×
Ad

ಅಗ್ರ-10ರಲ್ಲಿ ಲಿಯೊನ್, ಹೆಝಲ್‌ವುಡ್

Update: 2018-12-20 23:34 IST

ದುಬೈ, ಡಿ.20: ಆಸ್ಟೇಲಿಯದ ನಥಾನ್ ಲಿಯೊನ್ ಹಾಗೂ ಜೋಶ್ ಹೆಝಲ್‌ವುಡ್ ಗುರುವಾರ ಬಿಡುಗಡೆಯಾದ ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಕ್ರಮವಾಗಿ 7ನೇ ಹಾಗೂ 9ನೇ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ.

ಪರ್ತ್‌ನಲ್ಲಿ ನಡೆದ ಭಾರತ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಈ ಇಬ್ಬರು ಆಟಗಾರರು ಉತ್ತಮ ಪ್ರದರ್ಶನ ನೀಡಿ ಆಸೀಸ್ ಗೆಲುವಿಗೆ ನೆರವಾದ ಹಿನ್ನೆಲೆಯಲ್ಲಿ ರ್ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ್ದಾರೆ.

31ರ ಹರೆಯದ ಬಲಗೈ ಸ್ಪಿನ್ನರ್ ಲಿಯೊನ್ ಪರ್ತ್ ಟೆಸ್ಟ್‌ನಲ್ಲಿ 106 ರನ್‌ಗೆ ಒಟ್ಟು 8 ವಿಕೆಟ್ ಪಡೆದಿದ್ದರು. ಈ ಮೂಲಕ ಆಸೀಸ್‌ಗೆ 146 ರನ್‌ನಿಂದ ಗೆಲ್ಲಲು ಪ್ರಮುಖ ಕೊಡುಗೆ ನೀಡಿದ್ದರು. 2ನೇ ಟೆಸ್ಟ್‌ನಲ್ಲಿ ನೀಡಿರುವ ಉತ್ತಮ ಪ್ರದರ್ಶನದ ಬೆಂಬಲದಿಂದ ರ್ಯಾಂಕಿಂಗ್‌ನಲ್ಲಿ 7 ಸ್ಥಾನ ಭಡ್ತಿ ಪಡೆದಿದ್ದಾರೆ. ಹೆಝಲ್‌ವುಡ್ 2 ಇನಿಂಗ್ಸ್‌ಗಳಲ್ಲಿ 66ಕ್ಕೆ2 ಹಾಗೂ 24ಕ್ಕೆ 2 ವಿಕೆಟ್ ಕಬಳಿಸಿದ್ದರು. ರ್ಯಾಂಕಿಂಗ್‌ನಲ್ಲಿ 2 ಸ್ಥಾನ ಮೇಲಕ್ಕೇರಿದ್ದಾರೆ.

ಭಾರತದ ಪಾಳಯದಲ್ಲಿ ವೇಗಿ ಜಸ್‌ಪ್ರಿತ್ ಬುಮ್ರಾ ಪರ್ತ್‌ನಲ್ಲಿ 5 ವಿಕೆಟ್ ಕಬಳಿಸಿದ್ದು ರ್ಯಾಂಕಿಂಗ್‌ನಲ್ಲಿ 5 ಸ್ಥಾನ ಭಡ್ತಿ ಪಡೆದು 28ನೇ ಸ್ಥಾನಕ್ಕೇರಿದ್ದಾರೆ. ಮುಹಮ್ಮದ್ ಶಮಿ ಹಾಗೂ ಇಶಾಂತ್ ಶರ್ಮಾ ಕೂಡ ರ್ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ್ದಾರೆ. ಶಮಿ 2ನೇ ಇನಿಂಗ್ಸ್‌ನಲ್ಲಿ 56ಕ್ಕೆ 6 ವಿಕೆಟ್ ಕಬಳಿಸಿದ್ದರು. 2 ಸ್ಥಾನ ಮೇಲಕ್ಕೇರಿ 21ನೇ ಸ್ಥಾನ ತಲುಪಿದ್ದಾರೆ. ಇಶಾಂತ್ ಐದು ವಿಕೆಟ್‌ಗಳನ್ನು ಉರುಳಿಸಿದ್ದು ಇಂಗ್ಲೆಂಡ್‌ನ ಸ್ಪಿನ್ನರ್ ಮೊಯಿನ್ ಅಲಿ ಅವರನ್ನು ಹಿಂದಿಕ್ಕಿ 26ನೇ ಸ್ಥಾನ ತಲುಪಿದ್ದಾರೆ.

