×
Ad

‘ರಾಜಕೀಯ ಲಾಭಕ್ಕಾಗಿ’ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ನಿಧಿಯ ಬಳಕೆ

Update: 2018-12-24 11:10 IST

ಭಾರತದ ಮಹಾಲೇಖಪಾಲರ ಪ್ರಕಾರ, ಸರ್ದಾರ್ ಪಟೇಲ್ ಪ್ರತಿಮೆ ಒಂದು ಪಾರಂಪರಿಕ ಸೊತ್ತು ಅಲ್ಲದ ಕಾರಣ, ಸಿಎಸ್‌ಆರ್ ಚಟುವಟಿಕೆಯಡಿ ಈ ಯೋಜನೆಗೆ ದೇಣಿಗೆ ಪಡೆಯಲು ಕಂಪೆನಿಗಳ ಕಾಯ್ದೆ 2013ರ ಏಳನೇ ಪರಿಚ್ಛೇದದ ಪ್ರಕಾರ ಅರ್ಹವಾಗುವುದಿಲ್ಲ.

ಕಂಪೆನಿ ಕಾಯ್ದೆಯಡಿಯಲ್ಲಿ 2014ರಿಂದೀಚೆಗೆ ಕಂಪೆನಿಗಳ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ವೆಚ್ಚದಲ್ಲಿ ಉಂಟಾಗಿರುವ ಸ್ಥಿರವಾದ ಏರಿಕೆ ಸ್ವಾಗತಾರ್ಹವಾಗಿದ್ದರೂ ಈ ವೆಚ್ಚಗಳನ್ನು ಪ್ರತ್ಯೇಕಿಸಿ ನೋಡಿದಾಗ ಸಿಎಸ್‌ಆರ್ ನಿಧಿಗಳು ರಾಜಕೀಯ ಒತ್ತಡಕ್ಕೆ ಒಳಗಾಗಿರುವ ಗಂಭೀರ ಅಂಶವನ್ನು ಬಯಲುಗೊಳಿಸುತ್ತದೆ. ಎನ್‌ಎಸ್‌ಇ ಪಟ್ಟಿಯಲ್ಲಿರುವ 1,627 ಕಂಪೆನಿಗಳನ್ನು ಪರಿಶೀಲಿಸಿರುವ ಪ್ರೈಮ್ ಡೇಟಾಬೇಸ್ ಗ್ರೂಪ್ ಪ್ರಕಾರ, 2017-18ರ ಅವಧಿಯಲ್ಲಿ ಕಂಪೆನಿಗಳ ಕಾಯ್ದೆಯ ಸೆಕ್ಷನ್ 135ರ ಅಡಿಯಲ್ಲಿ ಕಡ್ಡಾಯ ಸಿಎಸ್‌ಆರ್ ವೆಚ್ಚ 10,000 ಕೋಟಿ ರೂ. ಆಗಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.11 ಏರಿಕೆಯನ್ನು ತೋರಿಸುತ್ತದೆ. ಹಿಂದಿನ ವರ್ಷಗಳಿಗೆ ಅನುಗುಣವಾಗಿ ಮತ್ತು ನಿರೀಕ್ಷೆಯಂತೆ, ಶಿಕ್ಷಣ (3,850 ಕೋಟಿ ರೂ.), ಆರೋಗ್ಯಸೇವೆ, ಬಡತನ ಮತ್ತು ಹಸಿವು (2,485 ಕೋಟಿ ರೂ.) ಹಾಗೂ ಪರಿಸರ ಸ್ಥಿರತೆ (829 ಕೋಟಿ ರೂ.)ಗೆ ಹೆಚ್ಚು ವೆಚ್ಚ ಮಾಡಲಾಗುತ್ತದೆ. ಆದರೆ, ಇತರ ಕೆಲವು ವಿಭಾಗಗಳಲ್ಲಿ ಮಾಡಲಾಗಿರುವ ವೆಚ್ಚಗಳನ್ನು ಪ್ರತ್ಯೇಕಿಸಿ ನೋಡಿದಾಗ ತಿಳಿದು ಬರುವುದೇನೆಂದರೆ, ಈ ವಿಭಾಗಗಳಲ್ಲಿ ಮಾಡಲಾಗಿರುವ ವೆಚ್ಚಗಳು ಕಂಪೆನಿಗಳು ತಮ್ಮ ಲಾಭದಲ್ಲಿ ಸ್ವಲ್ಪ ಭಾಗವನ್ನು ಸಾಮಾಜಿಕ ಜವಾಬ್ದಾರಿ ಹೊಂದಿರುವ ವೆಚ್ಚಕ್ಕೆ ಮೀಸಲಿಡುವಂತೆ ಮಾಡಲು ಕಾಯ್ದೆಯಲ್ಲಿ ಮಾಡಲಾಗಿರುವ ತಿದ್ದುಪಡಿಯ ಆಶಯಕ್ಕೆ ತಕ್ಕಂತೆ ಇಲ್ಲ ಎನ್ನುವುದು. ಸರಕಾರವು ಸಿಎಸ್‌ಆರ್ ನಿಧಿಗಳನ್ನು ಬಜೆಟೇತರ ವೆಚ್ಚವನ್ನು ಭರಿಸಲು ಹಾಲು ಕರೆಯುವ ದನದಂತೆ ಮತ್ತು ರಾಜಕೀಯ ಲಾಭದ ಸಾಧನವಾಗಿ ನೋಡುತ್ತಿದೆ ಎಂಬುದನ್ನು ಈ ಅಂಕಿಅಂಶಗಳು ತಿಳಿಸುತ್ತವೆ. ಅದಕ್ಕೆ ಈ ಕೆಳಗಿನ ಕೆಲವು ಉದಾಹರಣೆಗಳನ್ನು ಪರಿಗಣಿಸಬಹುದು;

