ಗ್ರಾಹಕರೇ ಎಚ್ಚರ!
ನಮ್ಮ ಆಸ್ಪತ್ರೆಗಳು ಮತ್ತು ರೋಗಿಗಳತ್ತ ಗಮನಹರಿಸಿದರೆ, ಗ್ರಾಹಕ ಸಂರಕ್ಷಣೆ ಹೇಗಿದೆ? ಎಂದು ಹುಬ್ಬೇರಿಸುವಂತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಹಣವಿಲ್ಲದೆ ಹೆಣವನ್ನು ಬಿಟ್ಟುಕೊಡುವುದಿಲ್ಲವೆಂಬುದನ್ನು ಕೇಂದ್ರ ಸರಕಾರ ಗಮನಿಸಿ, ನಿರ್ದೇಶಿಸಿರುವುದನ್ನು ಗಮನಿಸಿರಬಹುದು. ಬೆಲೆ ನಿಯಂತ್ರಣ, ಸೇವಾಶುಲ್ಕ ಇತ್ಯಾದಿ ಸರಕಾರ ಮತ್ತು ಆಡಳಿತವ್ಯವಸ್ಥೆ ಗಮನಿಸಬೇಕಿದ್ದರೂ ತಜ್ಞ ವೈದ್ಯರ ಸೇವಾ ಶುಲ್ಕಕ್ಕೆ ಕಡಿವಾಣವೇ ಇಲ್ಲ.
ಮತ್ತೆ ರಾಷ್ಟ್ರೀಯ ಗ್ರಾಹಕ ದಿನಾಚರಣೆ ಡಿಸೆಂಬರ್ 24 ನೆನಪಿಸುತ್ತಿದೆ ಗ್ರಾಹಕ ಸಂರಕ್ಷಣಾ ವಿಧಿಗಳನ್ನು. ಪ್ರತಿವರ್ಷವೂ ರಾಷ್ಟ್ರೀಯ ಗ್ರಾಹಕ ದಿನಾಚರಣೆ ಆಡಳಿತಾಧಿಕಾರಿಗಳಿಂದ ಆಚರಿಸಲ್ಪಡುತ್ತದೆ. ಕಾಯ್ದೆ ಜಾರಿಗೆ ಬಂದು 32 ವರ್ಷಗಳಾದರೂ ಗ್ರಾಹಕ ಹಕ್ಕುಗಳು ಜನಸಾಮಾನ್ಯರಿಗೆ ತಲುಪಿದಂತಿಲ್ಲ. ಎಲ್ಲ ರಂಗಗಳಲ್ಲೂ ಶೋಷಣೆ, ಭ್ರಷ್ಟಾಚಾರ ವ್ಯಾಪಕವಾಗಿ ಹರಡುತ್ತಿದೆ. ಜನಪ್ರತಿನಿಧಿಗಳಿಗಿದು ಗಮನಕ್ಕೇ ಬಂದಂತಿಲ್ಲ. ಪ್ರತಿಯೋರ್ವ ನಾಗರಿಕನಿಗೂ, ತನ್ನ ದುಡಿಮೆಯ ಫಲವನ್ನು ಅನುಭವಿಸುವ ಹಕ್ಕಿದೆ. ಸುರಕ್ಷಿತವಾಗಿ ಬದುಕುವ ಹಕ್ಕಿದೆ. ಶಿಕ್ಷಣ ಪಡೆಯುವ ಹಕ್ಕಿದೆ. ಶೋಷಣೆ ತಡೆಯುವ ಹಕ್ಕಿದೆ. ತಮ್ಮ ವ್ಯಕ್ತಿತ್ವವನ್ನು ಉಳಿಸಿಕೊಳ್ಳುವ ಹಕ್ಕಿದೆ. ತಮ್ಮ ದೇಹವನ್ನು, ಸಂಪತ್ತನ್ನು ಸುರಕ್ಷಿತವಾಗಿರಿಸಿಕೊಳ್ಳುವ ಹಕ್ಕಿದೆ. ತಮಗೆ ಬೇಕಾದ ಸೇವೆಯನ್ನು ಪಡೆಯುವ ಹಕ್ಕಿದೆ. ಆತಂಕವಾದಾಗ, ಶೋಷಣೆಗೊಳಗಾದಾಗ ದೂರಿಕೊಳ್ಳುವ ಹಕ್ಕಿದೆ, ಪರಿಹಾರ ಪಡೆಯುವ ಹಕ್ಕಿದೆ. ಇವೆಲ್ಲ ನಮ್ಮ ದೇಶದ ಸಂವಿಧಾನ, ಕಾನೂನು ನಿಯಮಗಳು ನೀಡಿದ ಹಕ್ಕುಗಳು. ಆದರೆ ಇಂತಹ ಹಕ್ಕುಗಳಿವೆ ಎಂಬುದೇ ಬಹುಪಾಲು ಜನರಿಗೆ ಗೊತ್ತಿಲ್ಲ. ಪ್ರಾಯಶಃ ನಮ್ಮ ಜನಪ್ರತಿನಿಧಿಗಳಿಗೆ ತಿಳಿದಿಲ್ಲವೇನೋ? ಯಾವ ಮಾಧ್ಯಮಗಳೂ ಶೋಷಣೆಮುಕ್ತ ಸಮಾಜದ ಬಗ್ಗೆ ದನಿ ಎತ್ತುವುದಿಲ್ಲ. ತಮ್ಮ ಸ್ವಂತ ಬದುಕಿನ ಬಹು ಮುಖ್ಯ ವಿಚಾರಗಳಾಗಿದ್ದರೂ, ಹಕ್ಕು ಬಾಧ್ಯತೆಗಳ ಬಗ್ಗೆ ಯೋಚಿಸುವುದೇ ಇಲ್ಲ. ಯುವ ಜನಾಂಗವಂತೂ ತಮ್ಮ ಹಕ್ಕುಗಳ ಬಗ್ಗೆ ಯೋಚನೆಯೇ ಮಾಡಿದಂತಿಲ್ಲ. ವೈದ್ಯಕೀಯ, ತಾಂತ್ರಿಕ ಹಾಗೂ ಉಚ್ಚಶಿಕ್ಷಣದ ವಿದ್ಯಾರ್ಥಿಗಳ ಮೇಲೆ ಸಾರಾಸಗಟಾಗಿ ಶೋಷಣೆ ನಡೆಯುತ್ತಿದ್ದರೂ ಪ್ರತಿರೋಧ ತಮ್ಮ ಹಕ್ಕೆಂದು ಭಾವಿಸುವುದೇ ಇಲ್ಲ. ಅವರ ಮೇಲಿರುವ ಒತ್ತಡ, ರಾಜಕೀಯ ಶಕ್ತಿಗಳ ನಿರ್ಲಕ್ಷ ಮತ್ತು ಸಂಸ್ಥೆಗಳಿಗೆ ನೀಡುತ್ತಿರುವ ಪ್ರೋತ್ಸಾಹ, ಅವರನ್ನು ನಿರುತ್ಸಾಹಗೊಳಿಸುತ್ತದೆ. ಹನ್ನೆರಡು ವರ್ಷಗಳ ದೀರ್ಘಾವಧಿಯ ಫಲವಾಗಿ ಪಡೆದ ಮೂಲ ಶಿಕ್ಷಣ ಅರ್ಹತಾ ಪತ್ರಗಳು ವಿದ್ಯಾರ್ಥಿಗಳ ಸ್ವಂತ ಆಸ್ತಿ ಆಗಿದ್ದರೂ, ಅದನ್ನೇ ಅಡವಾಗಿರಿಸಿಕೊಂಡು,ಒಂದು ಲಕ್ಷದಿಂದ ಹತ್ತು ಲಕ್ಷದವರೆಗೂ ಬೇಡಿಕೆ ಸಲ್ಲಿಸುವ ವಿದ್ಯಾಸಂಸ್ಥೆಗಳಿವೆ. ಸರಕಾರವೂ, ನ್ಯಾಯಾಲಯವೂ, ಸಂಬಂಧಪಟ್ಟ ಇಲಾಖಾಧಿಕಾರಿಗಳೂ ಇದು