×
Ad

ಆಧಾರ್ ನಂಬರ್ ಬಳಸಿ ನಿಮ್ಮ ಖಾತೆಯಲ್ಲಿದ್ದ ಹಣ ದೋಚುತ್ತಾರೆ.. ಎಚ್ಚರಿಕೆ!

Update: 2018-12-26 23:03 IST

ಆಧಾರ್ ಕಾರ್ಡ್ ಸಂಬಂಧಿತ ವಂಚನೆಗಳು ಭಾರತದಲ್ಲಿ ಹೆಚ್ಚುತ್ತಿವೆ. ಅಮಾಯಕರ ಹಣ ಎಗರಿಸಲು ದುಷ್ಕರ್ಮಿಗಳು ಹೊಸ ಹಾಗೂ ವಿನೂತನ ವಿಧಾನಗಳನ್ನು ಕಂಡುಕೊಂಡಿದ್ದಾರೆ. ಆಧಾರ್ ವಂಚನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ನಿಮ್ಮ ಬ್ಯಾಂಕ್ ಖಾತೆಯನ್ನು ಬರಿದು ಮಾಡಲು ಮತ್ತು ಕಠಿಣ ಪರಿಶ್ರಮದಿಂದ ಗಳಿಸಿದ ಹಣವನ್ನು ಲೂಟಿ ಮಾಡಲು ಇಂತಹ ದಂಧೆಕೋರರು ಹೇಗೆ ವಿನೂತನ ವಿಧಾನಗಳನ್ನು ಅನುಸರಿಸುತ್ತಿದ್ದಾರೆ ಎಂಬ ಬಗ್ಗೆ ಬ್ಯಾಂಕ್‍ಗಳು ತಮ್ಮ ಗ್ರಾಹಕರಿಗೆ ಎಚ್ಚರಿಕೆ ನೀಡುವುದು, ಮಾಹಿತಿ ನೀಡುವುದು ಮತ್ತು ಸೂಕ್ತ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ. ಇದೀಗ ಬ್ಯಾಂಕಿಂಗ್ ಯೂನಿಯನ್‍ನ ಮಾಜಿ ಪ್ರಧಾನ ಕಾರ್ಯದರ್ಶಿಯೊಬ್ಬರು ದೇಶದಲ್ಲಿ ಹೆಚ್ಚುತ್ತಿರುವ ಹಗರಣಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ ಎಂದು moneylife.in ವರದಿ ಮಾಡಿದೆ.

ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದವರ ವಾಟ್ಸ್ ಆ್ಯಪ್ ಗ್ರೂಪ್ ಒಂದರಲ್ಲಿ ಸಂವಾದ ರೂಪದಲ್ಲಿ ಈ ಎಚ್ಚರಿಕೆ ನೀಡಲಾಗಿದೆ. ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ (ಎಐಬಿಒಸಿ) ಮಾಜಿ ಪ್ರಧಾನ ಕಾರ್ಯದರ್ಶಿ ಡಿ.ಥಾಮಸ್ ಫ್ರಾಂಕೊ ಅವರು, ಅಮಾಯಕ ಆಧಾರ್ ಕಾರ್ಡ್‍ದಾರರೊಬ್ಬರು ವಂಚನೆಗೆ ಒಳಗಾದ ಪ್ರಕರಣವನ್ನು ಬಣ್ಣಿಸಿದ್ದಾರೆ. ಅವರ ಎಲ್ಲ ಹಣವನ್ನು ಕಿಡಿಗೇಡಿಯೊಬ್ಬ ಬ್ಯಾಂಕ್ ಅಧಿಕಾರಿ ಎಂದು ಬಿಂಬಿಸಿಕೊಂಡು ಲೂಟಿ ಮಾಡಿದ್ದಾನೆ.

ಡಿಸೆಂಬರ್ 21ರಂದು ಅಂಥ ಮತ್ತೊಂದು ಪ್ರಕರಣ ವರದಿಯಾಗಿದೆ. ಡಾ.ಲಾಲ್‍ಮೋಹನ್ ಎಂಬುವವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‍ಬಿಐ)ದ ಪ್ರಬಂಧಕ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಕರೆ ಮಾಡಿದ. ಆ ವ್ಯಕ್ತಿ ಡಾ.ಲಾಲ್ ಮೋಹನ್ ಅವರ ಆಧಾರ್ ಸಂಖ್ಯೆಯನ್ನು ಪಡೆದುಕೊಂಡ. ತಕ್ಷಣ ಅವರ ಖಾತೆಯಿಂದ ಮೊದಲು 5000 ರೂಪಾಯಿ ಹಾಗೂ ಬಳಿಕ 20000 ರೂಪಾಯಿ ಪಡೆಯಲಾಯಿತು. ಮತ್ತೂ ಬೇಸರದ ಸಂಗತಿಯೆಂದರೆ ತಮ್ಮ ಖಾತೆಯನ್ನು ಲಾಲ್‍ಮೋಹನ್ ಬ್ಲಾಕ್ ಮಾಡಿದ ಬಳಿಕವೂ ಹಣ ತೆಗೆಯುವುದು ಮುಂದುವರಿದು, ಖಾತೆಯಲ್ಲಿ ಕೇವಲ 200 ರೂಪಾಯಿ ಮಾತ್ರ ಉಳಿಯಿತು.

