ಪ್ರೊ ಕಬಡ್ಡಿ ಹರ್ಯಾಣ-ತಮಿಳ್ ಪಂದ್ಯ ರೋಚಕ ಟೈ
ಕೋಲ್ಕತಾ, ಡಿ.25: ಪ್ರೊ ಕಬಡ್ಡಿ 6ನೇ ಋತುವಿನ ವೈಲ್ಡ್ ಕಾರ್ಡ್ ಪಂದ್ಯದಲ್ಲಿ ಮಂಗಳವಾರ ಹರ್ಯಾಣ ಸ್ಟೀಲರ್ಸ್ ಹಾಗೂ ತಮಿಳ್ ತಲೈವಾಸ್ ತಂಡಗಳು 40-40 ಅಂಕಗಳ ಅಂತರದ ರೋಚಕ ಟೈ ಸಾಧಿಸಿವೆ. ಹರ್ಯಾಣ ಸ್ಟೀಲರ್ಸ್ ತಂಡ ಅಂತಿಮ ನಿಮಿಷದಲ್ಲಿ 2 ಅಂಕ ಗಳಿಸಿ ಸೋಲು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಇಲ್ಲಿಯ ಸುಭಾಶ್ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಿತು. ಈ ಪಂದ್ಯದೊಂದಿಗೆ ಹರ್ಯಾಣ ಅಂಕಪಟ್ಟಿಯಲ್ಲಿ 6ನೇ ಸ್ಥಾನ ಕಾಪಾಡಿಕೊಂಡಿತು. ಹರ್ಯಾಣ ತಂಡದ ಪರ ಮೋನು ಗೋಯತ್ ಅತ್ಯಧಿಕ 17 ಅಂಕ ಗಳಿಸಿದರೆ, ಅಜಯ್ ಠಾಕೂರ್ ತಮಿಳ್ ತಲೈವಾಸ್ ಪರ 17 ಅಂಕ ಗಳಿಸಿದರು. ಇದೊಂದು ಔಪಚಾರಿಕ ಪಂದ್ಯ ಮಾತ್ರವಾಗಿತ್ತು. ಏಕೆಂದರೆ ಎರಡೂ ತಂಡಗಳು ಪ್ಲೇಆಫ್‌ನಿಂದ ಈಗಾಗಲೇ ಹೊರಬಿದ್ದಿವೆ.
ಇನ್ನೊಂದು ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ತಂಡ ತೆಲುಗು ಟೈಟಾನ್ಸ್‌ನ್ನು 39-34 ಅಂಕಗಳ ಅಂತರದಿಂದ ಮಣಿಸಿತು. ತೆಲುಗು ಟೈಟಾನ್ಸ್ ಪರ ಅರ್ಮಾನ್ ಅತ್ಯಧಿಕ 13 ಅಂಕ ಗಳಿಸಿದರೆ, ಬೆಂಗಾಲ್ ವಾರಿಯರ್ಸ್ ಪರ ಮಣಿಂದರ್ ಸಿಂಗ್ ಅತ್ಯಧಿಕ 12 ಅಂಕ ಗಳಿಸಿದರು.