2019ರಲ್ಲಿ ಗಡುವು ಮುಗಿಯುವುದಕ್ಕೆ ಮೊದಲು ಈ ಕೆಲಸಗಳನ್ನು ಮುಗಿಸಿಕೊಳ್ಳಿ

Update: 2018-12-19 16:49 GMT

ಹಣಕಾಸಿಗೆ ಸಂಬಂಧಿಸಿದಂತೆ 2019ರಲ್ಲಿ ನಿಗದಿತ ಗಡುವಿನೊಳಗೆ ನೀವು ಪೂರೈಸಬೇಕಾದ ಕೆಲಸಗಳ ಮಾಹಿತಿಯಿಲ್ಲಿದೆ. ಈ ಪೈಕಿ ಕೆಲವನ್ನು ನೀವು ಮಾಡದಿದ್ದರೆ ಅದು ನಿಮಗೆ ತುಂಬ ದುಬಾರಿಯಾಗಬಹುದು.

►ಪಾನ್-ಆಧಾರ್ ಜೋಡಣೆ

ಪಾನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ಅದನ್ನು ತಮ್ಮ ಆಧಾರ್‌ನೊಂದಿಗೆ ಜೋಡಣೆ ಮಾಡುವುದು ಕಡ್ಡಾಯವಾಗಿದೆ ಮತ್ತು ಇದಕ್ಕೆ 2019,ಮಾ.31 ಅಂತಿಮ ಗಡುವು ಆಗಿದೆ. ಮಾರ್ಚ್ 31ರೊಳಗೆ ಈ ಕೆಲಸ ಮಾಡದಿದ್ದರೆ ಆದಾಯ ತೆರಿಗೆ ಕಾಯ್ದೆಯ ಕಲಂ 139 ಎಎ ಅನ್ವಯ ಅಂತಹವರ ಪಾನ್ ಕಾರ್ಡ್‌ಗಳನ್ನು ಅಸಿಂಧು ಎಂದು ಪರಿಗಣಿಸಲಾಗುತ್ತದೆ.

►ಪ್ರಧಾನ ಮಂತ್ರಿ ಆವಾಸ್ ಯೋಜನೆ

ಮನೆಯೊಂದನ್ನು ಖರೀದಿಸಲು ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಲಾಭವನ್ನು ಪಡೆದುಕೊಳ್ಳಲು ನೀವು ಬಯಸಿದ್ದರೆ ನೀವು ಅದಕ್ಕಾಗಿ ಅವಸರಿಸಬೇಕು. ನೀವು ಮೊದಲ ಬಾರಿಗೆ ಮನೆಯೊಂದನ್ನು ಖರೀದಿಸುತ್ತಿದ್ದರೆ ಮತ್ತು ಇತರ ಎಲ್ಲ ಷರತ್ತುಗಳನ್ನು ಪೂರೈಸುತ್ತಿದ್ದರೆ ನೀವು ಈ ಯೋಜನೆಯಡಿ ನಿಮ್ಮ ಗೃಹಸಾಲದ ಮೇಲೆ ಸಬ್ಸಿಡಿಯನ್ನು ಪಡೆಯಲು ಅರ್ಹರಾಗುತ್ತೀರಿ. ಈ ಯೋಜನೆಯ ಸಬ್ಸಿಡಿಯ ಲಾಭ ಪಡೆಯಲು 2019,ಮಾ.31 ಕೊನೆಯ ದಿನಾಂಕವಾಗಿದೆ. ಈ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್‌ನ ಮೊತ್ತವು ಅರ್ಜಿದಾರರ ವಾರ್ಷಿಕ ಆದಾಯವನ್ನು ಅವಲಂಬಿಸಿರುತ್ತದೆ.

