ಅಂತಹ ‘ಚಾನ್ಸ್’ ಇಲ್ಲ: ಪ್ರಧಾನಿ ಹುದ್ದೆ ವದಂತಿ ಕುರಿತು ಕೇಂದ್ರ ಸಚಿವ ಗಡ್ಕರಿ
ಹೊಸದಿಲ್ಲಿ,ಡಿ.21: 2019ರ ಲೋಕಸಭಾ ಚುನಾವಣೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬದಲಿಗೆ ತನ್ನನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸಲಾಗುತ್ತದೆ ಎಂಬ ವದಂತಿಗಳನ್ನು ಶುಕ್ರವಾರ ತಳ್ಳಿಹಾಕಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು,ಅದಕ್ಕೆ ಅವಕಾಶವಿಲ್ಲ.ತಾನೀಗ ಇರುವಲ್ಲಿಯೇ ಆರಾಮವಾಗಿದ್ದೇನೆ ಎಂದು ಹೇಳಿದರು.
2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕೆಂದಿದ್ದರೆ ಹೊಣೆಗಾರಿಕೆಯನ್ನು ಗಡ್ಕರಿಯವರಿಗೆ ನೀಡುವಂತೆ ಆಗ್ರಹಿಸಿ ಮಹಾರಾಷ್ಟ್ರದ ಸರಕಾರಿ ಸಂಸ್ಥೆಯೊಂದರ ಮುಖ್ಯಸ್ಥರು ಇತ್ತೀಚೆಗೆ ಆರೆಸ್ಸೆಸ್‌ಗೆ ಪತ್ರ ಬರೆದಿದ್ದರು.
ಶುಕ್ರವಾರ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಗಡ್ಕರಿ,ತನಗೆ ಬಹಳಷ್ಟು ಕೆಲಸಗಳು ಇವೆ. ಗಂಗಾ ಶುದ್ಧೀಕರಣ ಕೆಲಸವನ್ನು ಮೊದಲು ಮುಗಿಸಬೇಕಿದೆ. ಇದರ ಜೊತೆಗೆ ಚಾರ್‌ಧಾಮ್‌ಗೆ ರಸ್ತೆ ನಿರ್ಮಾಣ ಇತ್ಯಾದಿ ಕೆಲಸಗಳೂ ಇವೆ ಮತ್ತು ಅವುಗಳನ್ನೂ ಪೂರ್ಣಗೊಳಿಸಲು ತಾನು ಬಯಸಿದ್ದೇನೆ ಎಂದರು.
ಹಿಂದಿನ ಸರಕಾರವು ಈಶಾನ್ಯ ಭಾರತವನ್ನು ಕಡೆಗಣಿಸಿತ್ತು ಎಂದು ಗುರುವಾರ ಅರುಣಾಚಲ ಪ್ರದೇಶದಲ್ಲಿ 9,553 ಕೋ.ರೂ.ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದ ಗಡ್ಕರಿ ಆರೋಪಿಸಿದರು. ಈಶಾನ್ಯದಲ್ಲಿ ಮುಂಬರಲಿರುವ ಅಭಿವೃದ್ಧಿ ಯೋಜನೆಗಳು ಆ ಪ್ರದೇಶದ ಚಿತ್ರಣವನ್ನು ಸಂಪೂರ್ಣವಾಗಿ ಬದಲಿಸಲಿವೆ ಎಂದರು.