×
Ad

ಗರಿಷ್ಠ ಬೆಲೆಗೆ ಪಂಜಾಬ್ ತಂಡದ ಪಾಲಾದ ಚೆನ್ನೈ ವಾಸ್ತುಶಿಲ್ಪಿ ವರುಣ್ ಚಕ್ರವರ್ತಿ

Update: 2018-12-19 23:49 IST

ಚೆನ್ನೈ, ಡಿ.19: ಕೆಲವೇ ಸಮಯದ ಹಿಂದೆ ಎಸ್‌ಆರ್‌ಎಂ ವಿಶ್ವವಿದ್ಯಾಲಯದಲ್ಲಿ ವಾಸ್ತುಶಿಲ್ಪದಲ್ಲಿ ಐದು ವರ್ಷ ಕೋರ್ಸ್ ಪೂರ್ಣಗೊಳಿಸಿದ್ದ ವರುಣ್ ಚಕ್ರವರ್ತಿ ಮಂಗಳವಾರ ನಡೆದ ಐಪಿಎಲ್ ಹರಾಜಿನಲ್ಲಿ 8.4 ಕೋ.ರೂ.ಗೆ ಕಿಂಗ್ಸ್ ಇಲೆವೆನ್ ಪಂಜಾಬ್ ಫ್ರಾಂಚೈಸಿಗೆ ಸೇರುವ ಮೂಲಕ ‘ಮಿಲಿಯನ್ ಡಾಲರ್ ಬೇಬಿ’ ಎನಿಸಿಕೊಂಡಿದ್ದಾರೆ.

ಮೂಲ ಬೆಲೆ 20 ಲಕ್ಷ ರೂ. ಹೊಂದಿದ್ದ 27ರ ಹರೆಯದ ಚಕ್ರವರ್ತಿ ಅವರನ್ನು ತಮ್ಮ ತೆಕ್ಕೆಗೆ ಸೇರಿಸಿಕೊಳ್ಳಲು ಐದು ಫ್ರಾಂಚೈಸಿಗಳು ಬಿಡ್ ಸಲ್ಲಿಸಿ ಪೈಪೋಟಿ ನಡೆಸಿದ್ದವು. ಅಂತಿಮವಾಗಿ ಪಂಜಾಬ್ ಗರಿಷ್ಠ ಮೊತ್ತಕ್ಕೆ ಚಕ್ರವರ್ತಿಯನ್ನು ತನ್ನದಾಗಿಸಿಕೊಂಡಿತು.

‘‘ನಾನು ನನ್ನ ಮೂಲ ಬೆಲೆಗೆ ಹರಾಜಾಗುವ ವಿಶ್ವಾಸದಲ್ಲಿದ್ದೆ. ಆದರೆ, ನನ್ನ ಯೋಚನೆಗೂ ಮೀರಿದ ಮೊತ್ತಕ್ಕೆ ಪಂಜಾಬ್ ಪಾಲಾಗಿದ್ದೇನೆ. ತಂಜಾವೂರಿನಲ್ಲಿ ನನ್ನ ಕುಟುಂಬ ಸದಸ್ಯರೊಂದಿಗೆ ಟಿವಿ ವೀಕ್ಷಿಸುತ್ತಿದ್ದೆ. ಕಳೆದ ವರ್ಷ ಕೆಕೆಆರ್‌ನ ನೆಟ್ ಬೌಲರ್ ಆಗಿ ಕೆಲಸ ಮಾಡಿದ್ದೆ. ಇತ್ತೀಚೆಗೆ ಮುಂಬೈ ಇಂಡಿಯನ್ಸ್‌ನ ಟ್ರಯಲ್ಸ್ ನಲ್ಲಿ ಭಾಗವಹಿಸಿದ್ದೆ. ನನ್ನ ಸೇವೆಯನ್ನು ಬಳಸಿಕೊಳ್ಳಲು ಹರಾಜಿನಲ್ಲಿ ಇಷ್ಟೊಂದು ಸ್ಪರ್ಧೆ ಇರುತ್ತದೆ ಎಂದು ಯೋಚಿಸಿರಲಿಲ್ಲ’’ ಎಂದರು.

