×
Ad

ವಾರಣಾಸಿಯಲ್ಲಿ ದೇವಸ್ಥಾನಗಳ ಧ್ವಂಸವನ್ನು ವಿರೋಧಿಸಿ ಕಾಂಗ್ರೆಸ್ ಶಾಸಕರ ಸಭಾತ್ಯಾಗ

Update: 2018-12-20 23:06 IST

ಲಕ್ನೋ,ಡಿ.20: ರಾಜ್ಯ ಸರಕಾರವು ವಾರಣಾಸಿಯಲ್ಲಿ ಕಾಶಿ ವಿಶ್ವನಾಥ ಕಾರಿಡಾರ್‌ನ ಹೆಸರಿನಲ್ಲಿ ದೇವಸ್ಥಾನಗಳನ್ನು ನೆಲಸಮಗೊಳಿಸಿದೆ ಮತ್ತು ಶಿವನ ವಿಗ್ರಹಗಳನ್ನು ಕಿತ್ತೆಸೆದಿದೆ ಎಂದು ಗುರುವಾರ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಆರೋಪಿಸಿದ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ನಡೆಸಿದರು.

ವಿಧಾನ ಪರಿಷತ್‌ನಲ್ಲೂ ಈ ವಿಷಯವನ್ನು ಪ್ರಸ್ತಾಪಿಸಿದ ಎಸ್‌ಪಿ ಸದಸ್ಯ ಶತ್ರುದ್ರ ಪ್ರಕಾಶ ಅವರು,50 ಶಿವಲಿಂಗಗಳನ್ನು ಭಗ್ನಗೊಳಿಸಲಾಗಿದೆ ಎಂದು ಆರೋಪಿಸಿದರು.

ಬೆಳಿಗ್ಗೆ ಸದನವು ಸಮಾವೇಶಗೊಂಡಾಗ ವಿಷಯವನ್ನು ಪ್ರಸ್ತಾಪಿಸಲು ಮುಂದಾದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಅಜಯ ಕುಮಾರ ಲಲ್ಲು ಅವರು,ಸರಕಾರವು 125 ಕೋಟಿ ಸನಾತನ ಧರ್ಮ ಅನುಯಾಯಿಗಳ ಭಾನೆಗಳೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು. ಈ ವಿಷಯದಲ್ಲಿ ಚರ್ಚೆಗಾಗಿ ಅವರು ಮಾಡಿಕೊಂಡ ಮನವಿಯನ್ನು ಸ್ಪೀಕರ್ ಹೃದಯನಾರಾಯಣ ದೀಕ್ಷಿತ ತಿರಸ್ಕರಿಸಿದರು.

ಬಳಿಕ ಈ ವಿಷಯದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಜನತೆಯ ಕ್ಷಮೆಯನ್ನು ಕೋರಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.

ವಿಧಾನ ಪರಿಷತ್‌ನಲ್ಲಿಯೂ ಎಸ್‌ಪಿ ಮತ್ತು ಕಾಂಗ್ರೆಸ್ ಸದಸ್ಯರು ದೇವಸ್ಥಾನಗಳ ನೆಲಸಮ ವಿಷಯವನ್ನು ಪ್ರಸ್ತಾಪಿಸಿದರು. ಹೊರಗಿನವರ ದಾಳಿಯಿಂದ ರಕ್ಷಿಸಿಕೊಳ್ಳಲು ಮನೆಗಳಲ್ಲಿ ದೇವಸ್ಥಾನಗಳನ್ನು ನಿರ್ಮಿಸುವುದು ವಾರಣಾಸಿಯಲ್ಲಿ ಹಳೆಯ ಸಂಪ್ರದಾಯವಾಗಿದೆ ಎಂದು ಪ್ರಕಾಶ ಹೇಳಿದರು.

ಸದಸ್ಯರ ಕಳವಳಗಳಿಗೆ ಉತ್ತರಿಸಿದ ಧಾರ್ಮಿಕ ವ್ಯವಹಾರಗಳ ಸಚಿವ ಲಕ್ಷ್ಮಿನಾರಾಯಣ ಚೌಧುರಿ ಅವರು,ದೇವಸ್ಥಾನಗಳನ್ನು ಧ್ವಂಸಗೊಳಿಸುವುದು ನಮ್ಮ ಕೆಲಸವಲ್ಲ,ನಾವು ದೇವಸ್ಥಾನಗಳನ್ನು ನಿರ್ಮಿಸುತ್ತೇವೆ. ಕಾರಿಡಾರ್ ಯೋಜನೆಯಡಿ ಮನೆಗಳನ್ನು ನೆಲಸಮಗೊಳಿಸುವಾಗ 40 ದೇವಸ್ಥಾನಗಳು ಬೆಳಕಿಗೆ ಬಂದಿವೆ. ಯಾವುದೇ ದೇವಸ್ಥಾನವನ್ನು ನೆಲಸಮಗೊಳಿಸಿಲ್ಲ,ಅವುಗಳ ನವೀಕರಣಕ್ಕೆ ನಾವು ಯೋಜನೆಯೊಂದನ್ನು ಆರಂಭಿಸಿದ್ದೇವೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News