು ಬಯಸಿದೆ. ಕಳೆದ ಋತುವಿನ 13 ಆಟಗಾರರನ್ನು ಉಳಿಸಿಕೊಂಡಿರುವ ಕೆಕೆಆರ್ ಮಂಗಳವಾರದ ಹರಾಜಿನಲ್ಲಿ ಭಾರತದ ಗರಿಷ್ಠ 7 ಹಾಗೂ ವಿದೇಶದ 5 ಆಟಗಾರರಿಗೆ ಬಿಡ್ ಸಲ್ಲಿಸಬಹುದು. ಕಳೆದ ವರ್ಷ 3ನೇ ಸ್ಥಾನ ಪಡೆದಿದ್ದ ಕೋಲ್ಕತಾ ಬಳಿ 15.20 ಕೋ.ರೂ. ಇದೆ.

►ರಾಜಸ್ಥಾನ ರಾಯಲ್ಸ್:ರಾಜಸ್ಥಾನ ರಾಯಲ್ಸ್ ತಂಡ ಚೆನ್ನೈ ತಂಡದೊಂದಿಗೆ ಕಳೆದ ವರ್ಷ 2 ವರ್ಷಗಳ ನಿಷೇಧ ಅವಧಿ ಪೂರೈಸಿ ಟೂರ್ನಿಗೆ ವಾಪಸಾಗಿತ್ತು. ರಾಜಸ್ಥಾನ 4ನೇ ಸ್ಥಾನ ಪಡೆದಿತ್ತು. 2018ರ ಆವೃತ್ತಿಯಲ್ಲಿ ಆಡಿದ್ದ 16 ಆಟಗಾರರನ್ನು ಉಳಿಸಿಕೊಂಡಿದೆ. 9 ಆಟಗಾರರ ಸ್ಥಾನ ತೆರವಾಗಿದೆ. ರಾಜಸ್ಥಾನ ತನ್ನ ಖಾತೆಯಲ್ಲಿ 20.95 ಕೋ.ರೂ.ಹೊಂದಿದೆ. ಭಾರತದ ಗರಿಷ್ಠ 6 ಹಾಗೂ ವಿದೇಶದ ಮೂವರು ಆಟಗಾರರನ್ನು ಖರೀದಿಸಲು ಅವಕಾಶವಿದೆ.

►ಮುಂಬೈ ಇಂಡಿಯನ್ಸ್:ಎರಡು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ 2018ರಲ್ಲಿ 5ನೇ ಸ್ಥಾನ ಪಡೆದು ನಿರಾಸೆಗೊಳಿಸಿತ್ತು. ಕಳೆದ ಆವೃತ್ತಿಯ 17 ಆಟಗಾರರನ್ನು ಉಳಿಸಿಕೊಂಡಿರುವ ಮುಂಬೈ, ಆರ್‌ಸಿಬಿಯಿಂದ ಕ್ವಿಂಟನ್ ಡಿಕಾಕ್‌ರನ್ನು ಖರೀದಿಸಿದೆ. 7 ಸ್ಥಾನ ತೆರವಾಗಿದ್ದು, ಭಾರತದ 6 ಹಾಗೂ ವಿದೇಶದ ಒಬ್ಬ ಆಟಗಾರನನ್ನು ಖರೀದಿಸಬಹುದು. ಹರಾಜಿನಲ್ಲಿ ಒಟ್ಟು 11.15 ಕೋ.ರೂ.ವ್ಯಯಿಸಬಹುದು. ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಟಾರ್ ಆಟಗಾರರನ್ನು ಹೊಂದಿರುವ ಆರ್‌ಸಿಬಿ ಮತ್ತೊಮ್ಮೆ 15 ಆಟಗಾರರನ್ನು ಉಳಿಸಿಕೊಂಡಿದೆ. ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ಕಳೆದ ವರ್ಷ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿ ಆರನೇ ಸ್ಥಾನ ಪಡೆದಿತ್ತು. ಆರ್‌ಸಿಬಿಗೆ 10 ಸ್ಥಾನ ತುಂಬಲು ಬಾಕಿಯಿದ್ದು, 18.15 ಕೋ.ರೂ. ಹೊಂದಿದೆ.

►ಕಿಂಗ್ಸ್ ಇಲೆವೆನ್ ಪಂಜಾಬ್:ಕಳೆದ ವರ್ಷ ಕಳಪೆ ಪ್ರದರ್ಶನ ನೀಡಿದ್ದ ಪಂಜಾಬ್ ತಂಡ ಕನಿಷ್ಠ 10 ಆಟಗಾರರನ್ನು ಉಳಿಸಿಕೊಂಡಿದೆ. ಹರಾಜಿನಲ್ಲಿ 15 ಆಟಗಾರರನ್ನು ಭರ್ತಿ ಮಾಡಿಕೊಳ್ಳಬೇಕಾಗಿದೆ. ತಂಡದ ಬಳಿ 36.20 ಕೋ.ರೂ. ಇದೆ. 11 ಸ್ಥಾನಗಳು ಭಾರತೀಯರಿಗೆ ಮೀಸಲಾಗಿದೆ.

►ಡೆಲ್ಲಿ ಡೇರ್ ಡೆವಿಲ್ಸ್: ಕಳೆದ ವರ್ಷ ನೀರಸ ಪ್ರದರ್ಶನ ನೀಡಿದ್ದ ಡೆಲ್ಲಿ ತಂಡ ಈ ಬಾರಿ ತನ್ನ ಹೆಸರನ್ನು ಡೆಲ್ಲಿ ಕ್ಯಾಪಿಟಲ್ಸ್ ಎಂದು ಬದಲಾಯಿಸಿಕೊಂಡಿದೆ. 14 ಆಟಗಾರರನ್ನು ಉಳಿಸಿಕೊಂಡಿರುವ ಡೆಲ್ಲಿ 10 ಸ್ಥಾನಗಳನ್ನು(ಭಾರತ 7,ವಿದೇಶಿಗರು-3) ಭರ್ತಿ ಮಾಡಬೇಕಾಗಿದೆ. ಕೈಯ್ಯಲ್ಲಿ 25.50 ಕೋ.ರೂ. ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News