►ವ್ಯಕ್ತಿಗತವಲ್ಲದ ಸಂಸ್ಥೆಗಳಿಗೆ ಪಾನ್

2018-19ನೇ ಹಣಕಾಸು ವರ್ಷದಿಂದ ಪಾನ್ ಇಲ್ಲದ,ಆದರೆ ಒಂದು ಹಣಕಾಸು ವರ್ಷದಲ್ಲಿ 2.5 ಲ.ರೂ.ಗೂ ಅಧಿಕ ವಹಿವಾಟು ನಡೆಸಿರುವ ವ್ಯಕ್ತಿಗತವಲ್ಲದ ಸಂಸ್ಥೆಗಳು ನಂತರದ ವರ್ಷದ ಮೇ 31ರೊಳಗೆ ಪಾನ್‌ಗಾಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. * ಭೌತಿಕ ಶೇರುಗಳ ವರ್ಗಾವಣೆ

ನೀವು ಯಾವುದೇ ಕಂಪನಿಯ ಶೇರುಗಳನ್ನು ಭೌತಿಕ ಅಥವಾ ಕಾಗದದ ರೂಪದಲ್ಲಿ ಹೊಂದಿದ್ದರೆ 2019,ಎ.1ರ ಮೊದಲು ನೀವು ಡಿಮ್ಯಾಟ್ ಖಾತೆಯನ್ನು ತೆರೆದು ಅವುಗಳನ್ನು ಈ ಖಾತೆಗೆ ವರ್ಗಾಯಿಸಿಕೊಳ್ಳಬೇಕು. ಈ ಗಡುವನ್ನು ತಪ್ಪಿಸಿಕೊಂಡರೆ ನೀವು ಶೇರುಗಳನ್ನು ಡಿ-ಮ್ಯಾಟ್ ಖಾತೆಗೆ ವರ್ಗಾವಣೆ ಮಾಡಿದ ಹೊರತು ಅವುಗಳನ್ನು ಮಾರಾಟ ಮಾಡುವುದು ಸಾಧ್ಯವಾಗುವುದಿಲ್ಲ.

►2017-18ನೇ ಹಣಕಾಸು ವರ್ಷದ ಐಟಿಆರ್

  2017-18ನೇ ಸಾಲಿಗೆ ನಿಮ್ಮ ಆದಾಯ ತೆರಿಗೆ ರಿಟರ್ನ್(ಐಟಿಆರ್) ಅನ್ನು ನೀವು ಈವರೆಗೂ ಸಲ್ಲಿಸಿರದಿದ್ದರೆ ನೀವು ಅದನ್ನು 2019,ಮಾ.31ರೊಳಗೆ ಸಲ್ಲಿಸಲೇಬೇಕು. 2018,ಡಿ.31ರೊಳಗೆ ನೀವು ಐಟಿಆರ್ ಸಲ್ಲಿಸದರೆ 5,000 ರೂ.ಗಳ ದಂಡವನ್ನಂತೂ ಪಾವತಿಸಲೇಬೇಕು. ಆದರೆ 2019,ಜ.1 ಮತ್ತು ಮಾ.31ರೊಳಗೆ ಸಲ್ಲಿಸಿದರೆ 10,000 ರೂ.ಗಳ ದಂಡವನ್ನು ನೀಡಬೇಕು. ಅಂದ ಹಾಗೆ ಇಲ್ಲಿ ಸಣ್ಣ ತೆರಿಗೆದಾರರಿಗೊಂದು ಸಮಾಧಾನದ ವಿಷಯವಿದೆ. ವಾರ್ಷಿಕ ಆದಾಯ 5 ಲ.ರೂ.ಮೀರದವರಿಗೆ ಗರಿಷ್ಠ ದಂಡಶುಲ್ಕವನ್ನು 1,000 ರೂ.ಗೆ ಸೀಮಿತಗೊಳಿಸಲಾಗಿದೆ.

