ತಂದೂರ್ ಹಂತಕ ಸುಶೀಲ್ ಶರ್ಮಾನನ್ನು ತಕ್ಷಣ ಬಿಡುಗಡೆಗೊಳಿಸಲು ದಿಲ್ಲಿ ಹೈಕೋರ್ಟ್ ಆದೇಶ
ಹೊಸದಿಲ್ಲಿ,ಡಿ.21: 1995ರಲ್ಲಿ ತನ್ನ ಪತ್ನಿ ನೈನಾ ಸಾಹ್ನಿಯನ್ನು ಕೊಂದು ಬಳಿಕ ತಂದೂರ್ ನಲ್ಲಿ ಆಕೆಯ ಶವವನ್ನು ಸುಟ್ಟಿದ್ದ ಆರೋಪದಲ್ಲಿ ಕಳೆದ ಎರಡು ದಶಕಗಳಿಗೂ ಅಧಿಕ ಕಾಲದಿಂದ ಜೈಲಿನಲ್ಲಿ ಕೊಳೆಯುತ್ತಿರುವ ಸುಶೀಲ್ ಶರ್ಮಾನನ್ನು ತಕ್ಷಣವೇ ಬಿಡುಗಡೆಗೊಳಿಸುವಂತೆ ದಿಲ್ಲಿ ಉಚ್ಚ ನ್ಯಾಯಾಲಯವು ಶುಕ್ರವಾರ ಆದೇಶಿಸಿದೆ.
ಕೊಲೆ ಆರೋಪದಲ್ಲಿ ತನ್ನ ಶಿಕ್ಷೆಯನ್ನು ಪೂರೈಸಿರುವ ವ್ಯಕ್ತಿಯನ್ನು ಅನಿರ್ದಿಷ್ಟಾವಧಿಯವರೆಗೆ ಜೈಲಿನಲ್ಲಿಡಬಹುದೇ ಎಂದು ಈ ವಾರದ ಪೂರ್ವಾರ್ಧದಲ್ಲಿ ವಿಚಾರಣೆ ಸಂದರ್ಭ ಪ್ರಶ್ನಿಸಿದ್ದ ನ್ಯಾಯಾಲಯವು,ಮಾನವ ಹಕ್ಕುಗಳನ್ನು ಪ್ರಸ್ತಾಪಿಸಿತ್ತು.
ತಾನು ಗರಿಷ್ಠ ನಿಗದಿತ ಶಿಕ್ಷೆಗಿಂತ ಹೆಚ್ಚಿನ ಅವಧಿಯನ್ನು ಜೈಲಿನಲ್ಲಿ ಕಳೆದಿರುವುದರಿಂದ ತನ್ನನ್ನು ಬಿಡುಗಡೆಗೊಳಿಸುವಂತೆ ಮಾಜಿ ಯುವ ಕಾಂಗ್ರೆಸ್ ನಾಯಕ ಶರ್ಮಾ(56) ನ್ಯಾಯಾಲಯವನ್ನು ಕೋರಿದ್ದ.
ಬಿಡುಗಡೆಗಾಗಿ ಶರ್ಮಾನ ಮನವಿಯನ್ನು ಶಿಕ್ಷೆಗಳ ಪುನರ್‌ಪರಿಶೀಲನೆ ಮಂಡಳಿಯು ತಿರಸ್ಕರಿಸಿದ್ದನ್ನು ಪ್ರಸ್ತಾಪಿಸಿದ್ದ ಉಚ್ಚ ನ್ಯಾಯಾಲಯವು, ಇದೊಂದು ಬರ್ಬರ ಹತ್ಯೆ,ಹೀಗಾಗಿ ಆತನನ್ನು ಬಿಡುಗಡೆಗೊಳಿಸುವುದಿಲ್ಲ ಎಂದು ಮಂಡಳಿಯು ಹೇಳುವಂತಿಲ್ಲ. ಆತನನ್ನು ಎರಡು ದಶಕಗಳಿಗೂ ಹೆಚ್ಚಿನ ಸಮಯ ಜೈಲಿನಲ್ಲಿಡಲಾಗಿದೆ. ಆತ ಮಾಡಿದ್ದ ಕೊಲೆ ಬರ್ಬರವಾಗಿತ್ತು,ನಿಜ. ಅದಕ್ಕಾಗಿ ಈಗಾಗಲೇ ಆತ ಶಿಕ್ಷೆಯನ್ನು ಅನುಭವಿಸಿದ್ದಾನೆ. ಇನ್ನೂ ಆತನನ್ನು ಜೈಲಿನಲ್ಲಿಟ್ಟರೆ ಅದು ಆತನ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು.