► ಸರ್ದಾರ್ ವಲ್ಲಭ ಭಾಯ್ ಪಟೇಲ್ ಪ್ರತಿಮೆಗೆ ಸಿಎಸ್‌ಆರ್ ನಿಧಿ ದುರ್ಬಳಕೆ

ಸಿಎಸ್‌ಆರ್ ಮತ್ತು ಸ್ಥಿರ ಬಾಳಿಕೆ ವ್ಯವಸ್ಥಾಪನಾ ವೇದಿಕೆ, ಗೊಡೇರ ನಡೆಸಿದ 92 ಕಂಪೆನಿಗಳ ವಿಶ್ಲೇಷಣೆಯ ಪ್ರಕಾರ, ವಿತ್ತ ವರ್ಷ 2016ರಲ್ಲಿ ರಾಷ್ಟ್ರೀಯ ಪಾರಂಪರಿಕ ಸಂರಕ್ಷಣೆ ವಿಭಾಗದಲ್ಲಿ ಕೇವಲ 46.51 ಕೋಟಿ ರೂ. ವೆಚ್ಚ ಮಾಡಲಾಗಿತ್ತು. ವಿತ್ತ ವರ್ಷ 2017ರಲ್ಲಿ ಈ ಮೊತ್ತ ಏಕಾಏಕಿ 155.78 ಕೋಟಿ ರೂ.ಗೆ ಏರಿಕೆಯಾಗಿತ್ತು. ಇದಕ್ಕೆ ಕಾರಣ, ತೈಲ ಮತ್ತು ನೈಸರ್ಗಿಕ ಅನಿಲ ನಿಗಮ, ಹಿಂದೂಸ್ಥಾನ್ ಪೆಟ್ರೋಲಿಯಂ ನಿಗಮ ನಿಯಮಿತ, ಭಾರತೀಯ ಪೆಟ್ರೋಲಿಯಂ ನಿಗಮ ನಿಯಮಿತ, ಇಂಡಿಯನ್ ಆಯಿಲ್ ನಿಗಮ ನಿಯಮಿತ ಮತ್ತು ಆಯಿಲ್ ಇಂಡಿಯಾ ನಿಯಮಿತ-ಈ ಐದು ಸಾರ್ವಜನಿಕ ಕ್ಷೇತ್ರಗಳ ಕಂಪೆನಿಗಳು (ಪಿಎಸ್‌ಯು) ಒಟ್ಟಾರೆಯಾಗಿ, ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನಲ್ಲಿ ಅನಾವರಣಗೊಳಿಸಿದ ಆಡಳಿತ ಪಕ್ಷದ ಮೆಚ್ಚಿನ ಯೋಜನೆ ಏಕತೆಯ ಪ್ರತಿಮೆಗೆ 146.83 ಕೋಟಿ ರೂ. ನೀಡಿತ್ತು (ಒಎನ್‌ಜಿಸಿ-50 ಕೋಟಿ ರೂ., ಐಒಸಿಎಲ್-21.83 ಕೋಟಿ ರೂ., ಬಿಪಿಸಿಎಲ್,ಎಚ್‌ಪಿಸಿಎಲ್,ಒಐಎಲ್-ತಲಾ 25 ಕೋಟಿ ರೂ.). ಈ ವೆಚ್ಚವನ್ನು ರಾಷ್ಟ್ರೀಯ ಪರಂಪರೆ ಸಂರಕ್ಷಣಾ ವಿಭಾಗದಡಿಯಲ್ಲಿ ನಿಗದಿಪಡಿಸಲಾಗಿದ್ದ ಸಿಎಸ್‌ಆರ್ ನಿಧಿಯಿಂದ ಭರಿಸಲಾಗಿತ್ತು. ಇದರ ಜೊತೆಗೆ ಗುಜರಾತ್‌ನ 14 ಸಾರ್ವಜನಿಕ ಕ್ಷೇತ್ರದ ಕಂಪೆನಿಗಳು ಇದೇ ಯೋಜನೆಗೆ ಸಿಎಸ್‌ಆರ್ ಅಡಿ 104.88 ಕೋಟಿ ರೂ. ದೇಣಿಗೆ ನೀಡಿತ್ತು. ಸಾರ್ವಜನಿಕ ಕ್ಷೇತ್ರದ ಈ ಕಂಪೆನಿಗಳು ಕೇಂದ್ರ ಮತ್ತು ಗುಜರಾತ್ ಸರಕಾರದ ಸೂಚನೆಯಂತೆ ಏಕತೆಯ ಪ್ರತಿಮೆಗೆ ಹಣವನ್ನು ನೀಡಿವೆ ಎಂಬುದನ್ನು ತಿಳಿಯಲು ಯಾವುದೇ ರೀತಿಯ ವಿಶ್ಲೇಷಣೆಗಳನ್ನು ಮಾಡುವ ಅಗತ್ಯವಂತೂ ಇಲ್ಲ. ಕಂಪೆನಿಗಳ ಕಾಯ್ದೆಯ ಸಂಬಂಧಿತ ನಿಬಂಧನೆಗಳಲ್ಲಿ ಸೂಚಿಸಲಾಗಿರುವ ಕಠಿಣ ಮಾನದಂಡಗಳನ್ನು ಪರಿಗಣಿಸಿದಾಗ, ಸಿಎಸ್‌ಆರ್ ಹೆಸರಲ್ಲಿ ಈ ಯೋಜನೆಗೆ ಸಾರ್ವಜನಿಕ ರಂಗದ ಕಂಪೆನಿಗಳು ಮಾಡಿರುವ ವೆಚ್ಚಕ್ಕೆ ಅವಕಾಶವಿದೆಯೇ ಎಂಬುದನ್ನು ಪ್ರಶ್ನಿಸುವುದು ಹೆಚ್ಚು ಸೂಕ್ತವಾಗುತ್ತದೆ.

ಭಾರತದ ಮಹಾಲೇಖಪಾಲರ ಪ್ರಕಾರ, ಸರ್ದಾರ್ ಪಟೇಲ್ ಪ್ರತಿಮೆ ಒಂದು ಪಾರಂಪರಿಕ ಸೊತ್ತು ಅಲ್ಲದ ಕಾರಣ, ಸಿಎಸ್‌ಆರ್ ಚಟುವಟಿಕೆಯಡಿ ಈ ಯೋಜನೆಗೆ ದೇಣಿಗೆ ಪಡೆಯಲು ಕಂಪೆನಿಗಳ ಕಾಯ್ದೆ 2013ರ ಏಳನೇ ಪರಿಚ್ಛೇದದ ಪ್ರಕಾರ ಅರ್ಹವಾಗುವುದಿಲ್ಲ. 2018ರ ಆಗಸ್ಟ್ 7ರಂದು ಸಂಸತ್‌ನಲ್ಲಿ ಒಪ್ಪಿಸಲಾದ ಸಿಎಜಿ ವರದಿಯಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ನಿಯಂತ್ರಣದಲ್ಲಿರುವ ಸಾರ್ವಜನಿಕ ಕ್ಷೇತ್ರದ ಕಂಪೆನಿಗಳ ಸಿಎಸ್‌ಆರ್ ನಿಧಿಗಳಲ್ಲಿ ವ್ಯಾಪಕ ಅವ್ಯವಹಾರ ನಡೆದಿರುವುದನ್ನು ಬಹಿರಂಗಗೊಳಿಸಲಾಗಿದೆ.

