×
Ad

ರಣಜಿ: ಅಸ್ಸಾಂಗೆ ಏಳು ರನ್ ಜಯ

Update: 2018-12-25 23:21 IST

ಗುವಾಹಟಿ, ಡಿ.25: ಆತಿಥೇಯ ಅಸ್ಸಾಂ ತಂಡ ಗೋವಾ ವಿರುದ್ಧದ ರಣಜಿ ಟ್ರೋಫಿಯ ‘ಸಿ’ ಗುಂಪಿನ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಅಲ್ಪ ಮುನ್ನಡೆ ಬಿಟ್ಟುಕೊಟ್ಟಿದ್ದರೂ ಏಳು ರನ್‌ಗಳ ರೋಚಕ ಜಯ ದಾಖಲಿಸಿದೆ. ಈ ಮೂಲಕ ಆರು ಅಂಕವನ್ನು ತನ್ನದಾಗಿಸಿಕೊಂಡಿದೆ.

ಗೆಲ್ಲಲು 218 ರನ್ ಗುರಿ ಪಡೆದಿದ್ದ ಗೋವಾ ನಾಲ್ಕನೇ ಹಾಗೂ ಅಂತಿಮ ದಿನವಾದ ಮಂಗಳವಾರ 6 ವಿಕೆಟ್ ನಷ್ಟಕ್ಕೆ 166 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿತು. ಆದರೆ, 210 ರನ್‌ಗೆ ಗಂಟುಮೂಟೆ ಕಟ್ಟಿತು.

ಗೋವಾ ಅಮಿತ್ ವರ್ಮಾ ಹಾಗೂ ಲಕ್ಷ ಗರ್ಗ್ ಮೇಲೆ ವಿಶ್ವಾಸವಿರಿಸಿತ್ತು. ಈ ಇಬ್ಬರು ಕ್ರಮವಾಗಿ 62 ಹಾಗೂ 57 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ್ದರು. ವರ್ಮಾ ನಿನ್ನೆಯ ಸ್ಕೋರ್‌ಗೆ ಕೇವಲ 12 ರನ್ ಸೇರಿಸಿ 74 ರನ್‌ಗೆ ಔಟಾದರು. ಗೋವಾ ರೋಚಕ ಗೆಲುವಿನ ಹೊಸ್ತಿಲಲ್ಲಿರುವಾಗ ಗರ್ಗ್ 73 ರನ್ ಗಳಿಸಿ ಔಟಾದರು. ಆಗ ಗೋವಾದ ಸ್ಕೋರ್ 9 ವಿಕೆಟ್‌ಗೆ 202 ರನ್.

ಕೃಷ್ಣ ದಾಸ್(2) ವಿಕೆಟನ್ನು ಉರುಳಿಸಿದ ಬಲಗೈ ಮಧ್ಯಮ ವೇಗಿ ಅರೂಪ್ ದಾಸ್(67ಕ್ಕೆ6)ಅಸ್ಸಾಂಗೆ ಸ್ಮರಣೀಯ ಗೆಲುವು ತಂದರು.

ಈ ಗೆಲುವಿನೊಂದಿಗೆ ಅಸ್ಸಾಂ 7 ಪಂದ್ಯಗಳಲ್ಲಿ ಒಟ್ಟು 20 ಅಂಕ ಗಳಿಸಿದೆ. 10 ತಂಡಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.

ಇದೇ ವೇಳೆ ಎಡಗೈ ಸ್ಪಿನ್ನರ್ ಶಾಬಾಝ್ ನದೀಮ್(7-62)ಬೌಲಿಂಗ್ ಸಾಹಸದಿಂದ ಜಾರ್ಖಂಡ್ ತಂಡ ಸರ್ವಿಸಸ್ ವಿರುದ್ಧ 81 ರನ್ ಜಯ ದಾಖಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News