ಇವಿಎಂ ಯಂತ್ರಗಳು ರಾಜಕೀಯ ಚರ್ಚೆಗಳಲ್ಲಿ ಫುಟ್ಬಾಲ್‌ನಂತಾಗಿವೆ: ಸುನಿಲ್ ಅರೋರಾ

Update: 2018-12-20 17:58 GMT

ಹೊಸದಿಲ್ಲಿ,ಡಿ.20: ವಿದ್ಯುನ್ಮಾನ ಮತದಾನ ಯಂತ್ರ(ಇವಿಎಂ)ಗಳು ಇಂದು ರಾಜನೀತಿಕ ಚರ್ಚೆಗಳಲ್ಲಿ ಫುಟ್ಬಾಲ್‌ನಂತಾಗಿವೆ ಎಂದು ಗುರುವಾರ ವಿಷಾದಿಸಿದ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ)ಸುನಿಲ್ ಅರೋರಾ ಅವರು,ಇವಿಎಂಗಳಲ್ಲಿ ತಾಂತ್ರಿಕ ದೋಷಗಳನ್ನು ಕನಿಷ್ಠ ಮಟ್ಟಕ್ಕೆ ತಗ್ಗಿಸಲು ಚುನಾವಣಾ ಆಯೋಗವು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದರು.

ಇತ್ತೀಚಿನ ಪಂಚರಾಜ್ಯ ಚುನಾವಣೆಗಳಲ್ಲಿ ಬಳಸಲಾಗಿದ್ದ 1.76 ಲಕ್ಷ ಇವಿಎಂಗಳ ಪೈಕಿ ಕೇವಲ ಶೇ.ಒಂದಕ್ಕೂ ಕಡಿಮೆ ಯಂತ್ರಗಳಲ್ಲಿ ತಾಂತ್ರಿಕ ದೋಷವುಂಟಾಗಿತ್ತು,ಆದರೂ ರಾಜನೀತಿಕ ಚರ್ಚೆಗಳಲ್ಲಿ ಅದೊಂದು ಫುಟ್ಬಾಲ್ ಆಗಿಬಿಟ್ಟಿತ್ತು. ಚುನಾವಣಾ ಆಯೋಗವನ್ನು ಟೀಕಿಸಲು ಮತ್ತು ಅದರ ನಿಷ್ಪಕ್ಷಪಾತತನವನ್ನು ಪ್ರಶ್ನಿಸಲು ರಾಜಕೀಯ ಪಕ್ಷಗಳಿಗೆ ಹಕ್ಕು ಇದೆ ಎಂದ ಅರೋರಾ,ಆದರೆ ಇವಿಎಂಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದಕ್ಕೆ ಅವುಗಳನ್ನು ಟೀಕಿಸಿದರು. ಫಲಿತಾಂಶ ಒಂದು ಪಕ್ಷದ ಪರವಾಗಿ ಬಂದರೆ ಅದು ಸರಿ,ಆದರೆ ಇನ್ನೊಂದು ಪಕ್ಷದ ಪರವಾಗಿ ಬಂದರೆ ಇವಿಎಂ ಮೇಲೆ ತಪ್ಪು ಹೊರಿಸಲಾಗುತ್ತದೆ ಎಂದರು.

ಇವಿಎಂಗಳಲ್ಲಿ ತಾಂತ್ರಿಕ ದೋಷಗಳನ್ನು ನಿವಾರಿಸುವ ನಿಟ್ಟಿನಲ್ಲಿ ಆಯೋಗವು ನಿರಂತರ ಶ್ರಮಿಸುತ್ತಿದೆ. ಇವಿಎಂ ಕೇವಲ ಮತಗಳನ್ನು ದಾಖಲಿಸಿಕೊಳ್ಳುವ ಯಂತ್ರವಾಗಿದೆ, ಅದರಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವೇ ಇಲ್ಲ ಎಂದ ಅವರು,ಹಸ್ತಕ್ಷೇಪೆ ಮತ್ತು ತಾಂತ್ರಿಕ ದೋಷಗಳು ಎರಡು ಪ್ರತ್ಯೇಕ ಸಂಗತಿಗಳಾಗಿವೆ. ತಿರುಚುವಿಕೆಯು ದುರುದ್ದೇಶವನ್ನು ತೋರಿಸುತ್ತದೆ,ತಾಂತ್ರಿಕ ದೋಷವು ಸಂಭವಿಸುತ್ತದೆ ಎಂದರು.

ದೇಶವು ಮತ್ತೆ ಮತದಾನ ಪತ್ರಗಳ ಪದ್ಧತಿಗೆ ಮರಳುವುದಿಲ್ಲ ಎಂಬ ಚುನಾವಣಾ ಆಯೋಗದ ನಿಲುವನ್ನು ಅವರು ಪುನರುಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News