ನಿಮಗೆ ಗೊತ್ತಿರಲಿ.... ಡೀಸೆಲ್ ಕಾರುಗಳ ಬೆಲೆ ಪೆಟ್ರೋಲ್ ಕಾರುಗಳಿಗಿಂತ 2.5 ಲ.ರೂ.ಹೆಚ್ಚಾಗಲಿದೆ
ವಾಹನೋದ್ಯಮವು ಪೆಟ್ರೋಲ್ ಚಾಲಿತ ವಾಹನಗಳ ತಯಾರಿಕೆಯತ್ತ ಹೆಚ್ಚೆಚ್ಚು ವಾಲುತ್ತಿದ್ದು,ಈ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ವರ್ಷವಿಡೀ ಚರ್ಚೆಯಾಗುತ್ತಲೇ ಇದೆ. ಈಗ ಸನ್ನಿಹಿತವಾಗಿರುವ ಪ್ರಮುಖ ಬದಲಾವಣೆಯೆಂದರೆ 2020ರಿಂದ ಭಾರತ್ ಸ್ಟೇಜ್-4 ಅಥವಾ ಬಿಎಸ್4 ವಾಹನಗಳ ಮಾರಾಟ ಸ್ಥಗಿತಗೊಳ್ಳಲಿದೆ ಮತ್ತು ಬಿಎಸ್6 ವಾಹನಗಳು ರಸ್ತೆಗಿಳಿಯಲಿವೆ.
ಭಾರತ್ ಸ್ಟೇಜ್ ಎಂದರೆ ಕೇಂದ್ರ ಸರಕಾರವು ವಾಹನಗಳಿಗೆ ನಿಗದಿ ಮಾಡಿರುವ ಮಾಲಿನ್ಯ ಪ್ರಮಾಣದ ಮಾನದಂಡ. 2017,ಎಪ್ರಿಲ್‌ನಲ್ಲಿ ಬಿಎಸ್3 ವಾಹನಗಳು ಹೊರಸೂಸುವ ಹೊಗೆಯಲ್ಲಿ ಅಧಿಕ ಮಾಲಿನ್ಯವಿದೆ ಎಂದು ಅವುಗಳ ಮಾರಾಟವನ್ನು ಸರಕಾರವು ನಿಷೇಧಿಸಿತ್ತು ಮತ್ತು ಬಿಎಸ್4 ವಾಹನಗಳ ತಯಾರಿಕೆಗೆ ಆದೇಶಿಸಿತ್ತು. ವಾಹನ ತಯಾರಿಕೆ ಕಂಪನಿಗಳು 2020ರಿಂದ ಬಿಎಸ್4 ವಾಹನಗಳ ಮಾರಾಟವನ್ನು ಸ್ಥಗಿತಗೊಳಿಸಿ ಬಿಎಸ್6 ವಾಹನಗಳನ್ನು ಬಿಡುಗಡೆಗೊಳಿಸಬೇಕಿದೆ. ಇದಕ್ಕಾಗಿ ಅಗತ್ಯ ಮಾರ್ಪಾಡುಗಳನ್ನು ಮಾಡಿಕೊಳ್ಳಲು ವಾಹನ ಮತ್ತು ತೈಲ ಕೈಗಾರಿಕೆಗಳು ಒಂದು ಲಕ್ಷ ಕೋಟಿ ರೂ.ಗಳ ಹೊರೆಯನ್ನು ಭರಿಸಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ನೂತನ ಮಾನದಂಡಗಳ ನೇರ ಪರಿಣಾಮವುಂಟಾಗುವುದು 2000ದ ದಶಕದಲ್ಲಿ ಜನಪ್ರಿಯತೆಯ ಉತ್ತುಂಗಕ್ಕೇರಿದ್ದ ಡೀಸೆಲ್ ಚಾಲಿತ ಸಣ್ಣ ಕಾರುಗಳ ಮೇಲೆ. ಬಿಎಸ್6 ಮಾನದಂಡ ಜಾರಿಗೆ ಬಂದ ನಂತರ ಡೀಸೆಲ್ ಕಾರುಗಳು ದುಬಾರಿಯಾಗಲಿವೆ ಮಾತ್ರವಲ್ಲ,ಅವುಗಳ ತಯಾರಿಕೆಯೂ ಕಂಪನಿಗಳಿಗೆ ಕಠಿಣವಾಗಲಿದೆ.
