ರಾಮ ಮಂದಿರ ನಿರ್ಮಾಣ ಬಿಜೆಪಿಯ ಇನ್ನೊಂದು ‘ಜುಮ್ಲಾ’: ಶಿವಸೇನೆ

Update: 2018-12-20 15:11 GMT

ಹೊಸದಿಲ್ಲಿ, ಡಿ. 20: ಅಯೋಧ್ಯೆ ವಿವಾದದ ಕುರಿತು ಗುರುವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಶಿವಸೇನೆ, ವಿವಾದ ನಿವೇಶನದಲ್ಲಿ ರಾಮ ಮಂದಿರ ನಿರ್ಮಾಣ ಬಿಜೆಪಿಯ ಇನ್ನೊಂದು ‘ಜುಮ್ಲಾ’ (ಸುಳ್ಳು ಭರವಸೆ) ಆಗಲಿದೆ ಹಾಗೂ ಇದು ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ಕಾರಣವಾಗಲಿದೆ ಎಂದಿದೆ. ಮೂರು ರಾಜ್ಯಗಳಲ್ಲಿ ಇತ್ತೀಚೆಗಿನ ಚುನಾವಣೆ ಸೋಲು ಬಿಜೆಪಿಯನ್ನು ಎಚ್ಚರಗೊಳಿಸಿಲ್ಲ. ಭಗವದ್ಗೀತೆಯ ಬೋಧನೆ ಸಂದರ್ಭ ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿವುರುವುದನ್ನು ಕೂಡ ಕಲಿಯಲು ಬಿಜೆಪಿ ಸಿದ್ದವಿಲ್ಲ ಎಂದು ಸೇನೆ ಹೇಳಿದೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ವಿಚಾರದಲ್ಲಿ ಬಿಜೆಪಿ ಒಳಗಡೆ ಒತ್ತಡ ಇದೆ. ಆದರೆ, ರಾಮನಿಗೆ ಯಾವಾಗ ‘ಅಚ್ಛೇ ದಿನ್’ ಬರುತ್ತದೆ ? ಎಂದು ಸೇನೆ ಪ್ರಶ್ನಿಸಿದೆ. ನಾನು ಶ್ರೇಷ್ಠವಾದುದನ್ನು ಮಾಡಿದೆ ಎಂದು ಹೇಳುವ ಮೂಲಕ ಅಹಂಕಾರ ತೋರಿಸಿದರೆ ಏನು ಪ್ರಯೋಜನ ಎಂದು ಮೋಹನ್ ಭಾಗವತ್ ಅವರು ಭಗವದ್ಗೀತೆಯನ್ನು ಉಲ್ಲೇಖಿಸಿ ಹೇಳಿದ್ದಾರೆ. ಈ ಮೂಲಕ ಅವರು ಬಿಜೆಪಿಗೆ ಪ್ರಧಾನ ಮಾರ್ಗಸೂಚಿಗಳನ್ನು ನೀಡಿದ್ದಾರೆ ಎಂದು ಸೇನೆ ಹೇಳಿದೆ.

 ಆದರೆ, ಏನು ಪ್ರಯೋಜನ ? ಈ ಸರಕಾರ ಕುಂಭಕರ್ಣನಂತೆ. ಮೂರು ರಾಜ್ಯಗಳಲ್ಲಿ ಅವಮಾನಕರವಾಗಿ ಸೋತರೂ ಎಚ್ಚೆತ್ತುಕೊಳ್ಳಲು ಸಿದ್ಧವಿಲ್ಲ ಎಂದು ಸೇನೆ ತನ್ನ ಮುಖವಾಣಿಯಾದ ‘ಸಾಮ್ನಾ’ದ ಸಂಪಾದಕೀಯದಲ್ಲಿ ತಿಳಿಸಿದೆ. ಸಂಪೂರ್ಣ ದೇಶ ರಾಮ ಮಂದಿರ ನಿರ್ಮಾಣ ಮಾಡಬೇಕು ಎಂದು ಬಯಸುತ್ತದೆ. ಇದೇ ಕಾರಣಕ್ಕೆ 2014ರ ಲೋಕಸಭೆ ಚುನಾವಣೆಯ ಸಂದರ್ಭ ಜನರು ಮತ ಹಾಕಿ ಬಿಜೆಪಿ ಜಯ ಗಳಿಸುವಂತೆ ಮಾಡಿದರು ಎಂದು ಶಿವಸೇನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News