ಬಂಟ್ವಾಳ: ಡಿ. 21ರಿಂದ ಕರಾವಳಿ ಕಲೋತ್ಸವ

Update: 2018-12-18 15:23 GMT

ಬಂಟ್ವಾಳ, ಡಿ. 18: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾಟ್ರಸ್ಟ್ ಬಂಟ್ವಾಳ ಇವರ ಆಶ್ರಯದಲ್ಲಿ ಡಿ. 21ರಿಂದ 30ರವರೆಗೆ ಬಂಟ್ವಾಳ ತಾಲೂಕು ಬಿ.ಸಿ.ರೋಡಿನ ಗೋಲ್ಡನ್ ಪಾರ್ಕ್ ಅಸೋಸಿಯೇಟ್ಸ್ ಮೈದಾನ ಜೋಡುಮಾರ್ಗದಲ್ಲಿ "ಕರಾವಳಿ ಕಲೋತ್ಸವ"ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರಾವಳಿ ಕಲೋತ್ಸವದ ಅಧ್ಯಕ್ಷ ಸುದರ್ಶನ್ ಜೈನ್ ತಿಳಿಸಿದ್ದಾರೆ.

ಮಂಗಳವಾರ ಸಂಜೆ ಬಿ.ಸಿ.ರೋಡ್‍ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ. 21 ರಿಂದ 23ರವರೆಗೆ ಚಿಣ್ಣರೋತ್ಸವ ನಡೆಯಲಿದೆ. ಡಿ. 23 ಮತ್ತು 30ರಂದು ಸಂಜೆ 4ಕ್ಕೆ  ರಾಜ್ಯ ಮಟ್ಟದ ನೃತ್ಯಪ್ರದರ್ಶನ ನಡೆಯಲಿದೆ. 24ರಿಂದ 29ರವರೆಗೆ ತಾಲೂಕು ಮಟ್ಟದ ನಾಟಕೋತ್ಸವ ಸ್ಪರ್ಧೆ ನಡೆಯ ಲಿದೆ. ಸಂಜೆ 4ರಿಂದ ಸಭಾ ಕಾರ್ಯಕ್ರಮ, 6.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಸಂಘಟಿಸಲಾಗಿದೆ ಎಂದು ಹೇಳಿದರು.

ಡಿ. 21 ರಂದು ಬಿ.ಸಿ.ರೋಡಿನ ಅಣ್ಣಪೂರ್ಣೇಶ್ವರಿ ಕಲಾಮಂಟಪದಲ್ಲಿ ಜಾನಪದ ದಿಬ್ಬಣ ಉದ್ಘಾಟನೆಯನ್ನು ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ನೆರವೇರಿಸಲಿದ್ದಾರೆ. ಮೆರವಣಿಗೆಯಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳ ಜಾನಪದ  ಕಲಾ ತಂಡಗಳು ಭಾಗವಹಿಸಲಿವೆ. ಸಂಜೆ 5:30ಕ್ಕೆ ಕರಾವಳಿ ಕಲೋತ್ಸವ ಹಾಗೂ ಚಿಣ್ಣರೋತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಡಾ. ಜಯಮಾಲ ಉದ್ಘಾಟಿಸಲಿದ್ದಾರೆ. ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ವಸ್ತು ಪ್ರದರ್ಶನ ಮಳಿಗೆ ಉದ್ಘಾಟಿಸುವರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಚಿಣ್ಣರ ಚಿತ್ತಾರ ಚಿತ್ರ ಕಲೆ ಪ್ರದರ್ಶನ, ಮಾಜಿ ಸಚಿವ ಬಿ. ರಮಾನಾಥ ರೈ ಅಮ್ಯೂಸ್ ಮೆಂಟ್ ಪಾರ್ಕ್, ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಪಂಜೆ ಮಂಗೇಶರಾಯ ಕಲಾವೇದಿಕೆ ಉದ್ಘಾಟಿಸಲಿದ್ದಾರೆ. ಚಿಣ್ಣರೋತ್ಸವ ಅಧ್ಯಕ್ಷ ಅಭಿಷೇಕ್ ಬಿ.ಕೆ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರವಿಕಾಂತ ಗೌಡ, ಕರಾವಳಿ ಕಲೋತ್ಸವ ಅಧ್ಯಕ್ಷ ಸುದರ್ಶನ್ ಜೈನ್ ಪಂಜಿಕಲ್ಲು, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಮಹಾವೀರ ಅಜ್ರಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ರಾಜೇಶ್ ಜಿ, ಗೋಲ್ಡನ್‍ಪಾರ್ಕ್ ಅಸೋಸಿಯೇಶನ್ ಆಡಳಿತ ಪಾಲುದಾರ ಅಶೋಕ್ ಕುಮಾರ್ ಬರಿಮಾರು, ವಕೀಲ ಜಯರಾಮ ರೈ ವಿಟ್ಲ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ವಿಶೇಷ ಆಹ್ವಾನಿತರು