ನ್ಯಾಯಾಬಾಹಿರ ಎಂದು ಘೋಷಿಸಿದ ಮೇಲೂ ಇದು ನಿರಂತರ ನಡೆಯುತ್ತಿದೆ. ದೂರುವವರಿಲ್ಲದೆ ಸರಕಾರ ಕಣ್ಮುಮುಚ್ಚಿ ಕುಳಿತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಅವ್ಯವಹಾರಗಳಿಗೆ ಕೊನೆ ಇಲ್ಲವೇ? ಶೊಷಣೆಮುಕ್ತ ಭಾರತ ಸಾಧ್ಯವೇ? ಎದ್ದೇಳಿ ಗ್ರಾಹಕರೇ! ಶಿಕ್ಷಣ ವ್ಯಾಪಾರದ ಅವ್ಯವಹಾರದತ್ತ ಕಣ್ಣರಳಿಸಿ. ವರ್ಷಕ್ಕೊಮ್ಮೆ ಗ್ರಾಹಕ ದಿನಾಚರಣೆ ಮಾಡುವುದರಿಂದ, ಶೋಷಣೆಮುಕ್ತರಾಗುವುದಿಲ್ಲ. ಶೋಷಣೆಯ ದಬ್ಬಾಳಿಕೆಗೆ ಕಡಿವಾಣ ಹಾಕಬೇಕು.
ನಮ್ಮ ಆಸ್ಪತ್ರೆಗಳು ಮತ್ತು ರೋಗಿಗಳತ್ತ ಗಮನಹರಿಸಿದರೆ, ಗ್ರಾಹಕ ಸಂರಕ್ಷಣೆ ಹೇಗಿದೆ? ಎಂದು ಹುಬ್ಬೇರಿಸುವಂತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಹಣವಿಲ್ಲದೆ ಹೆಣವನ್ನು ಬಿಟ್ಟುಕೊಡುವುದಿಲ್ಲವೆಂಬುದನ್ನು ಕೇಂದ್ರ ಸರಕಾರ ಗಮನಿಸಿ, ನಿರ್ದೇಶಿಸಿರುವುದನ್ನು ಗಮನಿಸಿರಬಹುದು. ಬೆಲೆ ನಿಯಂತ್ರಣ, ಸೇವಾಶುಲ್ಕ ಇತ್ಯಾದಿ ಸರಕಾರ ಮತ್ತು ಆಡಳಿತವ್ಯವಸ್ಥೆ ಗಮನಿಸಬೇಕಿದ್ದರೂ ತಜ್ಞ ವೈದ್ಯರ ಸೇವಾಶುಲ್ಕಕ್ಕೆ ಕಡಿವಾಣವೇ ಇಲ್ಲ. 200 ರೂ. ವರೆಗೆ ಶುಲ್ಕ ವಸೂಲಿ ಮಾಡುವ ವೈದ್ಯರು ಮಂಗಳೂರಿನಲ್ಲೇ ಇದ್ದಾರೆ. ಹತ್ತಾರು ನಿಮಿಷದ ರೋಗನಿದಾನ ಪ್ರಕ್ರಿಯೆಗೆ ವಿಧಿಸುವ ಶುಲ್ಕವಿದು. ದಿನವೊಂದಕ್ಕೆ 50 ರಿಂದ 100ರಷ್ಟು ತಪಾಸಣೆಗಳಾಗುತ್ತವೆ. ನೋಂದಾಯಿತ ವೈದ್ಯರುಗಳಾದ ಇವರು ರಶೀದಿ ನೀಡುವ ಕ್ರಮವಿಲ್ಲ. ಆದಾಯ ಲೆಕ್ಕಾಚಾರ ಸರಕಾರ ಗಮನಿಸುತ್ತಿದೆಯೇ? ನಾಗರಿಕರ, ಮುಖ್ಯವಾಗಿ ರೋಗಿಗಳ ಹಿತಾಸಕ್ತಿ ಕಾಯ್ದುಕೊಳ್ಳಬೇಕಾದ ಸರಕಾರ ವೈದ್ಯರ ಸೇವಾ ವಿಚಾರದಲ್ಲಿ ನಿರ್ಲಕ್ಷ ತೋರಿದೆ. ಹೆಚ್ಚಿರಲಿ, ಕಮ್ಮಿರಲಿ, ತಜ್ಞ ವೈದ್ಯರು ಸಮಾನ ಶುಲ್ಕ ನಿಗದಿಪಡಿಸುವಂತೆ ರೋಗಿಗಳಿಗೆ ಮುಂದಾಗಿ ತಿಳಿಸುವಂತೆ ಮತ್ತು ರಶೀದಿ ನೀಡುವಂತೆ ಮಾಡುವುದು ಸರಕಾರದ ಕರ್ತವ್ಯವಾಗಿದೆ. ಇದು ಗ್ರಾಹಕರ ಬೇಡಿಕೆಯೂ ಆಗಿದೆ.
ಸಾರಿಗೆ ವ್ಯವಸ್ಥೆಯಲ್ಲಿರುವ ಲೋಪದೋಷಗಳ ನಿವಾರಣೆ ಸರಕಾರದ ಹೊಣೆಯಲ್ಲವೇ? ರೈಲ್ವೇ ಪ್ರಯಾಣ ಸುಖಕರವಾಗಿರಲು ಆಹಾರ ವ್ಯವಸ್ಥೆ ಮಾಡಲಾಗಿದೆ. ಗ್ರಾಹಕರೊಬ್ಬರ ಅನುಭವದಂತೆ, ಗೋವಾದಿಂದ ಮಂಗಳೂರಿಗೆ ಪ್ರಯಾಣಾವಧಿಯಲ್ಲಿ 240 ರೂ. ಮುಂದಾಗಿಯೇ ಪಡೆದು ನೀಡಿದ ಆಹಾರ ತೀರ ಕಳಪೆಯಾಗಿತ್ತು. ಕುಡಿಯುವ ನೀರು ಕೂಡಾ ಕೊಡಲಿಲ್ಲ. ಮೊಟ್ಟೆ ಬದಲು ಬಟಾಟೆ ಕೊಡಲಾಗಿತ್ತು. ಇದೊಂದು ತರದ ಶೋಷಣೆ. ಹಬ್ಬ ಹರಿದಿನಗಳು ಬಂದಾಗ ದಿಢೀರನೆ ಬಸ್ ಪ್ರಯಾಣ ದರ ಏರಿಸುವುದನ್ನು, ವಿಮಾನದರ ಏರಿಳಿತವಾಗಿವುದನ್ನು ಗಮನಿಸಿದರೆ, ಗ್ರಾಹಕ ಕಾಯ್ದೆ ಯಾರಿಗಾಗಿ? ಎಂದೆನಿಸುತ್ತದೆ. ಗ್ರಾಹಕ ಕಾಯ್ದೆ ಇಚ್ಛಾನುಸಾರ ದರ ಏರಿಕೆಯನ್ನು ನಿಷೇಧಿಸಿದೆ. ಹಾಗಿದ್ದರೂ ಸರಕಾರ ಸುಮ್ಮನಿರುತ್ತದೆ. ನಿತ್ಯ ಸಾರಿಗೆ ವ್ಯವಸ್ಥೆಯಲ್ಲಿ ನಿಗದಿತ ದರಕ್ಕಿಂತ ಹೆಚ್ಚು ವಸೂಲಿ ಅನುಚಿತ ವ್ಯಾಪಾರವೆನಿಸುತ್ತದೆ. ಗ್ರಾಹಕರೂ ಗಮನಿಸಬೇಕಾಗಿದೆ. ಸಾರಿಗೆ ಪ್ರಾಧಿಕಾರ ಕೂಡ.
