×
Ad

21 ವರ್ಷ ಹಿಂದೆ ದೋಷಮುಕ್ತನಾಗಿದ್ದ ಅತ್ಯಾಚಾರಿಗೆ ಕಾದಿತ್ತು ಶಿಕ್ಷೆ !

Update: 2018-12-23 09:34 IST

ಮುಂಬೈ, ಡಿ. 23: ಹನ್ನೊಂದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ 21 ವರ್ಷಗಳ ಹಿಂದೆ ದೋಷಮುಕ್ತನಾಗಿದ್ದ ನಾಸಿಕ್ ನಿವಾಸಿಯೊಬ್ಬನಿಗೆ ಮುಂಬೈ ಹೈಕೋರ್ಟ್ ಶಿಕ್ಷೆ ವಿಧಿಸಿ ಶನಿವಾರ ತೀರ್ಪು ನೀಡಿದೆ.

ನ್ಯಾಯಮೂರ್ತಿಗಳಾದ ಇಂದ್ರಜಿತ್ ಮೊಹಾಂತಿ ಮತ್ತು ವಿಶ್ವಾಸ್ ಜಾಧವ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ, ಮಚ್ಚೀಂದ್ರ ಸೋನಾವಾನ್ ಎಂಬಾತನನ್ನು ದೋಷಮುಕ್ತಗೊಳಿಸಿ ವಿಚಾರಣಾ ನ್ಯಾಯಾಲಯ ನೀಡಿದ್ದ ತೀರ್ಪನ್ನು ತಳ್ಳಿಹಾಕಿದೆ.

ಆಗ 19 ವರ್ಷದವನಾಗಿದ್ದ ಸೋನಾವಾನ್‌ಗೆ ಇದೀಗ 41 ವರ್ಷ. ಆರೋಪಿಯನ್ನು ತಪ್ಪಿತಸ್ಥ ಎಂದು ನಿರ್ಧರಿಸಿರುವ ಹೈಕೋರ್ಟ್ ಆತನಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಎರಡು ದಶಕ ವಿಳಂಬದ ಬಳಿಕ ತೀರ್ಪು ನೀಡುತ್ತಿರುವ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ತಳ್ಳಿಹಾಕಿದ ಹೈಕೋರ್ಟ್, ಅತ್ಯಾಚಾರ ಸಂತ್ರಸ್ತೆಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವಂತೆಯೂ ಆದೇಶಿಸಿದೆ. ಶರಣಾಗಲು ಸೋನಾವಾನ್‌ಗೆ ಒಂದು ತಿಂಗಳ ಅವಕಾಶ ನೀಡಲಾಗಿದೆ.

ಸೆಷನ್ಸ್ ನ್ಯಾಯಾಲಯ ತೀರ್ಪು ನೀಡುವಲ್ಲಿ ಪ್ರಮಾದ ಎಸಗಿದ್ದು, ಪ್ರಕರಣವನ್ನು ಹಗುರವಾಗಿ ಪರಿಗಣಿಸಿದೆ. ಅತ್ಯಾಚಾರಕ್ಕೀಡಾದ ಬಾಲಕಿಯ ವಯಸ್ಸು 14 ಎಂದು ಎಕ್ಸ್‌ರೇ ಅಸ್ಥೀಭವನ ಪರೀಕ್ಷೆಯಿಂದ ದೃಢಪಟ್ಟ ಕಾರಣ ನೀಡಿ ಆರೋಪಿಯನ್ನು ದೋಷಮುಕ್ತಗೊಳಿಸಿದೆ. ಎರಡು ಅಥವಾ ಮೂರು ವರ್ಷದ ವ್ಯತ್ಯಾಸ ಸಾಧ್ಯತೆಯನ್ನು ಗಣನೆಗೆ ತೆಗೆದುಕೊಂಡು, ಬಾಲಕಿಯ ವಯಸ್ಸನ್ನು 16 ಎಂದು ನಿರ್ಧರಿಸಿದೆ. 16ನೇ ವಯಸ್ಸನ್ನು ಒಪ್ಪಿತ ಸಂಬಂಧಕ್ಕೆ ಅರ್ಹವಾದ ವಯಸ್ಸು ಎಂದು ಪರಿಗಣಿಸಲಾಗಿದೆ ಎಂದು ಆಕ್ಷೇಪಿಸಿದೆ.

ಸಂತ್ರಸ್ತೆಯನ್ನು ಪತ್ತೆ ಮಾಡಿ, ಅತ್ಯಾಚಾರ ಸಂತ್ರಸ್ತೆಯರಿಗಾಗಿ ಮಹಾರಾಷ್ಟ್ರ ಸರ್ಕಾರದಿಂದ ಒದಗಿಸುವ ಪರಿಹಾರಧನ ವಿತರಿಸಲು ನೆರವಾಗುವಂತೆ ಕಾನೂನು ನೆರವು ಪ್ರಾಧಿಕಾರಕ್ಕೆ ಸೂಚನೆ ನೀಡಿದೆ.

1996ರ ಡಿಸೆಂಬರ್ 1ರಂದು ಬಾಲಕಿ ನಾಸಿಕ್‌ನ ತನ್ನ ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ, ಆರೋಪಿಯ ಅಂಗಡಿಗೆ ತಲೆನೋವಿನ ಮಾತ್ರೆ ಖರೀದಿಸುವ ಸಲುವಾಗಿ ಬಂದಿದ್ದಳು. ಸೋನಾವಾನ್ ಆಕೆಯನ್ನು ತನ್ನ ಕೊಠಡಿಗೆ ಎಳೆದೊಯ್ದು ಅತ್ಯಾಚಾರ ಎಸಗಿ ಮನೆಯಿಂದ ಹೊರಕ್ಕೆ ಎಸೆದಿದ್ದ. ಮನೆಯ ಮುಂದೆ ಬಾಲಕಿ ಬಿದ್ದಿದ್ದನ್ನು ನೋಡಿದ ಕುಟುಂಬದವರು ಬಾಲಕಿಯ ಬಟ್ಟೆಯಲ್ಲಿ ರಕ್ತದ ಕಲೆಗಳನ್ನು ಗಮನಿಸಿದ್ದರು. ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಬಲಾತ್ಕಾರದ ಸಂಭೋಗ ನಡೆಸಿರುವುದು ದೃಢಪಟ್ಟಿತ್ತು. ಆರೋಪಿಯನ್ನು ಪೊಲೀಸರು ಬಂಧಿಸಿದರೂ, 1997ರಲ್ಲಿ ಸೆಷನ್ಸ್ ನ್ಯಾಯಾಲಯ ಆತನನ್ನು ದೋಷಮುಕ್ತಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News