×
Ad

ಎಚ್1ಎನ್1: ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಸ್ಥಿತಿ ಗಂಭೀರ

Update: 2018-12-26 18:24 IST

ಬೆಂಗಳೂರು, ಡಿ.26: ರಾಜ್ಯದ ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದ್ದು, ಎಚ್1ಎನ್1 ಸೋಂಕಿನಿಂದ ಬಳಲುತ್ತಿರುವ ಅವರಿಗೆ ಕಳೆದ ಒಂದು ವಾರದಿಂದ ಹೈದರಾಬಾದ್‌ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಹೈದರಾಬಾದ್‌ನ ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಉಪ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಧುಕರ್ ಶೆಟ್ಟಿಯ ಚಿಕಿತ್ಸೆಗೆ ಸಂಬಂಧಿಸಿದಂತೆ ಸ್ವತಃ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್ ಜೊತೆ ಚರ್ಚಿಸಿದ್ದಾರೆ. ಅಲ್ಲದೆ, ಸಿಐಡಿ ಎಡಿಜಿಪಿ ಪ್ರತಾಪ್‌ ರೆಡ್ಡಿಯನ್ನು ಮಧುಕರ್ ಶೆಟ್ಟಿಯ ಚಿಕಿತ್ಸೆಯ ಮೇಲ್ವಿಚಾರಣೆಗೆ ರಾಜ್ಯ ಸರಕಾರ ನೇಮಕ ಮಾಡಿದೆ ಎಂದು ತಿಳಿದು ಬಂದಿದೆ.

ಶ್ವಾಸಕೋಶ ಹಾಗೂ ಜೀರ್ಣಾಂಗದ ಸಮಸ್ಯೆಯಿಂದ ಬಳಲುತ್ತಿರುವ ಮಧುಕರ್ ಶೆಟ್ಟಿ, ಸದ್ಯ ವೆಂಟಿಲೇಟರ್ ಹಾಗೂ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದಾರೆ. ಮುಂದಿನ 12 ಗಂಟೆಗಳು ಅತ್ಯಂತ ಸೂಕ್ಷ್ಮವಾಗಿದೆ. ಆದರೂ, ಅವರ ಆರೋಗ್ಯದಲ್ಲಿ ನಿನ್ನೆಯಿಂದ ಸುಧಾರಣೆ ಕಾಣುತ್ತಿದೆ ಎಂದು ಹೇಳಲಾಗಿದೆ.

ಹಿರಿಯ ಪತ್ರಕರ್ತ ಹಾಗೂ ಮುಂಗಾರು ಪತ್ರಿಕೆಯ ಸಂಪಾದಕರಾಗಿದ್ದ ದಿವಂಗತ ವಡ್ಡರ್ಸೆ ರಘುರಾಮಶೆಟ್ಟಿ ಅವರ ಪುತ್ರರಾಗಿರುವ ಮಧುಕರ್ ಶೆಟ್ಟಿ, ಕರ್ನಾಟಕದ ಉಡುಪಿ ಜಿಲ್ಲೆಯವರು. 1999ರ ಬ್ಯಾಚ್(ಕರ್ನಾಟಕ ಕೇಡರ್)ನಲ್ಲಿ ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾದವರು.

ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ)ದ ಪರೀಕ್ಷೆ ಕೈಗೊಳ್ಳುವ ಮುನ್ನ ಹೊಸದಿಲ್ಲಿಯ ಜವಾಹರ್‌ಲಾಲ್ ವಿಶ್ವವಿದ್ಯಾಲಯ(ಜೆಎನ್‌ಯು)ದಲ್ಲಿ ಸಮಾಜ ಶಾಸ್ತ್ರದಲ್ಲಿ ಎಂ.ಎ.ಪದವಿ ಪಡೆದಿದ್ದಾರೆ. ಅಲ್ಲದೆ, ನ್ಯೂಯಾರ್ಕ್‌ನ ಅಲ್ಬಾನಿಯಲ್ಲಿರುವ ರಾಕ್‌ಫೆಲ್ಲರ್ ಕಾಲೇಜ್ ಆಫ್ ಪಬ್ಲಿಕ್ ಅಫೇರ್ಸ್‌ ಅಂಡ್ ಪಾಲಿಸಿ ವಿಶ್ವವಿದ್ಯಾಲಯ ದಿಂದ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ವಿಷಯದಲ್ಲಿ ಪಿಎಚ್‌ಡಿ ಪದವಿಯನ್ನು ಪಡೆದಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಯಾಗಿಯೂ ಮಧುಕರ್ ಶೆಟ್ಟಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಕಾಡುಗಳ್ಳ ವೀರಪ್ಪನ್ ವಿರುದ್ಧದ ಅಂತಿಮ ಹಂತದ ಕಾರ್ಯಾಚರಣೆ ವೇಳೆ ವಿಶೇಷ ಕಾರ್ಯಪಡೆಯ ವರಿಷ್ಠಾಧಿಕಾರಿಯಾಗಿಯೂ ಅವರು ಕರ್ತವ್ಯ ನಿರ್ವಹಿಸಿದ್ದರು.

ನಕ್ಸಲ್ ವಿರೋಧಿ ಪಡೆಯ ಎಸ್ಪಿ, ರಾಜ್ಯ ಲೋಕಾಯುಕ್ತ ಎಸ್ಪಿ, ಬೆಂಗಳೂರು ಸಂಚಾರ ವಿಭಾಗದ ಉಪ ಆಯುಕ್ತರಾಗಿಯೂ ಸೇವೆ ಸಲ್ಲಿಸಿದ್ದ ಮಧುಕರ್ ಶೆಟ್ಟಿ, 2008-09ರಲ್ಲಿ ವಿಶ್ವಸಂಸ್ಥೆಯು ಕೊಸವಾದಲ್ಲಿ ಹಮ್ಮಿಕೊಂಡಿದ್ದ ಯೋಜನೆಗಾಗಿ ಪ್ರಭಾರಿಯಾಗಿ ಹೋಗಿದ್ದರು. ಅಲ್ಲಿ, ಯುದ್ಧಕ್ಕೆ ಸಂಬಂಧಿಸಿದ ಅಪರಾಧಗಳ ತನಿಖಾ ವಿಭಾಗದಲ್ಲಿಯೂ ಕೆಲಸ ಮಾಡಿದ್ದರು.

ಲೋಕಾಯುಕ್ತದಲ್ಲಿ ಸೇವೆ ಸಲ್ಲಿಸುತ್ತಿರುವಾಗಲೇ, ಉನ್ನತ ವಿದ್ಯಾಭ್ಯಾಸಕ್ಕಾಗಿ ದೀರ್ಘಾವಧಿ ರಜೆ ಪಡೆದು 2011ರಲ್ಲಿ ಮಧುಕರ್ ಶೆಟ್ಟಿ, ವಿದೇಶಕ್ಕೆ ತೆರಳಿದ್ದರು. ಆನಂತರ, ಡಿಐಜಿಯಾಗಿ ಭಡ್ತಿ ಪಡೆದು ಕೆಲಕಾಲ ಪೊಲೀಸ್ ನೇಮಕಾತಿ ವಿಭಾಗದಲ್ಲಿಯೂ ಕಾರ್ಯ ನಿರ್ವಹಿಸಿದ್ದರು.
ನಂತರ, ಕೇಂದ್ರ ಸೇವೆಗೆ ತೆರಳಿದ ಅವರು, 2017ರಿಂದ ಹೈದರಾಬಾದ್‌ನಲ್ಲಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಉಪ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News