► ದನಗಳಿಗೆ ಸಿಎಸ್‌ಆರ್ ನಿಧಿ

ಇನ್ನು ಆಡಳಿತ ಪಕ್ಷದ ರಾಜಕೀಯ ಉದ್ದೇಶವನ್ನು ಪೂರೈಸಲು ಸಿಎಸ್‌ಆರ್ ನಿಧಿಯನ್ನು ಬಳಸಿರುವ ಇನ್ನೊಂದು ವಿಭಾಗವೆಂದರೆ ಪಶು ಕಲ್ಯಾಣ. ಪ್ರೈಮ್ ಡೇಟಾಬೇಸ್ ನೀಡಿರುವ ಅಂಕಿಅಂಶಗಳ ಪ್ರಕಾರ, ಗೋವು ಸಂಬಂಧಿತ ಚಟುವಟಿಕೆಗಳಿಗೆ ಅಥವಾ ಗೋಸೇವೆಗೆ, ಮುಖ್ಯವಾಗಿ, ಗೋಶಾಲೆಗಳನ್ನು ನಡೆಸಲು ಮತ್ತು ನಿಭಾಯಿಸಲು 41 ಕಂಪೆನಿಗಳು 73 ಪ್ರತ್ಯೇಕ ದೇಣಿಗೆಗಳನ್ನು ನೀಡಿದೆ. ಈ ದೇಣಿಗೆಗಳಲ್ಲಿ ಕೆಲವು ಸಾವಿರದಿಂದ ಕೋಟಿ ರೂ.ವರೆಗೂ ಇದೆ. 2017-18ರಲ್ಲಿ ದೇಣಿಗೆಗಳಲ್ಲಿ ಏರಿಕೆ ಕಂಡು, ಜೀನಸ್ ಪವರ್ ಇನ್‌ಫ್ರಾಸ್ಟ್ರಕ್ಚರ್ ಮತ್ತು ಪೈಸಾಲೋ ಡಿಜಿಟಲ್‌ನಂಥ ವಿಭಿನ್ನ ಕಂಪೆನಿಗಳೂ ಸೇರಿ 28 ಕಂಪೆನಿಗಳು ತಮ್ಮ ಪಾಲಿನ ಮೊತ್ತವನ್ನು ನೀಡಿದವು. ಹನ್ನೊಂದು ಲಕ್ಷ ರೂ.ನಿಂದ ಒಂದು ಕೋಟಿ ರೂ.ವರೆಗೆ ಸಿಎಸ್‌ಆರ್ ನಿಧಿಯನ್ನು ಈ ಕಂಪೆನಿಗಳು ಗೋರಕ್ಷಣೆ ಚಟುವಟಿಕೆಗಳಿಗೆ ನೀಡಿವೆ. 2017-18ರ ಸಾಲಿನಲ್ಲಿ ಗೋ ಸಂಬಂಧಿ ಚಟುವಟಿಕೆಗಳಿಗೆ ಪಡೆಯಲಾದ ಅತ್ಯಂತ ಹೆಚ್ಚಿನ ದೇಣಿಗೆಯೆಂದರೆ ಒಂಬತ್ತು ಕೋಟಿ ಇಪ್ಪತ್ತು ಲಕ್ಷ ರೂ. ಆಗಿದೆ. ಕಂಪೆನಿಗಳ ಕಾಯ್ದೆಯ ಏಳನೇ ಪರಿಚ್ಛೇದದಲ್ಲಿ ಪಶು ಕಲ್ಯಾಣ ಚಟುವಟಿಕೆಗಳನ್ನು ಸಿಎಸ್‌ಆರ್ ಹಣವನ್ನು ವೆಚ್ಚ ಮಾಡಬಹುದಾದ ವಿಭಾಗಗಳಲ್ಲಿ ಒಂದು ಎಂದು ಉಲ್ಲೇಖಿಸಲಾಗಿದ್ದರೂ ಗೋ ಸಂಬಂಧಿ ಚಟುವಟಿಕೆಗಳ ಮೇಲೆಯೇ ಹೆಚ್ಚಿನ ಗಮನಹರಿಸಿರುವುದು ಹೊಸತು. ಸಮಾಜದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಪರಿವರ್ತನೆಯನ್ನು ತರಬಹುದಾದ ಗೋಶಾಲೆಗಳಿಗೆ ಬೆಂಬಲ ನೀಡುವುದನ್ನು ಕಂಪೆನಿಗಳು ಗಂಭೀರವಾಗಿ ಪರಿಗಣಿಸಿರುವುದನ್ನು ಕಂಡಾಗ ಆಶ್ಚರ್ಯವೆನಿಸುತ್ತದೆ. ಇದೇ ವೇಳೆ ಒಟ್ಟಾರೆ ಸಿಎಸ್‌ಆರ್ ನಿಧಿಯಲ್ಲಿ ಮಕ್ಕಳ ಸಾವಿನ ಪ್ರಮಾಣ ಕಡಿಮೆ ಮಾಡುವ ಪ್ರಯತ್ನಕ್ಕೆ ಯಾವುದೇ ಹಣ ಲಭ್ಯವಾಗಿಲ್ಲ ಮತ್ತು ತೀವ್ರ ಹಸಿವು ಮತ್ತು ಬಡತನ ನಿವಾರಣೆಗೆ ಕೇವಲ ಶೇ.6 ಲಭಿಸಿದೆ, ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸುತ್ತಿದ್ದ ಮತ್ತು ಆದಾಯ ಸೃಷ್ಟಿಸಬಹುದಿದ್ದ ತಂತ್ರಜ್ಞಾನ ಅಭಿವೃದ್ಧಿ ಕೇಂದ್ರಗಳು ಕೇವಲ 38 ಕೋಟಿ ರೂ. (2016-17ರಲ್ಲಿ 40 ಕೋಟಿ ರೂ.) ಪಡೆಯಲಷ್ಟೇ ಶಕ್ತವಾಗಿವೆ. ಭಾರತದಲ್ಲಿ ಶೇ.50 ಮಕ್ಕಳು ತೀವ್ರ ಬಡತನದಿಂದ ಅಪೌಷ್ಟಿಕತೆಗೆ ಒಳಗಾಗಿರುವುದನ್ನು ಮತ್ತು ಹೊಸ ಸ್ಟಾರ್ಟ್‌ಅಪ್‌ಗಳಿಂದ ಸಮಾಜದಲ್ಲಿ ದೀರ್ಘಾವಧಿಯ ಲಾಭ ಉಂಟುಮಾಡುವಂಥ ಬದಲಾವಣೆಗಳನ್ನು ತರಬಹುದು ಎಂಬುದನ್ನು ಗಮನಿಸಿದಾಗ ಈ ಕಂಪೆನಿಗಳು, ಕಂಪೆನಿಗಳ ಕಾಯ್ದೆಯ ಉದ್ದೇಶವನ್ನು ಬದಿಗೊತ್ತಿ, ಸಿನಿಕತನದಿಂದ ಆಡಳಿತಾರೂಢ ಸರಕಾರದ ರಾಜಕೀಯ ಆಶಯಗಳಿಗೆ ಹೊಂದಿಕೆಯಾಗುವಂತೆ ತಮ್ಮ ಚಟುವಟಿಕೆಗಳನ್ನು ಬದಲಾಯಿಸುತ್ತಿರುವಂತೆ ಕಾಣುತ್ತದೆ. ಮೂರನೆಯ ಆಸಕ್ತಿದಾಯಕ ಅಂಶವೆಂದರೆ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ನೀಡುವ ದೇಣಿಗೆಯಲ್ಲಿ ಏರಿಕೆ (172 ಕೋಟಿ ರೂ. ಅಂದರೆ ಶೇ.100 ಏರಿಕೆ) ಮತ್ತು ಕಳೆದ ವರ್ಷದವರೆಗೆ ಸರಕಾರದ ಮೆಚ್ಚಿನ ವಿಭಾಗಗಳಾದ ಸ್ವಚ್ಛ ಭಾರತ ಅಭಿಯಾನ (520 ಕೋಟಿ ರೂ.) ಮತ್ತು ಗಂಗಾ ನದಿ ಸ್ವಚ್ಛತೆ (80 ಕೋಟಿ ರೂ.) ಮೇಲಿನ ವೆಚ್ಚದಲ್ಲಿ ಇಳಿಕೆ. ಕೊನೆಯ ಎರಡು ಯೋಜನೆಗಳು ಸರಕಾರಿ ಪ್ರಾಯೋಜಿತವಾಗಿದ್ದರೂ ಪರಿವರ್ತನೆಯ ಸಾಮರ್ಥ್ಯವನ್ನು ಹೊಂದಿದ್ದು, ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ನೀಡುವ ದೇಣಿಗೆಯಲ್ಲಿ ಉಂಟಾಗಿರುವ ಏರಿಕೆಯು ಏನಾದರೂ ಕ್ರಿಯಾಶೀಲ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂಬ ತುಡಿತವನ್ನು ಈ ಕಂಪೆನಿಗಳು ಕಳೆದುಕೊಂಡಿರುವುದನ್ನು ಸೂಚಿಸುತ್ತದೆ.

