ಪೆಥಾಯ್ ಚಂಡಮಾರುತ: ಇಂದು ಭಾರೀ ಮಳೆ

Update: 2018-12-18 17:12 GMT

ಭುವನೇಶ್ವರ, ಡಿ. 18: ಪೆಥಾಯ್ ಚಂಡ ಮಾರುತ ಕ್ರಮೇಣ ದುರ್ಬಲವಾಗುವುದರಿಂದ ಬುಧವಾರದ ವರೆಗೆ ದಕ್ಷಿಣ ಒಡಿಶಾದಲ್ಲಿ ಭಾರಿ ಮಳೆ ಹಾಗೂ ಪಶ್ಚಿಮ ವಲಯದಲ್ಲಿ ತೀವ್ರ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ.

ಪ್ರತಿಕೂಲ ಹವಾಮಾನದಿಂದಾಗಿ ಒಡಿಶಾ ದಕ್ಷಿಣ ಹಾಗೂ ಪಶ್ಚಿಮದ ಹಲವು ಭಾಗಗಳಲ್ಲಿ ಸಾಮಾನ್ಯ ಜನಜೀವನಕ್ಕೆ ಅಡ್ಡಿ ಉಂಟಾಗಿದೆ. ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಅಕ್ಟೋಬರ್‌ನಲ್ಲಿ ಬೀಸಿದ ತಿತ್ಲಿ ಚಂಡಮಾರುತದಿಂದ ಧ್ವಂಸಗೊಂಡ ಮನೆಗಳ ಮರು ನಿರ್ಮಾಣವಾಗುತ್ತಿರುವ ಹೊರತಾಗಿಯೂ ಗಜಪತಿ ಜಿಲ್ಲೆಯಿಂದ 11,600ಕ್ಕೂ ಅಧಿಕ ಜನರನ್ನು ತೆರವುಗೊಳಿಸಲಾಗಿದೆ.

ಗಜಪತಿ ಜಿಲ್ಲೆಯ 7 ಬ್ಲಾಕ್‌ಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಗಿದೆ. ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದೆ. ತೆರವುಗೊಳಿಸಲಾದ ಜನರಿಗೆ ಆಹಾರ ಹಾಗೂ ಇತರ ಅಗತ್ಯದ ವಸ್ತುಗಳನ್ನು ಒದಗಿಸಲಾ ಗುತ್ತಿದೆ. ಪ್ರಕೃತಿ ವಿಕೋಪದ ಸಂದರ್ಭ ಅರೆ ನಿರ್ಮಾಣದ ಮನೆಗಳಲ್ಲಿ ವಾಸಿಸುವುದು ಅಪಾಯಕಾರಿ. ಆದುದರಿಂದ ಅವರನ್ನು ತೆರವುಗೊಳಿಸಿದೆವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಲ್ಕಂಗಿರಿ, ಕೊರಾಪುಟ್, ಗಜಪತಿ, ಗಂಜಾಮ್ ಹಾಗೂ ಕಾಲಹಂಡಿ ಜಿಲ್ಲೆಗಳ ವಿವಿಧ ಭಾಗಗಳಲ್ಲಿ ಗಾಳಿಯಿಂದ ಒಡಗೂಡಿದ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News