8ರ ಬಾಲಕಿಯ ಅತ್ಯಾಚಾರ, ಕೊಲೆ: 18 ವರ್ಷದ ಯುವಕನಿಗೆ ಮರಣದಂಡನೆ

Update: 2018-12-23 08:12 GMT

ಚಂಡೀಗಢ, ಡಿ.23: ಕಳೆದ ಜೂನ್‍ ತಿಂಗಳಲ್ಲಿ 8 ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಕೊಲೆ ಮಾಡಿದ್ದ 19 ವರ್ಷದ ಯುವಕನೊಬ್ಬನಿಗೆ ಹರ್ಯಾಣದ ರೇವರಿ ಕೋರ್ಟ್ ಮರಣದಂಡನೆ ವಿಧಿಸಿದೆ.

ಆರು ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ನರೇಶ್ ಕುಮಾರ್ ಅವರು, "ಹಾಡಹಗಲೇ ನಡೆದ ಈ ಘಟನೆಯನ್ನು ವಿರಳಾತಿವಿರಳ ಪ್ರಕರಣವಾಗಿದ್ದು, 2012ರ ನಿರ್ಭಯಾ ಪ್ರಕರಣಕ್ಕಿಂತ ಭಿನ್ನವೇನಲ್ಲ. ಆದ್ದರಿಂದ ಅಂಥದ್ದೇ ಶಿಕ್ಷೆಗೆ ಈ ಯುವಕ ಅರ್ಹ" ಎಂದು ತೀರ್ಪು ನೀಡಿದರು.

ಜಿಲ್ಲೆಯ ಬವಾಲ್ ಟೌನ್‍ಶಿಪ್‍ನ ಬಾಡಿಗೆ ಮನೆಯಲ್ಲಿ ಬಾಲಕಿ ಒಬ್ಬಂಟಿಯಾಗಿದ್ದಾಗ ಜೂನ್ 9ರಂದು ಈ ಘಟನೆ ನಡೆದಿತ್ತು. ಬಾಲಕಿಯ ತಂದೆ ಹಾಗೂ ತಾಯಿ ಆಕೆಯ ತಮ್ಮನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಬಾಲಕಿಯ ತಂದೆ ಕೆಲಸ ಮಾಡುತ್ತಿದ್ದ ಫ್ಯಾಕ್ಟರಿಯಲ್ಲಿ ಉದ್ಯೋಗದಲ್ಲಿದ್ದ ಯುವಕ, ಅದೇ ಮನೆಯ ಮತ್ತೊಂದು ಬಾಡಿಗೆ ಕೊಠಡಿಯಲ್ಲಿದ್ದ. ತನ್ನ ಕೊಠಡಿಗೆ ಬಾಲಕಿಯನ್ನು ಕರೆಸಿಕೊಂಡು ಈ ಕೃತ್ಯ ಎಸಗಿದ್ದ. ಎಂಟು ವರ್ಷದ ಬಾಲಕಿಗೆ ಅಶ್ಲೀಲ ಚಿತ್ರ ತೋರಿಸಿ, ಹಾಗೆಯೇ ತನ್ನ ಜತೆಗೂ ಸಖ್ಯ ಬೆಳೆಸುವಂತೆ ಬಲವಂತಪಡಿಸಿದ್ದ.

ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿ ಕೂಗಿಕೊಂಡಾಗ ಆಕೆಯ ಬಾಯಿಯನ್ನು ಮುಚ್ಚಿ ಕೈ ಕಾಲು ಕಟ್ಟಿ, ಅತ್ಯಾಚಾರ ಎಸಗಿದ್ದ. ಈ ಬಗ್ಗೆ ತಂದೆತಾಯಿಗೆ ದೂರು ನೀಡುತ್ತಾಳೆ ಎಂಬ ಭೀತಿಯಿಂದ ಆಕೆಯನ್ನು ಉಸಿರುಗಟ್ಟಿಸಿ, ತನ್ನ ಕೊಠಡಿಯ ಅಲ್ಮೆರಾದಲ್ಲಿ ದೇಹವನ್ನು ಹುದುಗಿಸಿಟ್ಟಿದ್ದ.

ತಂದೆ ತಾಯಿ ಬಂದು ಬಾಲಕಿಯನ್ನು ಹುಡುಕುವಾಗ, ಆಕೆ ತನ್ನ ಸ್ನೇಹಿತೆಯ ಮನೆಗೆ ಹೋಗುವುದನ್ನು ನೋಡಿದ್ದಾಗಿ ಈತ ತಿಳಿಸಿದ್ದ. ಆದರೆ ಯುವಕನ ವೈರುದ್ಧ್ಯದ ಹೇಳಿಕೆ ಬಗ್ಗೆ ಸಂಶಯಗೊಂಡ ಪೊಲೀಸರು ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಿಜಾಂಶ ಬಯಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News