ವರುಣ್ ಚಕ್ರವರ್ತಿ ಅವರಲ್ಲಿ ವಿವಿಧ ಶೈಲಿಯ ಬೌಲಿಂಗ್ ಮಾಡುವ ಕೌಶಲ್ಯತೆಯಿದೆ. ಗೂಗ್ಲಿ, ಆಫ್-ಬ್ರೇಕ್, ಕೇರಂ ಬಾಲ್ ಶೈಲಿಯಲ್ಲಿ ಬೌಲಿಂಗ್ ಮಾಡಬಲ್ಲರು.

‘‘ನಾನು ಶಾಲಾ-ದಿನಗಳಲ್ಲಿ ವಿಕೆಟ್‌ಕೀಪರ್ ಆಗಿದೆ. ಆ ನಂತರ ವೇಗದ ಬೌಲರ್ ಆಗಿದ್ದೆ. 2015-16ರ ಋತುವಿನಲ್ಲಿ ಟಿಎನ್‌ಸಿಎ ಸೆಕೆಂಡ್ ಡಿವಿಜನ್‌ನಲ್ಲಿ ಕ್ರೊಮ್‌ಬೆಸ್ಟ್‌ನ್ನು ಪ್ರತಿನಿಧಿಸಿದ್ದೆ. ಮಂಡಿಶಸ್ತ್ರಚಿಕಿತ್ಸೆಯ ಬಳಿಕ ಮಂಡಿಗೆ ಒತ್ತಡ ಹಾಕಬಾರದೆಂಬ ಕಾರಣಕ್ಕೆ ಸ್ಪಿನ್ ಬೌಲಿಂಗ್‌ನತ್ತ ಒಲವು ತೋರಿದ್ದೆ’’ ಎಂದರು.

ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ಈ ವರ್ಷ ಮಧುರೈ ಪ್ಯಾಂಥರ್ಸ್ ತಂಡವನ್ನು ಪ್ರತಿನಿಧಿಸಿದ್ದ ವರುಣ್ 10 ಪಂದ್ಯಗಳಲ್ಲಿ 9 ವಿಕೆಟ್‌ಗಳನ್ನು ಉರುಳಿಸಿ ಮಧುರೈ ಪ್ರಶಸ್ತಿ ಜಯಿಸಲು ನೆರವಾಗಿದ್ದರು.

ತಮಿಳುನಾಡು ಆಯ್ಕೆಗಾರರ ಗಮನ ಸೆಳೆದ ವರುಣ್ ಅವರು ವಿಜಯ್ ಹಝಾರೆ ಟ್ರೋಫಿಯಲ್ಲಿ ತಮಿಳುನಾಡು ತಂಡಕ್ಕೆ ಆಯ್ಕೆಯಾದರು. ಆ ಟೂರ್ನಿಯಲ್ಲಿ 9 ಪಂದ್ಯಗಳ ಪೈಕಿ ಒಟ್ಟು 22 ವಿಕೆಟ್‌ಗಳನ್ನು ಕಬಳಿಸಿದ್ದರು. ಕಳೆದ ತಿಂಗಳು ಹೈದರಾಬಾದ್ ವಿರುದ್ಧ ತಮಿಳುನಾಡು ಪರ ಆಡುವ ಮೂಲಕ ರಣಜಿ ಟ್ರೋಫಿಗೂ ಕಾಲಿಟ್ಟಿದ್ದಾರೆ.

ಅತ್ಯಂತ ಸೀಮಿತ ಅವಧಿಯಲ್ಲಿ ಹೊಸ ಎತ್ತರಕ್ಕೆ ಏರಿರುವ ವರುಣ್‌ಗೆ ಐಪಿಎಲ್ ಒಂದು ವಿಭಿನ್ನ ಟೂರ್ನಿ. ಪಂಜಾಬ್ ತಂಡದಲ್ಲಿ ಅವರದೇ ರಾಜ್ಯದ ಆರ್.ಅಶ್ವಿನ್ ನಾಯಕನಾಗಿದ್ದಾರೆ. ಅದು ಅವರಿಗೆ ನೆರವಾಗಬಹುದು.

‘‘ಅಶ್ವಿನ್ ಓರ್ವ ಅಪ್ಪಟ ಆಟಗಾರ. ಅವರು ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಯಶಸ್ಸು ಕಂಡಿದ್ದಾರೆ. ಅವರಿಂದ ಸಾಕಷ್ಟು ಕಲಿಯಲು ಎದುರು ನೋಡುತ್ತಿರುವೆ’’ ಎಂದು ವರುಣ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News