×
Ad

ರಣಜಿ: ರೈಲ್ವೇಸ್ ಗೆ ಸೋಲುಣಿಸಿದ ಕರ್ನಾಟಕ

Update: 2018-12-25 23:20 IST

ಶಿವಮೊಗ್ಗ, ಡಿ.25: ನಿರೀಕ್ಷೆಯಂತೆ ಕರ್ನಾಟಕ ತಂಡ ರೈಲ್ವೇಸ್ ವಿರುದ್ಧ ಜಯ ಸಾಧಿಸಿ ತನ್ನ ಕ್ವಾರ್ಟರ್ ಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಗೌತಮ್ ಕೃಷ್ಣಪ್ಪ ಸ್ಪಿನ್ ಕೈಚಳಕಕ್ಕೆ ಕಂಗಾಲಾದ ಪ್ರವಾಸಿಗರು ಅಂತಿಮವಾಗಿ 185 ರನ್‌ಗೆ ಪೆವಿಲಿಯನ್ ಸೇರಿದರು. 176 ರನ್‌ಗಳಿಂದ ಕರ್ನಾಟಕ ವಿಜಯದ ಪತಾಕೆ ಹಾರಿಸಿತು.

ಇಲ್ಲಿಯ ಕೆಎಸ್‌ಸಿಎ ನವುಲೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸೋಮವಾರ 44 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದ್ದ ರೈಲ್ವೇಸ್ ನಾಲ್ಕನೇ ದಿನವಾದ ಮಂಗಳವಾರ ತನ್ನ ಆಟ ಆರಂಭಿಸಿ 185 ರನ್‌ಗಳಿಗೆ ಸರ್ವ ಪತನವಾಯಿತು. ದಿನದಾಟ ಆರಂಭಿಸಿದ್ದ ವಾಸಕ್ಕರ್(43) ಹಾಗೂ ನಿತಿನ್ ಭಿಲ್ಲೆ(39) ಉತ್ತಮ ಆಟವಾಡಿ ತಂಡ ಡ್ರಾ ಸಾಧಿಸಲು ನೆರವಾಗುವ ನಿರೀಕ್ಷೆಯಲ್ಲಿದ್ದರು. ವಾಸಕ್ಕರ್ ರನೌಟ್ ಆಗಿ ಪೆವಿಲಿಯನ್ ಸೇರಿದರೆ, ಭಿಲ್ಲೆ ಅವರು ಗೌತಮ್‌ರ ಸ್ಪಿನ್ ಬಲೆಗೆ ಬಿದ್ದರು. ಆನಂತರ ಪ್ರಥಮ್ ಸಿಂಗ್(48) ಹಾಗೂ ರೈಲ್ವೇಸ್ ನಾಯಕ ಅರಿಂದಮ್(ಔಟಾಗದೇ 24) ತಂಡಕ್ಕೆ ಚೇತರಿಕೆ ನೀಡುವ ಪ್ರಯತ್ನದಲ್ಲಿ ಅಲ್ಪ ಯಶಸ್ಸು ಕಂಡರೂ ಡ್ರಾ ಸಾಧಿಸುವಷ್ಟು ತಾಳ್ಮೆ ತೋರಲಿಲ್ಲ.

ಪ್ರಥಮ್ ಸಿಂಗ್ ವಿಕೆಟ್ ಒಪ್ಪಿಸಿದ ನಂತರ ಕ್ರೀಸ್‌ಗೆ ಬಂದ ಇತರ ದಾಂಡಿಗರು ಎರಡಂಕಿ ಮೊತ್ತವನ್ನೂ ಗಳಿಸಲಿಲ್ಲ. ರೈಲ್ವೇಸ್‌ನ ನಾಲ್ವರು ಸೊನ್ನೆ ಸುತ್ತಿದ್ದು ತಂಡಕ್ಕೆ ದುಬಾರಿಯಾಗಿ ಪರಿಣಮಿಸಿತು. ಒಂದು ಹಂತದಲ್ಲಿ 159ರನ್‌ಗೆ ಮೂರೇ ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿದ್ದ ರೈಲ್ವೇಸ್‌ಗೆ ಕೃಷ್ಣಪ್ಪ ಗೌತಮ್ ತಡೆ ಒಡಿದ್ಡರು. ಡ್ರಾದತ್ತ ಮುಖ ಮಾಡಿದ್ದ ಪಂದ್ಯವನ್ನು ಕರ್ನಾಟಕದತ್ತ ತಿರುಗಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. 24 ಓವರ್‌ಗಳ ಸ್ಪೆಲ್‌ನಲ್ಲಿ ಕೇವಲ 30 ರನ್ ನೀಡಿ 6 ವಿಕೆಟ್‌ನ್ನು ತಮ್ಮ ಖಾತೆ ಸೇರಿಸಿದರು. ಅವರ 11 ಓವರ್ ಮೇಡನ್ ಆಗಿದ್ದವು. ಗೌತಮ್‌ರಿಗೆ ಉತ್ತಮ ಸಾಥ್ ನೀಡಿದ ಶ್ರೇಯಸ್ ಗೋಪಾಲ್ 2 ವಿಕೆಟ್ ಪಡೆದರು. ಅಂತಿಮವಾಗಿ ಪ್ರವಾಸಿಗರು 185 ರನ್‌ಗಳಿಗೆ ಸರ್ವಪತನ ಕಂಡರು. ಎರಡೂ ಇನಿಂಗ್‌ನಲ್ಲಿ ಒಟ್ಟು 153 ರನ್ ಗಳಿಸಿದ ಕರ್ನಾಟಕದ ನಿಶ್ಚಲ್‌ಗೆ ಪಂದ್ಯಶ್ರೇಷ್ಠ ಗೌರವ ಒಲಿಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News