×
Ad

ಬಾಂಗ್ಲಾದೇಶ ಟ್ವೆಂಟಿ-20 ಲೀಗ್‌ಗೆ ಬೇಡವಾದ ಸ್ಮಿತ್

Update: 2018-12-20 23:41 IST

ಢಾಕಾ, ಡಿ.20: ಮುಂಬರುವ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಮೆಂಟ್‌ನಲ್ಲಿ ಆಸ್ಟ್ರೇಲಿಯದ ಮಾಜಿ ನಾಯಕ ಸ್ಟೀವ್ ಸ್ಮಿತ್ ಭಾಗವಹಿಸುವುದಕ್ಕೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಗುರುವಾರ ತಡೆ ಹೇರಿದೆ. ಲೀಗ್‌ನ ಕೆಲವು ಫ್ರಾಂಚೈಸಿಗಳು ಸ್ಮಿತ್ ಸೇರ್ಪಡೆಗೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬಿಸಿಬಿ ಇಂತಹ ಕಠಿಣ ನಿರ್ಧಾರಕ್ಕೆ ಬಂದಿದೆ. ಅಂತರ್‌ರಾಷ್ಟ್ರೀಯ ಕ್ರಿಕೆಟ್ ಹಾಗೂ ಆಸ್ಟ್ರೇಲಿಯದ ದೇಶೀಯ ಶೀಫೀಲ್ಡ್ ಶೀಲ್ಡ್ ಹಾಗೂ ಬಿಗ್ ಬ್ಯಾಶ್ ಲೀಗ್‌ನಲ್ಲಿ ಭಾಗವಹಿಸುವುದಕ್ಕೆ ಒಂದು ವರ್ಷ ನಿಷೇಧ ಶಿಕ್ಷೆ ಎದುರಿಸುತ್ತಿರುವ ಸ್ಮಿತ್ ಜ.5 ರಿಂದ ಆರಂಭವಾಗಲಿರುವ ಬಿಪಿಎಲ್ ಟ್ವೆಂಟಿ-20 ಲೀಗ್‌ನಲ್ಲಿ ಕೊಮಿಲ್ಲಾ ವಿಕ್ಟೋರಿಯನ್ಸ್ ತಂಡದೊಂದಿಗೆ ಸಹಿ ಹಾಕಿದ್ದರು. ಸ್ಮಿತ್ ಬಿಪಿಎಲ್‌ನ ದ್ವಿತೀಯಾರ್ಧದಲ್ಲಿ ಪಾಕಿಸ್ತಾನದ ಆಲ್‌ರೌಂಡರ್ ಶುಐಬ್ ಮಲಿಕ್ ಬದಲಿಗೆ ಲೀಗ್‌ಗೆ ಸೇರ್ಪಡೆಯಾಗುವ ನಿರೀಕ್ಷೆಯಿತ್ತು.

‘‘ಟೂರ್ನಮೆಂಟ್‌ನ ನಿಯಮದ ಪ್ರಕಾರ ಫ್ರಾಂಚೈಸಿ ಬದಲಿ ಆಟಗಾರನನ್ನು ನೇಮಿಸಬೇಕಾದರೆ, ಆ ಆಟಗಾರನ ಹೆಸರು ಆಟಗಾರರ ಆರಂಭಿಕ ಪಟ್ಟಿಯಲ್ಲಿರಬೇಕಾಗುತ್ತದೆ. ಆದರೆ, ಸ್ಮಿತ್ ಹೆಸರು ಆ ಪಟ್ಟಿಯಲ್ಲಿರಲಿಲ್ಲ. ಇದಕ್ಕೆ ಕೆಲವು ಫ್ರಾಂಚೈಸಿಗಳು ಆಕ್ಷೇಪ ಎತ್ತಿದ್ದವು. ಹಾಗಾಗಿ ನಾವು ಅವರನ್ನು ಲೀಗ್‌ನಲ್ಲಿ ಭಾಗವಹಿಸದಂತೆ ನಿರ್ಬಂಧಿಸಿದ್ದೇವೆ’’ ಎಂದು ಬಿಸಿಬಿ ಮುಖ್ಯಸ್ಥ ನಿಝಾಮುದ್ದೀನ್ ಚೌಧರಿ ಹೇಳಿದ್ದಾರೆ.

ಆಸ್ಟ್ರೇಲಿಯದ ಮಾಜಿ ಉಪ ನಾಯಕ ಡೇವಿಡ್ ವಾರ್ನರ್ ಬಿಪಿಎಲ್‌ನಲ್ಲಿ ಭಾಗವಹಿಸಲಿದ್ದಾರೆ. ವಾರ್ನರ್ ಸಿಲ್ಹೆಟ್ ಸಿಕ್ಸರ್ ತಂಡದ ಪರ ಆಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News