ಮಧ್ಯಪ್ರದೇಶ, ಛತ್ತೀಸ್ ಗಢದ ನಂತರ ಸಾಲಮನ್ನಾ ಘೋಷಿಸಿದ ರಾಜಸ್ಥಾನ ಸರಕಾರ

Update: 2018-12-19 17:05 GMT

ಜೈಪುರ,ಡಿ.19: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಬುಧವಾರ ರಾಜ್ಯದ ರೈತರ ಎರಡು ಲಕ್ಷ ರೂ.ವರೆಗಿನ ಸಾಲಮನ್ನಾ ಮಾಡುವ ಘೋಷಣೆ ಮಾಡಿದ್ದಾರೆ. ಈ ಕ್ರಮದಿಂದ ರಾಜ್ಯದ ಖಜಾನೆಗೆ 18,000 ಕೋಟಿ ರೂ. ಹೊರೆಯಾಗಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಇತ್ತೀಚೆಗೆ ನಡೆದ ರಾಜ್ಯ ಚುನಾವಣೆಗಳ ಪ್ರಚಾರ ಸಮಯದಲ್ಲಿ ಅಧಿಕಾರಕ್ಕೆ ಬಂದ ಹತ್ತು ದಿನಗಳ ಒಳಗೆ ರೈತರ ಸಾಲ ಮನ್ನಾ ಮಾಡುವುದಾಗಿ ಕಾಂಗ್ರೆಸ್ ಘೋಷಿಸಿತ್ತು. ಅದರಂತೆ ಮಧ್ಯ ಪ್ರದೇಶ ಮತ್ತು ಛತ್ತೀಸ್‌ಗಡದಲ್ಲಿ ಅಧಿಕಾರಕ್ಕೇರಿರುವ ಕಾಂಗ್ರೆಸ್ ಈಗಾಗಲೇ ಸಾಲಮನ್ನಾ ಘೋಷಿಸಿದೆ. ಇದೀಗ ಕಾಂಗ್ರೆಸ್ ಅಧಿಕಾರ ಹಿಡಿದ ಮೂರನೇ ರಾಜ್ಯ ರಾಜಸ್ಥಾನದಲ್ಲೂ ಮುಖ್ಯಮಂತ್ರಿ ಗೆಹ್ಲೊಟ್ ಕೃಷಿ ಸಾಲ ಮನ್ನಾ ಘೋಷಣೆ ಮಾಡಿದ್ದಾರೆ. ಇದಕ್ಕೂ ಮೊದಲು ಪಂಜಾಬ್‌ನಲ್ಲಿ ಕಾಂಗ್ರೆಸ್ ರೈತರ ಸಾಲಮನ್ನಾಕ್ಕೆ ನಾಂದಿ ಹಾಡಿತ್ತು.

ನಂತರ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರೈತರ ಸಾಲ ಮನ್ನಾ ಮಾಡುವ ಘೋಷಣೆ ಮಾಡಿತು. ಇದೀಗ ಇತ್ತೀಚಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವ ಮೂರೂ ರಾಜ್ಯಗಳಲ್ಲಿ ರೈತರ ಸಾಲಮನ್ನಾ ಮಾಡಲಾಗಿದೆ.

ಈ ಕುರಿತು ಮಾತನಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ನಮ್ಮ ಸರಕಾರ ಹತ್ತು ದಿನಗಳ ಒಳಗೆ ರೈತರ ಸಾಲಮನ್ನಾ ಮಾಡುವುದಾಗಿ ತಿಳಿಸಿದ್ದೆ. ಮಧ್ಯ ಪ್ರದೇಶ ಮತ್ತು ಛತ್ತೀಸ್‌ಗಡದಲ್ಲಿ ಅಧಿಕಾರಕ್ಕೆ ಬಂದ ಆರು ಗಂಟೆಗಳ ಒಳಗೆ ನಮ್ಮ ಭರವಸೆ ಈಡೇರಿಸಿದ್ದೇವೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News