ವ್ಯಕ್ತಿಯೋರ್ವನನ್ನು ಅನಿರ್ದಿಷ್ಟಾವಧಿಯವರೆಗೆ ಜೈಲಿನಲ್ಲಿಡಲು ಕಾರ್ಯಾಂಗಕ್ಕೆ ಅವಕಾಶ ನೀಡಿದರೆ ಕೊಲೆ ಮಾಡಿದ ವ್ಯಕ್ತಿ ಎಂದೂ ಬಿಡುಗಡೆಗೊಳ್ಳುವಂತಿಲ್ಲ ಎಂದೂ ಅದು ಹೇಳಿತ್ತು. ತನ್ನ ಪತ್ನಿ ಅನೈತಿಕ ಸಂಬಂಧವನ್ನು ಹೊಂದಿದ್ದಾಳೆಂಬ ಶಂಕೆಯಿಂದ 1995,ಜು.2ರಂದು ಆಕೆಯೊಡನೆ ಜಗಳವಾಡಿದ್ದ ಶರ್ಮಾ ಗುಂಡಿಟ್ಟು ಹತ್ಯೆಗೈದಿದ್ದ. ಬಳಿಕ ಆಕೆಯ ಶವವನ್ನು ತುಂಡುಗಳನ್ನಾಗಿ ಮಾಡಿ ಹೊಟೇಲ್‌ನ ತಂದೂರ್ನಲ್ಲಿ ಸುಡಲು ಯತ್ನಿಸಿದ್ದ.
2003ರಲ್ಲಿ ಕೆಳ ನ್ಯಾಯಾಲಯವು ಆತನಿಗೆ ಮರಣ ದಂಡನೆಯನ್ನು ವಿಧಿಸಿತ್ತು ಮತ್ತು 2007ರಲ್ಲಿ ದಿಲ್ಲಿ ಉಚ್ಚ ನ್ಯಾಯಾಲಯವು ಇದನ್ನು ಎತ್ತಿ ಹಿಡಿದಿತ್ತು. 2013ರಲ್ಲಿ ಸರ್ವೋಚ್ಚ ನ್ಯಾಯಾಲಯವು ಮರಣ ದಂಡನೆಯನ್ನು ಜೀವಾವಧಿ ಶಿಕ್ಷೆಗೆ ತಗ್ಗಿಸಿತ್ತು.
ತಂದೂರ್ ಕೊಲೆ ಎಂದೇ ಕುಖ್ಯಾತಿಯನ್ನು ಪಡೆದಿದ್ದ ಈ ಪ್ರಕರಣದಲ್ಲಿ ಆರೋಪವನ್ನು ಸಾಬೀತುಗೊಳಿಸಲು ಡಿಎನ್‌ಎ ಸಾಕ್ಷಾಧಾರ ಮತ್ತು ಮರು ಮರಣೋತ್ತರ ಪರೀಕ್ಷೆಯನ್ನು ಬಳಸಿಕೊಳ್ಳಲಾಗಿದ್ದರಿಂದ ಇದು ಭಾರತದಲ್ಲಿ ಚಾರಿತ್ರಿಕ ಪ್ರಕರಣಗಳಲ್ಲೊಂದಾಗಿತ್ತು.