ಬಸ್‌ಗಳಲ್ಲಿ ಅಂಬೇಡ್ಕರ್ ವೃತ್ತ ನಾಮಫಲಕ ಅಳವಡಿಕೆಗೆ ಆರ್‌ಟಿಒಗೆ ಪತ್ರ: ತಹಶೀಲ್ದಾರ್

Update: 2018-12-24 08:13 GMT

ಮಂಗಳೂರು, ಡಿ.24: ನಗರದ ಅಂಬೇಡ್ಕರ್ ವೃತ್ತದ ಬಗ್ಗೆ ಕಳೆದ ವರ್ಷವೇ ಮನಪಾ ಹಾಗೂ ಜಿಲ್ಲಾಡಳಿತದಿಂದ ನಿರ್ಣಯ ಆಗಿದೆ. ಈ ಬಗ್ಗೆ ಬಸ್ಸುಗಳಲ್ಲಿಯೂ ನಾಮಫಲಕದಲ್ಲಿ ಅಳವಡಿಕೆಗೆ ಆರ್‌ಟಿಒಗೆ ಪತ್ರ ಬರೆಯಲಾಗುವುದು ಎಂದು ತಹಶೀಲ್ದಾರ್ ಗುರುಪ್ರಸಾದ್ ದಲಿತ ನಾಯಕರಿಗೆ ಭರವಸೆ ನೀಡಿದ್ದಾರೆ.

ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಇಂದು ಮಂಗಳೂರು ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಕುಂದುಕೊರತೆಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಅಂಬೇಡ್ಕರ್ ವೃತ್ತ ಆಗಿ ನಿರ್ಣಯ ಆಗಿದ್ದರೂ ಇನ್ನೂ ಅದನ್ನು ಜ್ಯೋತಿ ವೃತ್ತವೆಂದೇ ಕರೆಯಲಾಗುತ್ತಿದೆ. ಬಸ್‌ಗಳ ನಾಮಫಲಕಗಳಲ್ಲಿಯೂ ಜ್ಯೋತಿ ಎಂದೇ ನಮೂದಾಗಿದೆ ಎಂದು ದಲಿತ ನಾಯಕರಾದ ರಘು ಎಕ್ಕಾರು, ಜಗದೀಶ್ ಮೊದಲಾದವರು ಬೇಸರ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಈ ಪ್ರತಿಕ್ರಿಯೆ ನೀಡಿದರು.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿದ ದಲಿತರಿಗೆ ನಿವೇಶನ ಹಂಚಿಕೆಯಲ್ಲಿ ವಿಳಂಬವಾಗುತ್ತಿರುವ ಬಗ್ಗೆ ದಲಿತ ನಾಯಕರು ಸಭೆಯಲ್ಲಿ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್, ಮನಪಾ ಮಟ್ಟದಲ್ಲಿ ನಿವೇಶನಕ್ಕೆ ಸಂಬಂಧಿಸಿ ಜನವರಿ ಅಂತ್ಯದೊಳಗೆ ಸಭೆ ನಡೆಸಲು ಮನಪಾಕ್ಕೆ ಪತ್ರ ಬರೆಯುವುದಾಗಿ ಹೇಳಿದರು. ಪುರಭವನದ ಬಳಿ ಸ್ಕೈವಾಕ್ ಆಗಲಿ

ವಾಹನದಟ್ಟಣೆಯಿಂದ ಹಂಪನಕಟ್ಟೆ ವ್ಯಾಪ್ತಿಯಲ್ಲಿ ಜನಸಾಮಾನ್ಯರಿಗೆ ನಡೆದಾಡಲು, ರಸ್ತೆ ದಾಟಲು ಕಷ್ಟವಾಗುತ್ತಿದೆ. ಮಿನಿ ವಿಧಾನಸೌಧಕ್ಕೆ ಪ್ರವೇಶಿಸಲು ನಾಗರಿಕರು ಪರದಾಡುವಂತಾಗಿದೆ. ಇಲ್ಲಿ ಸ್ಕೈ ವಾಕ್ ಮಾಡುವ ಪ್ರಸ್ತಾಪ ನನೆಗುದಿಗೆ ಬಿದ್ದಿದೆ. ಈ ಬಗ್ಗೆ ಕ್ರಮ ಆಗಬೇಕು ಎಂದು ದಲಿತ ನಾಯಕ ರಘು ಎಕ್ಕಾರು ಒತ್ತಾಯಿಸಿದರು. ತಹಶೀಲ್ದಾರ್ ಗುರುಪ್ರಸಾದ್ ಮಾತನಾಡಿ, ಈಗಾಗಲೇ ಸ್ಮಾರ್ಟ್ ಸಿಟಿಯಡಿ ಈ ಪ್ರಸ್ತಾವ ಇದೆ ಎಂದರು.

ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪದೇ ಪದೇ ಜಾತಿ ಪ್ರಮಾಣಪತ್ರ ಕೇಳುವಂತಿಲ್ಲ!
ಒಂದು ಬಾರಿ ನೀಡಿದ ಜಾತಿ ಪ್ರಮಾಣ ಪತ್ರ ಜೀವನಪರ್ಯಂತ ಮಾನ್ಯವಾಗಿರುತ್ತದೆ. ಆದ್ದರಿಂದ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪದೇ ಪದೇ ಹೊಸ ಜಾತಿ ಪ್ರಮಾಣ ಪತ್ರವನ್ನು ಕೇಳುವಂತಿಲ್ಲ. ಈ ಬಗ್ಗೆ ಈಗಾಗಲೇ ಶಾಲೆಗಳಿಗೆ ಸೂಚನೆ ನೀಡಲಾಗಿದೆ. ಅಂತಹ ಒತ್ತಾಯ ಮಾಡುತ್ತಿದ್ದರೆ ಆ ಬಗ್ಗೆ ನನ್ನ ಗಮನಕ್ಕೆ ತನ್ನಿ ಎಂದು ತಹಶೀಲ್ದಾರ್ ಗುರುಪ್ರಸಾದ್ ಹೇಳಿದರು.

ದಲಿತ ನಾಯಕ ಪಿ. ಕೇಶವ ಎಂಬವರ ಸಮಸ್ಯೆಗೆ ತಹಶೀಲ್ದಾರ್ ಈ ಉತ್ತರ ನೀಡಿದರು.

ಕಿನ್ನಿಗೋಳಿ ಗ್ರಾ.ಪಂ.ನ ಎಳತ್ತೂರು ಎಂಬಲ್ಲಿ 7 ದಲಿತ ಕುಟುಂಬಗಳು ವಿದ್ಯುತ್, ನೀರು, ಹಕ್ಕುಪತ್ರ ಸೌಲಭ್ಯ ಇಲ್ಲದೆ ವಾಸಿಸುತ್ತಿವೆ. ಒಳಚರಂಡಿ, ಶೌಚಾಲಯದ ವ್ಯವಸ್ಥೆಯೂ ಇಲ್ಲ ಎಂದು ದಲಿತ ನಾಯಕ ಜಗದೀಶ್ ಸಭೆಯ ಗಮನ ಸೆಳೆದರು. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಹಶೀಲ್ದಾರ್ ಹೇಳಿದರು.

ಗ್ರಾಮದ ಅರ್ಜಿದಾರರಿಗೆ ಪ್ರಥಮ ಆದ್ಯತೆಯಲ್ಲಿ ಡಿಸಿ ಮನ್ನಾ ಭೂಮಿ
ಮಂಗಳೂರು ತಾಲೂಕಿನಲ್ಲಿ ಒಟ್ಟು 104.78 ಸೆಂಟ್ಸ್ ಡಿಸಿ ಮನ್ನಾ ಜಮೀನು ಅತಿಕ್ರಮಣ ಮುಕ್ತವಾಗಿದೆ. ಡಿಸಿ ಮನ್ನಾ ಜಾಗಕ್ಕೆ ಸಂಬಂಧಿಸಿ ವಿವಿಧ ಗ್ರಾಮಗಳಲ್ಲಿ ಡಿಸಿ ಮನ್ನಾ ಭೂಮಿ ಗುರುತಿಸಲಾಗಿದ್ದು, ಅರ್ಜಿಗಳನ್ನು ಪರಿಶೀಲಿಸಲಾಗಿದೆ. ಅರ್ಜಿಗಳು ಅರ್ಹತೆಯನ್ನು ಹೊಂದಿದ್ದು, ಅದೇ ಗ್ರಾಮದವರಿಗೆ ಪ್ರಥಮ ಆದ್ಯತೆಯೊಂದಿಗೆ ಡಿಸಿ ಮನ್ನಾ ಜಾಗ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು. ಹೋಬಳಿಯವರಿಗೆ ದ್ವಿತೀಯ ಹಾಗೂ ಬೇರೆ ಹೋಬಳಿಯವರಿಗೆ ತೃತೀಯ ಆದ್ಯತೆಯಡಿ ಜಮೀನು ಮಂಜೂರು ಮಾಡಲಾಗುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಪ್ರತ್ಯೇಕ ಪ್ರಸ್ತಾವ ಸಲ್ಲಿಸಲಾಗಿದೆ.

ಮನಪಾ ಪಾಲಿಕೆ ವ್ಯಾಪ್ತಿಯಲ್ಲಿ ಡಿಸಿ ಮನ್ನಾ ಜಾಗ ಲಭ್ಯ ಇಲ್ಲದ ಕಾರಣ 33 ಕಣ್ಣೂರು ಗ್ರಾಮದಲ್ಲಿ 11.5 ಎಕರೆ ಸರಕಾರಿ ಜಾಗದಲ್ಲಿ ಪರಿಶಿಷ್ಟ ಜಾತಿ ಪಂಗಡದವರಿಗೆ ಕಾಯ್ದಿರಿಸಲು ಪ್ರಸ್ತಾವ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿ ಜತೆ ಮಾತನಾಡಿ ಅಲ್ಲಿ 5 ಎಕರೆ ಜಾಗವನ್ನು ಕಾಯ್ದಿರಿಸಿ, ಅದನ್ನು ಮನಪಾಕ್ಕೆ ಹಸ್ತಾಂತರಿಸಿ, ಅಲ್ಲಿ ಫ್ಲಾಟ್ ಮೂಲಕ ಮನೆ ಹಂಚಿಕೆಗೆ ಯೋಜನೆ ರೂಪಿಸಲಾಗುತ್ತಿದೆ. 1924 ಅರ್ಜಿಗಳು ನಿವೇಶನಕ್ಕಾಗಿ ಬಂದಿದ್ದು, ಅಷ್ಟು ಜನರಿಗೆ ಮನಪಾ ವ್ಯಾಪ್ತಿಯಲ್ಲಿ ನಿವೇಶನ ಕೊಡಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಫ್ಲಾಟ್ ಮಾದರಿಯಲ್ಲಿ ಮನೆ ಹಂಚಿಕೆಗೆ ತೀರ್ಮಾನಿಸಲಾಗಿದೆ. ಕಟ್ಟಡ ಯೋಜನೆ ರೂಪಿಸಲಾಗಿದ್ದು, ಅದಕ್ಕಾಗಿ ಪ್ರತ್ಯೇಕವಾಗಿ ಮನಪಾ ಮಟ್ಟದಲ್ಲಿ ಸಭೆ ನಡೆಸಲಾಗುವುದು. ಮನಪಾ ವ್ಯಾಪ್ತಿಯಲ್ಲಿ ಯೋಜನೆಯೊಂದನ್ನು ರೂಪಿಸಲಾಗಿದೆ.

ಸರಕಾರದ ಸುತ್ತೋಲೆ ಪ್ರಕಾರ ಮನೆ ನಿರ್ಮಾಣದ ಪ್ರದೇಶ 500 ಚದರ ಅಡಿ. ಹಾಗಾಗಿ ವಿಶೇಷ ಯೋಜನೆ ರೂಪಿಸಿ 777 ಚದರ ಅಡಿಯಲ್ಲಿ 2 ಬೆಡ್‌ರೂಂನ ಮನೆ ಸಿದ್ಧಪಡಿಸಲಾಗುವುದು. ಇದಕ್ಕೆ 5 ಲಕ್ಷ ರೂ.ಗಳಲ್ಲಿ ಸರಕಾರದ ಕಾರ್ಮಿಕ ನಿಧಿಯಿಂದ 1 ಲಕ್ಷ ರೂ. ದೊರಕಲಿದೆ. ಇದಕ್ಕಾಗಿ ದಲಿತರು ಕಾರ್ಮಿಕ ಇಲಾಖೆಯಡಿ ನೋಂದಣಿ ಮಾಡಿಕೊಳ್ಳತಕ್ಕದ್ದು. 4 ಲಕ್ಷ ರೂ. ಹೇಗೆ ಕ್ರೋಡೀಕರಣ ಮಾಡಬೇಕು ಎಂಬ ಬಗ್ಗೆ ಪ್ರತ್ಯೇಕ ಸಭೆ ನಡೆಸಿ ತೀರ್ಮಾನ ಮಾಡಲಾಗುವುದು ಎಂದು ತಹಶೀಲ್ದಾರ್ ಸಭೆಯಲ್ಲಿ ಮಾಹಿತಿ ನೀಡಿದರು.