► ಪ್ರದೇಶದ ಆಯ್ಕೆಯಲ್ಲಿ ರಾಜಕೀಯ

ಸರಕಾರವು ಸಿಎಸ್‌ಆರ್ ನಿಧಿಯನ್ನು ಹಾಲು ಕರೆಯುವ ದನವೆಂದು ಪರಿಗಣಿಸಿರುವುದಕ್ಕೆ ಇನ್ನೊಂದು ಉದಾಹರಣೆ ವೆಚ್ಚ ಮಾಡಲು ಆಯ್ಕೆ ಮಾಡುವ ಭೌಗೋಳಿಕ ಪ್ರದೇಶಗಳು. ಸಿಎಜಿ ವರದಿ ಪ್ರಕಾರ, ಬಹುತೇಕ ಕೇಂದ್ರ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳು ತಮ್ಮ ಹೆಚ್ಚಿನ ಸಿಎಸ್‌ಆರ್ ನಿಧಿಯನ್ನು ಆಡಳಿತ ಸರಕಾರ ರಾಜಕೀಯ ಹಿತಾಸಕ್ತಿ ಹೊಂದಿರುವ ಗುಜರಾತ್, ಉತ್ತರ ಪ್ರದೇಶ, ಛತ್ತೀಸ್‌ಗಡ, ಒಡಿಶಾ ಮತ್ತು ಆಂಧ್ರ ಪ್ರದೇಶದಲ್ಲಿ ವೆಚ್ಚ ಮಾಡಿವೆ. 24 ಸಚಿವಾಲಯಗಳ ಅಧೀನದಲ್ಲಿರುವ 77 ಕೇಂದ್ರ ಸಾರ್ವಜನಿಕ ಕ್ಷೇತ್ರಗಳ ಉದ್ದಿಮೆಗಳ ಸಿಎಸ್‌ಆರ್ ನಿಧಿಯಲ್ಲಿ ಪಂಜಾಬ್ ಮತ್ತು ಈಶಾನ್ಯ ರಾಜ್ಯಗಳಾದ ಮಿರೆರಾಂ, ಮಣಿಪುರ, ನಾಗಾಲ್ಯಾಂಡ್ ಮತ್ತು ಸಿಕ್ಕಿಂನಲ್ಲಿ ಬಹಳ ಕನಿಷ್ಠ ಮೊತ್ತವನ್ನು ವೆಚ್ಚ ಮಾಡಲಾಗಿದೆ ಎಂದು ಸಿಎಜಿ ವರದಿ ತಿಳಿಸುತ್ತದೆ. ಖಾಸಗಿ ಕ್ಷೇತ್ರದ ಕಂಪೆನಿಗಳ ಸಿಎಸ್‌ಆರ್ ನಿಧಿಗಳನ್ನೂ ಬಹುತೇಕವಾಗಿ ಅಭಿವೃದ್ಧಿ ಹೊಂದಿರುವ ರಾಜ್ಯಗಳಾದ ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ ಮತ್ತು ತಮಿಳು ನಾಡಿನಲ್ಲಿ ವೆಚ್ಚ ಮಾಡಲಾಗಿದೆ ಎನ್ನುವುದು ನಿಜ. ಯಾಕೆಂದರೆ, ಈ ರಾಜ್ಯಗಳಲ್ಲಿ ಬಹಳಷ್ಟು ಬೃಹತ್ ಖಾಸಗಿ ಕಂಪೆನಿಗಳು ಕಾರ್ಯಾಚರಿಸುತ್ತಿವೆ ಮತ್ತು ಈ ಕಂಪೆನಿಗಳು