ಫ್ರಾಂಕೊ ಹೇಳುವಂತೆ, ಡಾ.ಲಾಲ್‍ಮೋಹನ್ ಅವರು ತಮ್ಮ ಪಾಸ್‍ವರ್ಡ್ ನೀಡದಿದ್ದರೂ, ಕಿಡಿಗೇಡಿಗಳು ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ನೇರವಾಗಿ ಹಣವನ್ನು ತೆಗೆದಿದ್ದಾರೆ. ಇದಕ್ಕೆ ಯಾವ ಪಾಸ್‍ವರ್ಡ್ ಅಥವಾ ಒಟಿಪಿ ಅಗತ್ಯವಿಲ್ಲ.

ಎಐಬಿಒಸಿ ಮಾಜಿ ಪ್ರಧಾನ ಕಾರ್ಯದರ್ಶಿಯ ಮತ್ತೊಬ್ಬ ಸ್ನೇಹಿತರು ಇಂಥದ್ದೇ ಕರೆಯನ್ನು ಸ್ವೀಕರಿಸಿದ್ದಾರೆ. ಆಧಾರ್ ಸಂಖ್ಯೆ ಕೇಳಿದಾಗ ಅವರು ಆಧಾರ್ ಸಂಖ್ಯೆಯನ್ನು ನೀಡಿಲ್ಲ. ಮೂರನೇ ಘಟನೆಯಲ್ಲಿ ಮಹಿಳಾ ಸ್ನೇಹಿತೆಯೊಬ್ಬರಿಗೆ ಇಂಥ ವಂಚಕರು ಕರೆ ಮಾಡಿ, ನಿಮ್ಮ ಕ್ರೆಡಿಟ್ ಕಾರ್ಡ್‍ನ ಅವಧಿ ಮುಕ್ತಾಯವಾಗಿದೆ. ಕಾರ್ಡ್ ಮರುಚಾಲನೆ ಮಾಡಲು ಕೆಲ ವಿವರಗಳನ್ನು ನೀಡಬೇಕು ಎಂದು ಕೇಳಿದ್ದಾನೆ. ಆಕೆ ವಿವರಗಳನ್ನು ಫೋನ್ ಮೂಲಕ ಕೊಡಲು ಸಾಧ್ಯವಿಲ್ಲವೆಂದು ನಿರಾಕರಿಸಿದ್ದಾರೆ ಎಂದು moneylife.in ವರದಿ ಮಾಡಿದೆ.

"ನಾವು ಬ್ಯಾಂಕ್‍ಗೆ ತಕ್ಷಣ ಕರೆ ಮಾಡಿ, ಖಾತೆಗೆ ಸಂಪರ್ಕ ಕಲ್ಪಿಸಲಾದ ಆಧಾರ್ ಸಂಖ್ಯೆಯ ಸಂಪರ್ಕ ಕಡಿತಗೊಳಿಸಲು ಮನವಿ ಮಾಡಿಕೊಳ್ಳಬೇಕು. ನಿಮ್ಮ ಆಧಾರ್ ಸಂಖ್ಯೆ, ಪಾಸ್‍ವರ್ಡ್ ಅಥವಾ ಯಾವುದೇ ಬ್ಯಾಂಕಿಂಗ್ ವಿವರಗಳನ್ನು ಯಾವುದೇ ಕಾರಣಕ್ಕೆ ಫೋನ್ ಮೂಲಕ ಬೇರೆಯವರಿಗೆ ನೀಡಬೇಡಿ" ಎಂದು ಈ ಸಂವಾದದಲ್ಲಿ ಫ್ರಾಂಕೊ ಹೇಳಿದ್ದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈಗಾಗಲೇ ಉಲ್ಲೇಖಿಸಿರುವಂತೆ, ಈ ವಂಚಕರು ಹಣವನ್ನು ದುರುಪಯೋಗ ಮಾಡಿಕೊಳ್ಳುವ ಸಲುವಾಗಿ ಆಧಾರ್ ಸಂಖ್ಯೆಯನ್ನು ಬಿಟ್ಟುಕೊಡುವಂತೆ ಉಪಾಯವಾಗಿ ಕೇಳುತ್ತಾರೆ. ಆದ್ದರಿಂದ ಬ್ಯಾಂಕ್ ಅಧಿಕಾರಿಗಳೆಂದು ಹೇಳಿಕೊಂಡು ಯಾರೇ ಕರೆ ಮಾಡಿ ನಿಮ್ಮ ಆಧಾರ್ ಸಂಖ್ಯೆ ಅಥವಾ ಒಟಿಪಿ ಇಲ್ಲವೇ ಪಾಸ್‍ವರ್ಡ್ ಕೇಳಿದರೆ, ಉಪಾಯವಾಗಿ ನಿಮ್ಮನ್ನು ಜಾಲಕ್ಕೆ ಬೀಳಿಸಲು ವಂಚಕರು ಹೂಡಿದ ತಂತ್ರವಾಗಿರುವ ಸಾಧ್ಯತೆ ಅಧಿಕವಾಗಿರುತ್ತದೆ. ನೀವು ಇದರಿಂದ ಪಡೆಯಬಹುದಾದ ಸೂಕ್ತ ರಕ್ಷಣೆ ಎಂದರೆ, ಫೋನ್ ಮೂಲಕ ಈ ವಿವರಗಳನ್ನು ನೀಡಲು ನಿರಾಕರಿಸುವುದು ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News