ಬ್ಯಾಟಿಂಗ್ ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ಅಂಕ ಗಳಿಕೆಯಲ್ಲಿ ನ್ಯೂಝಿಲೆಂಡ್‌ನ ಕೇನ್ ವಿಲಿಯಮ್ಸ್‌ರನ್ನು ಹಿಂದಿಕ್ಕಿದರು. ವಿಲಿಯಮ್ಸನ್ ಇತ್ತೀಚೆಗೆ 900 ಅಂಕ ಗಳಿಸಿದ ಕಿವೀಸ್‌ನ ಮೊದಲ ಆಟಗಾರ ಎನಿಸಿಕೊಂಡಿದ್ದರು. ಭಾರತ ವಿರುದ್ಧ 2ನೇ ಟೆಸ್ಟ್‌ನ 2ನೇ ಇನಿಂಗ್ಸ್‌ನಲ್ಲಿ 72 ರನ್ ಗಳಿಸಿದ್ದ ಆಸ್ಟ್ರೇಲಿಯದ ಉಸ್ಮಾನ್ ಖ್ವಾಜಾ 1 ಸ್ಥಾನ ಭಡ್ತಿ ಪಡೆದು 12ನೇ ಸ್ಥಾನಕ್ಕೇರಿದರು. ಆಸೀಸ್ ನಾಯಕ ಟಿಮ್ ಪೈನ್ 55ನೇ ಸ್ಥಾನದಿಂದ 46ನೇ ಸ್ಥಾನಕ್ಕೇರಿದ್ದಾರೆ. ಭಾರತದ ಉಪ ನಾಯಕ ಅಜಿಂಕ್ಯ ರಹಾನೆ 3 ಸ್ಥಾನ ಭಡ್ತಿ ಪಡೆದು 15ನೇ ಸ್ಥಾನಕ್ಕೂ, ರಿಷಭ್ ಪಂತ್ 11 ಸ್ಥಾನ ಮೇಲಕ್ಕೇರಿ ಜೀವನಶ್ರೇಷ್ಠ 48ನೇ ಸ್ಥಾನಕ್ಕೇರಿದ್ದಾರೆ.

ಪರ್ತ್‌ನಲ್ಲಿ 2ನೇ ಟೆಸ್ಟ್ ಪಂದ್ಯವನ್ನಾಡಿರುವ ಆಲ್‌ರೌಂಡರ್ ಹನುಮ ವಿಹಾರಿ ಬ್ಯಾಟಿಂಗ್, ಬೌಲಿಂಗ್ ಹಾಗೂ ಆಲ್‌ರೌಂಡರ್ ರ್ಯಾಂಕಿಂಗ್‌ನಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಆಲ್‌ರೌಂಡರ್ ಪಟ್ಟಿಯಲ್ಲಿ 65ನೇ ಸ್ಥಾನಕ್ಕೇರಿರುವ ವಿಹಾರಿ ಕ್ರಮವಾಗಿ ಬೌಲಿಂಗ್ ಹಾಗೂ ಬ್ಯಾಟಿಂಗ್ ರ್ಯಾಂಕಿಂಗ್‌ನಲ್ಲಿ 84(15 ಸ್ಥಾನ ಭಡ್ತಿ)ಹಾಗೂ 110ನೇ ಸ್ಥಾನ (12 ಸ್ಥಾನ ಭಡ್ತಿ)ಕ್ಕೇರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News