ತಮ್ಮ ಕಾರ್ಯಾಚರಣೆಯ ವ್ಯಾಪ್ತಿಯಲ್ಲೇ ಹೆಚ್ಚು ವೆಚ್ಚ ಮಾಡಲು ಬಯಸುತ್ತವೆ. ಆದರೆ ಸಾರ್ವಜನಿಕ ಕ್ಷೇತ್ರದ ಕಂಪೆನಿಗಳು ತಮ್ಮ ಸಿಎಸ್‌ಆರ್ ನಿಧಿಯನ್ನು ವೆಚ್ಚ ಮಾಡಿರುವ ಪ್ರದೇಶಗಳನ್ನು ಗಮನಿಸಿದಾಗ ರಾಜಕೀಯ ಪ್ರಭಾವದ ವಾಸನೆ ಬಡಿಯುತ್ತದೆ. ಕಂಪೆನಿಗಳನ್ನು ಕೇವಲ ಲಾಭ ಮಾಡುವ ಯಂತ್ರಗಳಂತಿರಲು ಬಿಡದೆ ರಾಷ್ಟ್ರದ ಅಭಿವೃದ್ಧಿಯಲ್ಲಿ ಜೊತೆಗಾರರನ್ನಾಗಿ ಮಾಡುವ ಕಲ್ಪನೆಯು ಶ್ಲಾಘನೀಯವಾಗಿದೆ. ಆದರೆ ಈ ಕಲ್ಪನೆಯು ಹೆಚ್ಚುವರಿ ಹಣವನ್ನು ಪಡೆದುಕೊಳ್ಳಲು ಹಿಂದಿನ ಬಾಗಿಲಿನಿಂದ ತೆರಿಗೆ ಹಾಕುವ ಉದ್ದೇಶವನ್ನು ಹೊಂದಿದೆ ಎಂದು ಹಲವರು ಅನುಮಾನಿಸಿದ್ದಾರೆ. ಇದೀಗ ಈ ಅನುಮಾನ ನಿಜವಾದಂತಿದೆ. ಭಾರತದಲ್ಲಿ ಸಾಂಸ್ಥಿಕ ತೆರಿಗೆ ಅತ್ಯಂತ ಹೆಚ್ಚು ಅಂದರೆ ಶೇ.35.61 ಇದೆ ಮತ್ತು ಅದನ್ನು ಇನ್ನಷ್ಟು ಏರಿಕೆ ಮಾಡಿದರೆ ಪ್ರತಿಭಟನೆಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ಸಾಮಾಜಿಕ ಅಭಿವೃದ್ಧಿಗೆ ಶೇ.2 ದೇಣಿಗೆಯನ್ನು ಕಡ್ಡಾಯಗೊಳಿಸಿರುವುದು, ಸರಕಾರದ ದೃಷ್ಟಿಯಿಂದ, ರಾಜಕೀಯವಾಗಿ ಮುಖ್ಯವಾಗಿರುವ ಯೋಜನೆಗಳಿಗೆ ನಿಧಿಯನ್ನು ಸಂಗ್ರಹಿಸಲು ಹೆಚ್ಚುವರಿ ಮೂಲವನ್ನು ಸೃಷ್ಟಿಸುವ ಒಂದು ಉತ್ತಮ ದಾರಿಯಾಗಿದೆ.

ಕೃಪೆ: thewire.in

Writer - ಪುಷ್ಪಾ ಸುಂದರ್

contributor

Editor - ಪುಷ್ಪಾ ಸುಂದರ್

contributor

Similar News