ರಾಷ್ಟ ಪ್ರಶಸ್ತಿ ವಿಜೇತೆ ಅದ್ವಿತಾ ಶೆಟ್ಟಿ, ಸ್ಟಾರ್ ಸುವರ್ಣ ದೀಕ್ಷಾ ಡಿ. ರೈ, ಕಾಮಿಡಿ ಕಿಲಾಡಿ ಖ್ಯಾತಿಯ ಸೂರಜ್ ಪಾಂಡೇಶ್ವರ, ಧೀರಜ್ ನೀರುಮಾರ್ಗ, ಚಲನಚಿತ್ರ ನಟರಾದ ದೇವದಾಸ್ ಕಾಪಿಕಾಡ್, ವಿನುತಾ ಡಿಸೋಜ, ರೂಪೇಶ್ ಶೆಟ್ಟಿ, ವಿಸ್ಮಯ ವಿನಾಯಕ, ಪಟ್ಲ ಸತೀಶ್ ಶೆಟ್ಟಿ, ಭೋಜರಾಜ ವಾಮಂಜೂರು, ಅನೂಪ್ ಸಾಗರ್, ದಿನೇಶ್ ಅತ್ತಾವರ, ಸತೀಶ್ ಬಂದಲೆ, ಅರವಿಂದ ಬೋಳಾರ್, ಪ್ರಕಾಶ್ ಶೆಟ್ಟಿ ಧರ್ಮನಗರ, ಗುರುಕಿರಣ್, ಬಲೆ ತೆಲಿಪಾಲೆ ಖ್ಯಾತಿಯ ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಪ್ರಸನ್ನ ಶೆಟ್ಟಿ ಬೈಲೂರು, ಸ್ಮೈಲ್ ಗರ್ಲ್ ರಶ್ಮಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ತಾಲೂಕು ಮಟ್ಟದ ನಾಟಕ ಸ್ಫರ್ಧೆ

ಪ್ರತಿದಿನ ರಾತ್ರಿ 8ರಿಂದ ನಾಟಕ ಸ್ಪರ್ಧೆ ನಡೆಯಲಿದೆ. ಡಿ. 24ರಂದು ಜಯಭಾರತ ಕಲಾವೃಂದ ಕೊಡ್ಮಾಣ್ ಇವರಿಂದ ನವೀನ್ ಮಾರ್ಲ ಕೊಡ್ಮಾಣ್ ರಚಿಸಿ ನಿರ್ದೇಶಿಸಿರುವ "ಮಾಮಿ ಉಲ್ಲೆರಾ", 25ರಂದು ಕಲಾನಿಧಿ ಕಲಾವಿದೆರ್ ನಾವೂರು ಅಭಿನಯದ ದಿನೇಶ್ ಸಾಲಿಯಾನ್ ರಚಿಸಿ ನಿರ್ದೇಶಿಸಿರುವ "ಗುರುವಪ್ಪಗ್ ಗುರುವಾರ", 26ರಂದು ರಂಗಭೂಮಿ ಬಿ.ಸಿ.ರೋಡು ಅಭಿನಯದ ಅರುಣ್ ಚಂದ್ರ ಬಿ.ಸಿ.ರೋಡು ರಚಿಸಿ ನಿರ್ದೇಶಿಸಿರುವ "ಸೇಲೆ ಸುಂದರೆ", 27ರಂದು ಸ್ನೇಹ ಕಲಾವಿದೆರ್ ಪುಣಚ ಅಭಿನಯದ ರವಿಶಂಕರ ಶಾಸ್ತ್ರಿ ರಚಿಸಿ ನಿರ್ದೇಶಿಸಿರುವ ನಾಟಕ "ಕುಡ ಒಂಜಾಕ", 28ರಂದು ಪುಗರ್ತೆ ಕಲಾವಿದೆರ್ ವಿಟ್ಲ ಅಭಿನಯಿಸುವ ಸುರೇಶ್ ಸರಪಾಡಿ ರಚಿಸಿರುವ ರಾಜ ಶೇಖರ ಶೆಟ್ಟಿ ಕುಡ್ತಮುಗೇರ್ ನಿರ್ದೇಶಿಸಿರುವ "ಸಚ್ಚುನು ಮೆಚ್ಚೊಡು", 29ರಂದು ತೆಲಿಕೆದ ಕಲಾವಿದೆರ್ ಕೊಯಿಲ ಅಭಿನಯಿಸುವ ಪುರುಷೋತ್ತಮ ಕೊಯಿಲ ರಚಿಸಿ ನಿದೇಶಿಸಿರುವ "ನಿಕುಲ್ ಎನ್ನಿಲೆಕತ್ತ್" ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ಅವರು ಮಾಹಿತಿ ನೀಡಿದರು.