ಬಿಎಸ್6 ಮಾನದಂಡಕ್ಕೆ ಅನುಗುಣವಾದ ಡೀಸೆಲ್ ಕಾರುಗಳು ಅವುಗಳ ಪೆಟ್ರೋಲ್ ಆವೃತ್ತಿಗೆ ಹೋಲಿಸಿದರೆ ಸುಮಾರು 2.5 ಲ.ರೂ.ಗಳಷ್ಟು ದುಬಾರಿಯಾಗಬಹುದು ಎಂದು ಅಗ್ರಗಣ್ಯ ಕಾರು ತಯಾರಿಕೆ ಸಂಸ್ಥೆ ಮಾರುತಿ ಸುಝುಕಿ ಈಗಾಗಲೇ ಸುಳಿವು ನೀಡಿದೆ. ಹಾಲಿ ಡೀಸೆಲ್ ಕಾರುಗಳು ಮತ್ತು ಅವುಗಳ ಪೆಟ್ರೋಲ್ ಆವೃತ್ತಿಗಳ ಬೆಲೆಗಳ ನಡುವೆ 80,000 ರೂ.ಗಳಿಂದ 1,50,000 ಲ.ರೂ.ವರೆಗೂ ವ್ಯತ್ಯಾಸವಿದೆ. ಆದರೆ 2020ರಲ್ಲಿ ಬಿಎಸ್ 6 ಜಾರಿಗೊಳ್ಳುವುದರೊಂದಿಗೆ ಪೆಟ್ರೋಲ್ ಹಾಗೂ ಸಿಎನ್‌ಜಿ ಮತ್ತು ವಿದ್ಯುತ್‌ನಂತಹ ಹಸಿರು ಇಂಧನಗಳತ್ತ ಒತ್ತು ಇನ್ನಷ್ಟು ಚುರುಕುಗೊಳ್ಳಲಿದೆ. ಈಗ ಏಳುವ ಪ್ರಶ್ನೆಯೆಂದರೆ ಡೀಸೆಲ್ ಕಾರುಗಳೇಕೆ ಹೆಚ್ಚು ದುಬಾರಿಯಾಗಲಿವೆ ಎನ್ನುವುದು.
ಡೀಸೆಲ್ ಇಂಜಿನ್‌ಗಳ ವಿಷಯದಲ್ಲಿ ಕಟ್ಟುನಿಟ್ಟಿನ ಮಾಲಿನ್ಯ ನಿಯಮಾವಳಿಗಳಿಗೆ ಅಂಟಿಕೊಳ್ಳುವುದು ಸಾಮಾನ್ಯವಾಗಿ ಜಟಿಲವಾಗಿದೆ. ಬಿಎಸ್6 ಗೆ ಬದಲಾಗುವಾಗ ಡೀಸೆಲ್ ವಾಹನಗಳು ಹೊರಸೂಸುವ ಹೊಗೆ ಕಡಿಮೆ ಮಾಲಿನ್ಯವನ್ನು ಹೊಂದಿರುವಂತೆ ಮಾಡಬೇಕಾದರೆ ಇಂಜಿನ್‌ನಲ್ಲಿ ಹೆಚ್ಚಿನ ಪರಿವರ್ತನೆಗಳು ಅಗತ್ಯವಾಗುತ್ತವೆ. ವಾಹನಗಳಿಂದ ಹೊರಸೂಸುವ ಪಾರ್ಟಿಕ್ಯುಲೇಟ್ ಮ್ಯಾಟರ್(ಪಿಎಂ) ಅನ್ನು ನಿಯಂತ್ರಿಸಲು ಅವುಗಳಿಗೆ ಡೀಸೆಲ್ ಪಾರ್ಟಿಕ್ಯುಲೇಟ್ ಫಿಲ್ಟರ್‌ಗಳನ್ನು ಅಳವಡಿಸಬೇಕಾಗುತ್ತದೆ. ನೈಟ್ರೋಜನ್ ಆಕ್ಸೈಡ್‌ಗಳನ್ನು ಸೆಲೆಕ್ಟಿವ್ ಕೆಟಾಲಿಟಿಕ್ ರಿಡಕ್ಷನ್(ಎಸ್‌ಸಿಆರ್)ಮೂಲಕ ನಿರ್ವಹಿಬೇಕಾಗುತ್ತದೆ. ಇದಕ್ಕಾಗಿ ಅಮೋನಿಯಾವನ್ನು ಬಳಸಬೇಕಾಗುತ್ತದೆ ಮತ್ತು ಈ ಅಮೋನಿಯಾ ಟ್ಯಾಂಕ್‌ನ್ನು ಆಗಾಗ್ಗೆ ತುಂಬಿಸುತ್ತಿರಬೇಕಾಗುತ್ತದೆ. ಇವೆಲ್ಲವುಗಳನ್ನು ಒಟ್ಟಾಗಿ ಪರಿಗಣಿಸಿದಾಗ ಡೀಸೆಲ್ ಕಾರುಗಳ ಖರೀದಿ ಮಾತ್ರವಲ್ಲ,ಅವುಗಳ ತಯಾರಿಕೆ ಕೂಡ ವ್ಯಾವಹಾರಿಕವಾಗುವುದಿಲ್ಲ. ಯುರೋಪ್‌ನಲ್ಲಿ ಈಗಾಗಲೇ ಇಂತಹ ಮಾಲಿನ್ಯ ನಿಯಂತ್ರಣ ಮಾನದಂಡಗಳು ಹಲವಾರು ಡೀಸೆಲ್ ಮಾಡೆಲ್‌ಗಳಿಗೆ ಇತಿಶ್ರೀ ಹಾಡಿವೆ. 2020ರಲ್ಲಿ ಬಿಎಸ್6 ಜಾರಿಗೊಂಡ ಬಳಿಕ ಭಾರತೀಯ ವಾಹನ ತಯಾರಿಕೆ ಕಂಪನಿಗಳೂ ಇದೇ ಜಾಡಿನಲ್ಲಿ ಸಾಗುವ ಸಾಧ್ಯತೆಯಿದೆ.