ಇಂದು ಮಾಲುಗಳು, ನೆಟ್ ಮಾರ್ಕೆಟ್‌ಸಾರಾಸಗಟಾಗಿ ನಡೆಯುತ್ತಿವೆ. ಪೊಟ್ಟಣ ವಸ್ತುಗಳ ಗುಣಮಟ್ಟ ಅಳತೆ ಮತ್ತು ಕಾಲಾವಧಿಯ ಬಗ್ಗೆ ಮಾಪನ ಇಲಾಖೆ ಸ್ಪಷ್ಟ ನಿಯಮ ನೀಡಿದೆ. ಅನಾರೋಗ್ಯಕರ ಕಳಪೆ ಆಹಾರ ವಸ್ತುಗಳ ಮಾರಾಟ ನಿಷೇಧವಾಗಿದೆ. ಗ್ರಾಹಕರೊಬ್ಬರು ಗೋವಾದ ಪ್ರತಿಷ್ಠಿತ ಕಂಪೆನಿಯ ಗೇರು ಬೀಜತಿರುಳಿನ 500ಗ್ರಾಂ ಪೊಟ್ಟಣ ಖರೀದಿಸಿ, ಮಂಗಳೂರಿನಲ್ಲಿ ಮನೆಗೆ ಬಂದು ನೋಡಿದಾಗ ಹಾಳಾದ, ಕರಿದುಹೋದ ತಿರುಳುಗಳನ್ನು ಕಂಡು ದಂಗಾದರು. ಇದು ನಿತ್ಯ ನಡೆಯುತ್ತಿರುವ ಮೋಸದ ವ್ಯಾಪಾರ. ಮುಖ್ಯವಾಗಿ ಪ್ರಯಾಣಿಕರೇ ಗಿರಾಕಿಗಳಾಗಿರುವ ನಿಲ್ದಾಣ ಸಮೀಪದ ಅಂಗಡಿಗಳಲ್ಲಿ ಇಂತಹ ಮೋಸದ ವ್ಯಾಪಾರ ನಡೆಯುತ್ತಿದೆ. ಮಾಪನ ಇಲಾಖೆ ನಿದ್ರಿಸುತ್ತಿದೆಯೇ? ಪ್ರತಿಯೊಂದಕ್ಕೂ ಗ್ರಾಹರು ನ್ಯಾಯಾಲಯದ ಕದತಟ್ಟಲಾಗುವುದಿಲ್ಲ. ಆಳುವವರು ರಕ್ಷಣೆ ನೀಡಬೇಕು.