►2017-18ನೇ ಸಾಲಿನ ನಿಮ್ಮ ಐಟಿಆರ್‌ನ ಪರಿಷ್ಕರಣೆ

2017-18ನೇ ಸಾಲಿಗೆ ಸಲ್ಲಿಸಿರುವ ನಿಮ್ಮ ಐಟಿಆರ್‌ನಲ್ಲಿ ಯಾವುದೇ ತಪ್ಪು ಮಾಡಿರುವುದು ಪತ್ತೆಯಾದರೆ ನೀವು ಪರಿಷ್ಕೃತ ಐಟಿಆರ್‌ನ್ನು ಸಲ್ಲಿಸುವ ಮೂಲಕ ಅದನ್ನು ಸರಿಪಡಿಸಬೇಕಾಗುತ್ತದೆ. ಇದಕ್ಕೆ 2019,ಮಾ.31 ಕೊನೆಯ ದಿನಾಂಕವಾಗಿದೆ. ನೀವು ವಿಳಂಬವಾಗಿ ಐಟಿಆರ್ ಸಲ್ಲಿಸುವ ವ್ಯಕ್ತಿಯಾಗಿದ್ದರೆ ಮತ್ತು 2019,ಮಾ.31ರಂದು ಅದನ್ನು ಸಲ್ಲಿಸಿದರೆ ಅದರಲ್ಲಿ ಏನಾದರೂ ತಪ್ಪುಗಳಿದ್ದರೆ ಪರಿಷ್ಕೃತ ಐಟಿಆರ್ ಸಲ್ಲಿಸುವ ಅವಕಾಶ ನಿಮಗೆ ದೊರೆಯುವುದಿಲ್ಲ ಎನ್ನುವುದನ್ನು ಮರೆಯಬೇಡಿ.

►2018-19ನೇ ಸಾಲಿಗೆ ಐಟಿಆರ್ ಸಲ್ಲಿಕೆ

2018-19ನೇ ಹಣಕಾಸು ವರ್ಷ ಮಾ.31ಕ್ಕೆ ಅಂತ್ಯಗೊಂಡ ಬಳಿಕ ವಿಳಂಬಕ್ಕಾಗಿ ದಂಡ ಪಾವತಿಯನ್ನು ತಪ್ಪಿಸಿಕೊಳ್ಳಲು ಆ ಸಾಲಿಗೆ ನಿಮ್ಮ ಐಟಿಆರ್‌ನ್ನು ಸಕಾಲದಲ್ಲಿ ಸಲ್ಲಿಸಬೇಕಾಗುತ್ತದೆ. ಸರಕಾರವು ಯಾವುದೇ ವಿಸ್ತರಣೆಯನ್ನು ಪ್ರಕಟಿಸದಿದ್ದರೆ ಇದಕ್ಕೆ ಸಾಮಾನ್ಯವಾಗಿ ಜುಲೈ 31 ಅಂತಿಮ ದಿನಾಂಕವಾಗಿರುತ್ತದೆ.

►ತೆರಿಗೆ ಉಳಿತಾಯ ಮತ್ತು ಅಲೋವನ್ಸ್‌ಗಳಿಗೆ ಹಕ್ಕು ಸಲ್ಲಿಕೆ

2018-19ನೇ ಸಾಲಿಗೆ ನಿಮ್ಮ ಎಲ್ಲ ತೆರಿಗೆ ಉಳಿತಾಯ ಚಟುವಟಿಕೆಗಳನ್ನು ಪೂರ್ಣಗೊಳಿಸಲು ಮತ್ತು ನಿಮ್ಮ ಉದ್ಯೋಗದಾತರಿಂದ ಮರುಪಾವತಿಗಳು ಮತ್ತು ಅಲೋವನ್ಸ್‌ಗಳಿಗೆ ಕೋರಿಕೆಗಳನ್ನು ಮಂಡಿಸಲು 2019,ಮಾ.31 ಕೊನೆಯ ದಿನಾಂಕವಾಗಿರುತ್ತದೆ. ಲೀವ್ ಟ್ರಾವಲ್ ಅಲೋವನ್ಸ್‌ನಂತಹ ತೆರಿಗೆ ಲಾಭಗಳಿಗೆ ನಿಮ್ಮ ಉದ್ಯೋಗದಾತರ ಮೂಲಕವೇ ಕೋರಿಕೆ ಮಂಡಿಸಬೇಕಾಗುತ್ತದೆ ಎನ್ನುವುದು ನೆನಪಿನಲ್ಲಿರಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News