ಸುಳ್ಳು ಸುದ್ದಿ ಟ್ವೀಟ್ ಮಾಡಿ ನಗೆಪಾಟಲಿಗೀಡಾದ ಕೇಂದ್ರ ಸಚಿವ
ಹೊಸದಿಲ್ಲಿ, ಡಿ.24: ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಬಿಬಿಸಿ ವೆಬ್ ತಾಣದ ಹೆಸರನ್ನೇ ಹೋಲುವ ನಕಲಿ ಸುದ್ದಿ ತಾಣವೊಂದರ ನಕಲಿ ಸುದ್ದಿಯನ್ನು ನಂಬಿ “ಕಾಂಗ್ರೆಸ್ ಪಕ್ಷ ಜಗತ್ತಿನ ಎರಡನೇ ಅತ್ಯಂತ ಭ್ರಷ್ಟ ಪಕ್ಷ” ಎಂದು ಬಣ್ಣಿಸಿ ನಗೆಪಾಟಲಿಗೀಡಾಗಿದ್ದಾರೆ.
ಡಿಸೆಂಬರ್ 24ರಂದು ಈ ಬಗ್ಗೆ ಟ್ವೀಟ್ ಮಾಡಿದ ಸಿಂಗ್, “2018ರಲ್ಲಿ ಜಗತ್ತಿನ ಟಾಪ್ 10 ಅತ್ಯಂತ ಭ್ರಷ್ಟ ರಾಜಕೀಯ ಪಕ್ಷಗಳ ಪಟ್ಟಿ. ರಾಹುಲ್ ಗಾಂಧಿ ನೇತೃತ್ವದ ಕಾಂಗ್ರಸ್ ಪಕ್ಷ 2ನೇ ಸ್ಥಾನದತ್ತ... ಅತ್ಯಂತ ಭ್ರಷ್ಟ ರಾಜಕೀಯ ಪಕ್ಷಕ್ಕೆ ಅಭಿನಂದನೆಗಳು” ಎಂದು ಬರೆದಿದ್ದರು. ಇದಾದ ಎರಡು ಗಂಟೆಗಳೊಳಗಾಗಿ ಸಿಂಗ್ ಅವರ ಟ್ವೀಟ್‍ಗೆ 1,000ಕ್ಕೂ ಅಧಿಕ ಲೈಕ್ ಗಳು ಹಾಗೂ 474 ರಿಟ್ವೀಟ್ ದೊರಕಿದ್ದವು.
ಕಾಂಗ್ರೆಸ್ ಪಕ್ಷ ಭಾರತಕ್ಕೆ ಒಂದು ಅವಮಾನ ಎಂದೂ ಬಿಜೆಪಿ ಸಂಸದರಾಗಿರುವ ಸಿಂಗ್ ಬಣ್ಣಿಸಿದ್ದರು. ಅಷ್ಟಕ್ಕೂ ಅವರ ಈ ಹೇಳಿಕೆಗಳೆಲ್ಲ ಬಿಬಿಸಿನ್ಯೂಸ್‍ಹಬ್.ಕಾಂ ಎಂಬ ಸುದ್ದಿ ತಾಣದ ಲೇಖನವೊಂದರ ಆಧಾರವಾಗಿತ್ತು. ಈ ಲೇಖನದಲ್ಲಿ ಕಾಂಗ್ರೆಸ್ ಪಕ್ಷ ಜಗತ್ತಿನ ಎರಡನೇ ಅತ್ಯಂತ ಭ್ರಷ್ಟ ಪಕ್ಷ ಎಂದು ಹೇಳಲಾಗಿತ್ತಲ್ಲದೆ ಲೇಖನದ ತುಂಬೆಲ್ಲಾ ವ್ಯಾಕರಣ ತಪ್ಪುಗಳೇ ಇದ್ದವು.
ಈ ಬಿಬಿಸಿನ್ಯೂಸ್‍ಹಬ್ ಎಂಬ ನಕಲಿ ಸುದ್ದಿಗಳ ತಾಣ ಈ ಹಿಂದೆ ವಿಶ್ವದ ಅತ್ಯಂತ ಭ್ರಷ್ಟ ರಾಜಕರಣಿಗಳ ಪಟ್ಟಿ ತಯಾರಿಸಿ ಮೋದಿಯನ್ನು ಏಳನೇ ಸ್ಥಾನದಲ್ಲಿ ಕೂರಿಸಿತ್ತು ಎಂಬುದು ಉಲ್ಲೇಖಾರ್ಹ.
ಕೃಪೆ: altnews.in