ಇಂದು ಒಮಾನ್ ವಿರುದ್ಧ ಭಾರತದ ಸೌಹಾರ್ದ ಪಂದ್ಯ
Update: 2018-12-26 23:45 IST
ಅಬುಧಾಬಿ, ಡಿ.26: ಎಎಫ್‌ಸಿ ಏಶ್ಯಕಪ್ ಫುಟ್ಬಾಲ್ ಟೂರ್ನಿಯ ಸಿದ್ಧತೆಯಾಗಿ ಭಾರತ ಹಾಗೂ ಒಮಾನ್ ತಂಡಗಳು ಗುರುವಾರ ಸೌಹಾರ್ದ ಪಂದ್ಯವಾಡಲಿವೆ. 2019 ಜೂ.5ರಿಂದ ಅಬುಧಾಬಿಯಲ್ಲಿ ಏಶ್ಯಕಪ್ ಟೂರ್ನಿಗೆ ಚಾಲನೆ ಸಿಗಲಿದೆ
ಸೌಹಾರ್ದ ಪಂದ್ಯದ ಕುರಿತು ಮಾತನಾಡಿರುವ ಭಾರತ ತಂಡದ ಮುಖ್ಯ ಕೋಚ್ ಸ್ಟೀಫನ್ ಕಾನ್‌ಸ್ಟಂಟೈನ್, ‘‘ನಾವು ಇಲ್ಲಿ ಸುಲಭ ಪಂದ್ಯದ ನಿರೀಕ್ಷೆಯಿಟ್ಟುಕೊಂಡು ಬಂದಿಲ್ಲ. ಒಮಾನ್ ವಿರುದ್ಧ ಗೆಲುವಿಗಾಗಿ ಕಠಿಣ ಹೋರಾಟ ನಡೆಸಲಿದ್ದೇವೆ’’ ಎಂದರು.
ಈ ಪಂದ್ಯವು ಭಾರತದ ಆಟಗಾರರಿಗೆ ಸೂಕ್ತ ಅಭ್ಯಾಸಕ್ಕಾಗಿ ಇದೆ. ಭಾರತ ತನ್ನ ಏಶ್ಯಕಪ್ ಅಭಿಯಾನವನ್ನು ಜ.6ರಂದು ಥಾಯ್ಲೆಂಡ್ ವಿರುದ್ಧ ಆಡುವುದರ ಮೂಲಕ ಆರಂಭಿಸಲಿದೆ.
ಒಮಾನ್ ಸದ್ಯ ಫಿಫಾ ರ್ಯಾಂಕಿಂಗ್‌ನಲ್ಲಿ 82ನೇ ಸ್ಥಾನದಲ್ಲಿದ್ದು, ಭಾರತ 97ನೇ ಸ್ಥಾನದಲ್ಲಿದೆ. 2018ರ ರಶ್ಯ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ 2 ಬಾರಿ ಭಾರತ ಹಾಗೂ ಒಮಾನ್ ಮುಖಾಮುಖಿಯಾಗಿದ್ದವು. ಎರಡೂ ಬಾರಿ ಒಮಾನ್ ಜಯ ಸಾಧಿಸಿತ್ತು.