ಮಂಗಳೂರು ತಾಲೂಕು ಪಂಚಾಯತ್‌ನ ನೂತನ ಕಾರ್ಯನಿರ್ವಹಣಾಧಿಕಾರಿ ರಘು ಉಪಸ್ಥಿತರಿದ್ದರು.


ಡಿಸಿ ಮನ್ನಾ ಭೂಮಿಗೆ ಅರ್ಹರಿಗೆ ಅರ್ಜಿ ಸಲ್ಲಿಸಲು ಅವಕಾಶ
ಡಿಸಿ ಮನ್ನಾ ಭೂಮಿಗೆ ಸಂಬಂಧಿಸಿ ಕೆಲವರಿಂದ ಅರ್ಜಿಗಳು ಬಂದಿಲ್ಲ. ಅಂತಿಮ ದಿನಾಂಕವನ್ನು ನಿಗದಿಪಡಿಸಲಾಗಿಲ್ಲ. ಹಾಗಾಗಿ ಅರ್ಹರಿದ್ದಲ್ಲಿ ಆಯಾ ಗ್ರಾಮ ಪಂಚಾಯತ್ ಅಥವಾ ಗ್ರಾಮ ಲೆಕ್ಕಾಧಿಕಾರಿಗೆ ಅರ್ಜಿಗಳನ್ನು ಸಲ್ಲಿಸಬಹುದು. ತನಿಖೆಯ ಸಂದರ್ಭ ಕೆಲವರು ಎಂಟು- ಒಂಬತ್ತು ಕಡೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಒಂದೇ ಕುಟುಂಬದವರು ಬೇರೆ ಬೇರೆ ಕಡೆ ಅರ್ಜಿಗಳನ್ನು ಸಲ್ಲಿಸಿರುವುದು ಗಮನಕ್ಕೆ ಬಂದಿದೆ. ಅವೆಲ್ಲವನ್ನೂ ತಿರಸ್ಕರಿಸಲಾಗುತ್ತದೆ.

ಸರಕಾರದ ನೂತನ ಕಾಯ್ದೆ ಪ್ರಕಾರ ಈ ಹಿಂದೆ ಫಾರಂ ಸಂಖ್ಯೆ 50/53ರಲ್ಲಿ ಅರ್ಜಿ ಕೊಡದವರು, ಅವರ ಸ್ವಾಧೀನದಲ್ಲಿ ಸರಕಾರಿ ಜಮೀನು ಇದ್ದಲ್ಲಿ, ಫಾರಂ ಸಂಖ್ಯೆ 57ರಲ್ಲಿ ಅರ್ಜಿ ನೀಡಲು ಮುಂದಿನ ಮಾರ್ಚ್‌ವರೆಗೆ ಅವಕಾಶ ಕಲ್ಪಿಸಲಾಗಿದೆ. ಕೊಂಪದವು, ಕೊಡವೂರು, ತೋಕೂರು ಮೊದಲಾದ ಕಡೆ ದಲಿತರು ಸರಕಾರಿ ಜಮೀನಿನಲ್ಲಿ ವಾಸವಿದ್ದರೂ ಅರ್ಜಿ ನೀಡಿಲ್ಲ. ಮಾಹಿತಿ ಇಲ್ಲದೆ ಈ ಸಮಸ್ಯೆ ಆಗಿತ್ತು. ಇದಕ್ಕೊಂದು ಅವಕಾಶವಿದ್ದು, ಅದನ್ನು ಬಳಸಿಕೊಳ್ಳಬೇಕು ಎಂದು ತಹಶೀಲ್ದಾರ್ ಗುರುಪ್ರಸಾದ್ ಸಭೆಯಲ್ಲಿ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News