ಬಹಳಷ್ಟು ಗ್ರಾಹಕರಿಗೆ ಆತಂಕವಾಗುವುದು ಇಂದಿನ ಬ್ಯಾಂಕುಗಳ ಸೇವಾ ವಿಧಾನ. ಗ್ರಾಹಕರ ಕಾಯ್ದೆಯ ಅಡಿಯಲ್ಲಿ ಬ್ಯಾಂಕುಗಳು ಗ್ರಾಹಕರ ಪರವಾಗಿರಬೇಕು. ಎಟಿಎಂ ಸೇವೆ, ಠೇವಣಿ, ಸಾಲ ಇತ್ಯಾದಿಗಳಿಗೆಲ್ಲಾ ಬ್ಯಾಂಕುಗಳು ನೆರವಾಗಬೇಕು. ಗ್ರಾಹಕರು ಬ್ಯಾಂಕಿನಲ್ಲಿರಿಸಿದ ಹಣ ಸುರಕ್ಷಿತವಾಗಿರಬೇಕೆಂದು ಹಂಬಲಿಸುತ್ತಾರೆ. ಆದರೆ ಗ್ರಾಹಕರ ಗಮನಕ್ಕೆ ತಾರದೆ ಹಣ ಕಡಿತಗೊಳಿಸುವುದು, ಸೇವಾಶುಲ್ಕ, ವಿಮೆ, ಲಾಕರ್ ಶುಲ್ಕ ಇತ್ಯಾದಿ ಕಡಿತಗೊಳಿಸುವುದನ್ನು ಗ್ರಾಹಕ ನಿಯಮ ಒಪ್ಪುವುದಿಲ್ಲ. ಗ್ರಾಹಕರಿಗೆ ಬ್ಯಾಂಕಿನ ಮೇಲೆ ಇರುವ ನಂಬಿಕೆ ಇಲ್ಲವಾಗುತ್ತದೆ. ತಮ್ಮ ಹಣದ ಮೇಲೆ ತಮಗೇ ನಿಯಂತ್ರಣವಿಲ್ಲದಂತಾಗಿದೆ. ಎಟಿಎಂ ಕಾರ್ಡುಗಳಲ್ಲೂ ವಂಚನೆ, ಹಣ ಲಪಟಾವಣೆ ನಡೆಯುತ್ತದೆ. ಗ್ರಾಹಕರಿಗೆ ಬ್ಯಾಂಕ್ ಸೇವೆಯ ಮೇಲೆ ನಂಬಿಕೆ ಇಲ್ಲವಾದರೆ ವ್ಯವಹಾರಕ್ಕೆ ಆಪತ್ತಲ್ಲವೇ? ಎಟಿಎಂಗಳು ಮುಚ್ಚುತ್ತವೆ, ಹಣ ಇಲ್ಲ, ಬದಲಾಗುತ್ತಿದೆ ಎಂದೆಲ್ಲಾ ಹಬ್ಬುವ ಸುಳ್ಳು ಸುದ್ದಿಗಳು ಬ್ಯಾಂಕಿಂಗ್ ಸೇವೆಯನ್ನು ಹಾನಿ ಮಾಡುತ್ತಿವೆ. ಲಾಕರ್ ಸೇವೆಗೆ ಬ್ಯಾಂಕುಗಳು ಹಣವಸೂಲಿ ಮಾಡುತ್ತದೆ. ಅದೊಂದು ಗ್ರಾಹಕ ಸೇವೆ. ಆದರೆ ಲಾಕರ್‌ನಲ್ಲಿ ಇಟ್ಟ ವಸ್ತುಗಳಿಗೆ ಬ್ಯಾಂಕ್ ಹೊಣೆಗಾರ ಅಲ್ಲ ಎಂಬುದು ಗ್ರಾಹಕ ಕಾಯ್ದೆ ನಿಯಮ ಎರಡರಡಿ ಸಿಂಧುವಲ್ಲ. ನ್ಯಾಯಾಲಯಗಳೂ ಇದನ್ನು ಎತ್ತಿ ಹಿಡಿದಿದೆ. ಬ್ಯಾಂಕುಗಳು ಲಾಕರ್ ಸುರಕ್ಷೆಗೆ ವ್ಯವಸ್ಥೆ ಮಾಡಬೇಕಾಗಿದೆ.
ಗ್ರಾಹಕರೇ ಎಚ್ಚರ! ಗ್ರಾಹಕ ಸುರಕ್ಷಾ ಬೇಡಿಕೆಗಳಿಗಾಗಿ ದನಿ ಎತ್ತಿರಿ. ಇದು ರಾಷ್ಟ್ರೀಯ ಗ್ರಾಹಕದಿನದ ಸಂದೇಶ.