×
Ad

ಕಿವೀಸ್ ವಿರುದ್ಧ ಸೋಲು ತಪ್ಪಿಸಿಕೊಂಡ ಶ್ರೀಲಂಕಾ

Update: 2018-12-19 23:41 IST

ವೆಲ್ಲಿಂಗ್ಟನ್, ಡಿ.19: ಶ್ರೀಲಂಕಾ ಹಾಗೂ ನ್ಯೂಝಿಲೆಂಡ್ ತಂಡಗಳ ಮಧ್ಯೆ ಇಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿದೆ. ಟೆಸ್ಟ್‌ನ ಅಂತಿಮ ದಿನದಾಟಕ್ಕೆ ಮಳೆ ಅಡ್ಡಿಪಡಿಸಿದ್ದು, ಮಳೆಯ ಮಧ್ಯೆ ಶ್ರೀಲಂಕಾ ನ್ಯೂಝಿಲೆಂಡ್ ವಿರುದ್ಧ ಡ್ರಾ ಮಾಡಿಕೊಳ್ಳಲು ಯಶಸ್ವಿಯಾಯಿತು.

ಶ್ರೀಲಂಕಾದ ಆ್ಯಂಜೆಲೊ ಮ್ಯಾಥೂಸ್ ಹಾಗೂ ಕುಶಾಲ್ ಮೆಂಡಿಸ್ ನ್ಯೂಝಿಲೆಂಡ್ ಬೌಲರ್‌ಗಳಿಗೆ ಸವಾಲಾಗಿ ಪರಿಣಮಿಸಿದರು. ಇವರಿಬ್ಬರ ವಿಕೆಟ್ ಪಡೆಯಲು ವಿಫಲವಾದ ಕಿವೀಸ್ ಹೈರಾಣಾಯಿತು. ಕೊನೆಯ ದಿನದಾಟವಾದ ಬುಧವಾರ ತನ್ನ ಎರಡನೇ ಇನಿಂಗ್ಸ್‌ನಲ್ಲಿ ಶ್ರೀಲಂಕಾ 3 ವಿಕೆಟ್ ಕಳೆದುಕೊಂಡು 287 ರನ್ ಗಳಿಸಿದ್ದ ವೇಳೆೆ ಅಂಪೈರ್‌ಗಳು ಪಂದ್ಯ ಡ್ರಾ ಎಂದು ಘೋಷಿಸಿದರು. ಮಳೆಯ ಕಾರಣ ಕೊನೆಯ ದಿನ ಕೇವಲ 13 ಓವರ್‌ಗಳನ್ನಷ್ಟೇ ಆಡಿಸಲಾಯಿತು. ಈ ವೇಳೆ ಮೆಂಡಿಸ್ 141 ಹಾಗೂ ಮ್ಯಾಥ್ಯೂಸ್ 120 ರನ್ ಗಳಿಸಿ ಅಜೇಯರಾಗುಳಿದರು.

ಶ್ರೀಲಂಕಾ ತನ್ನ ಪ್ರಥಮ ಇನಿಂಗ್ಸ್‌ನಲ್ಲಿ 282ರನ್ ಆಲೌಟಾಗಿತ್ತು. ಇದಕ್ಕೆ ಉತ್ತರವಾಗಿ ಇನಿಂಗ್ಸ್ ಆರಂಭಿಸಿದ್ದ ಕಿವೀಸ್ ಆರಂಭಿಕ ದಾಂಡಿಗ ಟಾಮ್ ಲಥಮ್ ಅವರ ಭರ್ಜರಿ ದ್ವಿಶತಕ(ಅಜೇಯ 264)ದ ನೆರವಿನಿಂದ 578 ರನ್ ಗಳಿಸಿ ಮೊದಲ ಇನಿಂಗ್ಸ್‌ನಲ್ಲಿ 296 ರನ್‌ಗಳ ಬೃಹತ್ ಮುನ್ನಡೆ ಪಡೆದಿತ್ತು. ಮೂರನೇ ದಿನದಾಟ ಮುಗಿದಾಗ ಶ್ರೀಲಂಕಾ ತನ್ನ ಎರಡನೇ ಇನಿಂಗ್ಸ್‌ನಲ್ಲಿ 20 ರನ್ ಗಳಿಸಿ ಮೂರು ವಿಕೆಟ್ ಕಳೆದುಕೊಂಡಿತ್ತು. ಇದಾದ ನಂತರ ಕುಶಾಲ್ ಮೆಂಡಿಸ್ ಹಾಗೂ ಮಾಜಿ ನಾಯಕ ಮ್ಯಾಥ್ಯೂಸ್ ನಾಲ್ಕನೇ ದಿನಪೂರ್ತಿ ಬ್ಯಾಟಿಂಗ್ ಮಾಡಿ ಶ್ರೀಲಂಕಾವನ್ನು ಸೋಲಿನ ದವಡೆಯಿಂದ ಪಾರು ಮಾಡಿದ್ದರು. 264 ರನ್‌ಗಳ ಭರ್ಜರಿ ಇನಿಂಗ್ಸ್ ಆಡಿದ ಕಿವೀಸ್‌ನ ಟಾಮ್ ಲಥಮ್ ಪಂದ್ಯಶ್ರೇಷ್ಠ ಗೌರವ ಪಡೆದರು. ಸರಣಿಯ 2ನೇ ಹಾಗೂ ಅಂತಿಮ ಪಂದ್ಯ ಡಿ.26ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ಆರಂಭವಾಗಲಿದೆ.

ಸಂಕ್ಷಿಪ್ತ ಸ್ಕೋರ್

►ಶ್ರೀಲಂಕಾ ಪ್ರಥಮ ಇನಿಂಗ್ಸ್: 282 ಆಲೌಟ್

►ನ್ಯೂಝಿಲೆಂಡ್ ಪ್ರಥಮ ಇನಿಂಗ್ಸ್: 578 ಆಲೌಟ್( ಲಥಮ್ ಅಜೇಯ 264, ವಿಲಿಯಮ್ಸನ್ 91, ಟೇಲರ್ 50, ನಿಕೊಲ್ಸ್ 50, ಕುಮಾರ 127ಕ್ಕೆ 4)

►ಶ್ರೀಲಂಕಾ ದ್ವಿತೀಯ ಇನಿಂಗ್ಸ್: 287ಕ್ಕೆ 3( ಆ್ಯಂಜೆಲೊ ಮ್ಯಾಥ್ಯೂಸ್ ಅಜೇಯ 120, ಕುಶಾಲ್ ಮೆಂಡಿಸ್ ಅಜೇಯ 141)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News