ಸಾಂಸ್ಕೃತಿಕ ಕಾರ್ಯಕ್ರಮ

ರಾಜ್ಯ ಹೊರ ರಾಜ್ಯದ ಜಾನಪದ ಕಲಾತಂಡಗಳಿಂದ ಜಾನಪದ ನೃತ್ಯ ಪ್ರದರ್ಶನ, ಸಂಗೀತ ರಸಮಂಜರಿ ನೃತ್ಯ ಸಂಗಮ, ಗಿರಿಜಾ ಕಲ್ಯಾಣ ಜಾಂಬವತಿ ಕಲ್ಯಾಣ ಯಕ್ಷಗಾನ ಬಯಲಾಟ, ನೃತ್ಯ ರೂಪಕ ತುಳುನಾಡ ಐಸಿರಿ, ಭರತ ನೃತ್ಯ ವೈಭವ ನಡೆಯಲಿದೆ. ಬೆಳ್ಳಿಪರದೆಯಲ್ಲಿ ಚಲನಚಿತ್ರ ತಂಡದಿಂದ ಸಿನಿಮಾ ಲೋಕ ಪ್ರದರ್ಶನಗೊಳ್ಳಲಿದೆ. ಕಂಬಳ ಬೆಟ್ಟು ಭಟ್ರೆನ ಮಗಳ್, ಕಟಪ್ಪಾಡಿ ಕಟ್ಟಪ್ಪ, ದೇಯಿಬೈದೆದಿ, ಪೆನ್ಸಿಲ್ ಬಾಕ್ಸ್ ತಂಡಗಳ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಡಿ. 30ರಂದು ರಾಜ್ಯ ಮಟ್ಟದ ನೃತ್ಯ ಪ್ರದರ್ಶನ ಅನ್ವೇಷಣೆ ಮತ್ತು ಸಮಾರೋಪ ಸಮಾರಂಭ ಕರಾವಳಿ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ಪಂಜಿಕಲ್ಲಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮಂಗಳೂರು ಸಂಸದರಾದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಸಹಾಯಕ ಪೋಲಿಸ್ ಅಧೀಕ್ಷಕ ಸೋನವಣೆ ಋಷಿಕೇಶ್ ಭಗವಾನ್, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಮಂಗಳೂರು ಮೇಯರ್ ಕೆ. ಭಾಸ್ಕರ ಮೊಯ್ಲಿ, ಯಕ್ಷಾಂಗಣ ಕಾಂರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ, ಕೊಟ್ಟಾರಿ ಸಮಾಜದ ಅಧ್ಯಕ್ಷ ಬಾಲಕೃಷ್ಣ ಕೊಟ್ಟಾರಿ ಅತ್ತಾವರ, ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಲೆಕ್ಕಪರಿಶೋಧಕ ಸಿ.ಎ ಯತೀಶ್ ಭಂಡಾರಿ, ಚಿಣ್ಣರ ಲೋಕ ಗೌರವಾಧ್ಯಕ್ಷ ಪಿ. ಜಯರಾಮ ರೈ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಸಂಚಾಲಕ ಮೋಹನದಾಸ ಕೊಟ್ಟಾರಿ, ಗೌರವಾಧ್ಯಕ್ಷ ಜಯರಾಮ ರೈ ಶೆಟ್ಟಿ, ಸ್ವಾಗತ ಸಮಿತಿ ಅಧ್ಯಕ್ಷ ಕಾಂತಾಡಿಗುತ್ತು ಸೀತಾರಾಮ ಶೆಟ್ಟಿ, ಸಮಿತಿಯ ಪ್ರಮುಖರಾದ ಎಚ್.ಕೆ.ನಯನಾಡ್, ಸೇಸಪ್ಪ ಮಾಸ್ತರ್, ಪರಮೇಶ್ವರ ಮೂಲ್ಯ, ಮಧುಸೂದನ್ ಶೆಣೈ, ಜಯಾನಂದ ಪೆರಾಜೆ, ಮುಹಮ್ಮದ್ ನಂದರಬೆಟ್ಟು, ಸುರೇಶ್ ಪೂಜಾರಿ ಮತ್ತಿರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News