ಎನ್ ಐಎ ಬಂಧಿಸಿದ 'ಐಸಿಸ್ ಉಗ್ರರ' ಬಳಿ ಪಟಾಕಿ ಬಾಂಬ್, ದೇಸೀ ಪಿಸ್ತೂಲು !

Update: 2018-12-27 15:14 GMT

ಹೊಸದಿಲ್ಲಿ, ಡಿ.27: ಬುಧವಾರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ದಿಲ್ಲಿ ಹಾಗು ಉತ್ತರ ಪ್ರದೇಶದ ವಿವಿಧೆಡೆ ದಾಳಿ ನಡೆಸಿ 10 ಮಂದಿಯನ್ನು ಬಂಧಿಸಿತ್ತು. ಇವರು ಐಸಿಸ್ ನಿಂದ ಸ್ಫೂರ್ತಿ ಪಡೆದು ಭಯೋತ್ಪಾದಕ ದಾಳಿಗೆ ಸಜ್ಜಾಗಿದ್ದರು ಹಾಗು ಇವರಿಂದ ಸ್ಥಳೀಯವಾಗಿ ನಿರ್ಮಿಸಲಾದ ರಾಕೆಟ್ ಲಾಂಚರ್, ಆತ್ಮಹತ್ಯಾ ಕವಚ, ಬಾಂಬ್ ಟೈಮರ್ ಗಳಾಗಿ ಬಳಸಲು ಇಟ್ಟಿದ್ದ 112 ಅಲಾರ್ಮ್ ಗಡಿಯಾರಗಳು, ದೇಸೀ ರಿವಾಲ್ವರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್ ಐಎ ಹೇಳಿತ್ತು ಮತ್ತು ಅವುಗಳ ಚಿತ್ರಗಳನ್ನು ಬಿಡುಗಡೆಗೊಳಿಸಿತ್ತು.

ಆದರೆ ಎನ್  ಐಎ ಬಿಡುಗಡೆ ಮಾಡಿರುವ ' ಮಾರಕ ಆಯುಧಗಳ' ಚಿತ್ರಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಅಭಿಪ್ರಾಯ ಕೇಳಿಬಂದಿದೆ. ಈ ಶಸ್ತ್ರಾಸ್ತ್ರಗಳ ಚಿತ್ರದಲ್ಲಿ ಸಾಮಾನ್ಯವಾಗಿ ದೀಪಾವಳಿಯಲ್ಲಿ ಬಳಸುವ ಸುತ್ಲಿ ಬಾಂಬ್ ಕೂಡ ಇರುವುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. 

ಉತ್ತರ ಪ್ರದೇಶದಿಂದ ಪ್ರಮುಖ ಇಂಗ್ಲಿಷ್ ದೈನಿಕಕ್ಕೆ ವರದಿ ಮಾಡುವ ಹಿರಿಯ ಪತ್ರಕರ್ತ ಪಿಯೂಷ್ ರೈ ಎನ್ಐಎ ಬಿಡುಗಡೆ ಮಾಡಿರುವ ಚಿತ್ರವನ್ನು ಕೆಲವು ಸಮಯದ ಹಿಂದೆ ಮೀರತ್ ನ ಗ್ಯಾಂಗ್ ಒಂದರಿಂದ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳೊಂದಿಗೆ ಹೋಲಿಕೆ ಮಾಡಿದ್ದಾರೆ. ಆ ಗ್ಯಾಂಗ್ ನಿಂದ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳು ಎನ್ ಐಎ ಪ್ರಕಾರ ದೇಶದ ವಿರುದ್ಧ ಯುದ್ಧ ಸಾರಲು ಐಸಿಸ್ ಪ್ರೇರಿತ ಯುವಕರು ಬಳಸಲು ಉದ್ದೇಶಿಸಿದ್ದ ಶಸ್ತ್ರಾಸ್ತ್ರಗಳಿಗಿಂತ ಮಾರಕ ಹಾಗು ಅಪಾಯಕಾರಿಯಾಗಿದ್ದವು.

ಮಾತ್ರವಲ್ಲ ಪಿಯೂಷ್ ಪ್ರಕಾರ ಉತ್ತರ ಪ್ರದೇಶದ ವಿವಿಧೆಡೆ ಆಗಾಗ ಗ್ಯಾಂಗ್ ಗಳು ಬಳಸುವ ಪಿಸ್ತೂಲ್ ಇತರೆ ಶಸ್ತ್ರಾಸ್ತ್ರಗಳು ಇದಕ್ಕಿಂತ ಅಪಾಯಕಾರಿಯಾಗಿರುತ್ತವೆ. ಹೀಗಿರುವಾಗ ಐಸಿಸ್ ನಂತಹ ಮಾರಕ ಭಯೋತ್ಪಾದಕ ಸಂಘಟನೆಯಿಂದ ಸ್ಫೂರ್ತಿ ಪಡೆದು ಭಯೋತ್ಪಾದಕ ದಾಳಿ ಮಾಡಲು ಹೊರಟವರು ದೇಸೀ ಕಟ್ಟ ಪಿಸ್ತೂಲು ಹಾಗು ಪಟಾಕಿ ಸುತ್ಲಿ ಬಾಂಬ್ ಬಳಸುವುದು ಹೇಗೆ ಎಂಬುದು ನೆಟ್ಟಿಗರ ಪ್ರಶ್ನೆ.

ಮಾಜಿ ಪತ್ರಕರ್ತ ಹಾಗು ಹಾಲಿ ಚಿತ್ರ ನಿರ್ದೇಶಕ ವಿನೋದ್ ಕಾಪ್ರಿ ಕೂಡ ಇದೇ ಪ್ರಶ್ನೆ ಎತ್ತಿದ್ದಾರೆ. ಐಸಿಸ್ ಭಯೋತ್ಪಾದಕರದ್ದೆಂದು ಎನ್ ಐಎ ಹೇಳುತ್ತಿರುವ ದೇಸೀ ಕಟ್ಟ ಪಿಸ್ತೂಲುಗಳನ್ನು ಈಗ ಮೀರತ್ ನ ಗಲ್ಲಿ ಗಲ್ಲಿಗಳಲ್ಲಿ ಇರುವ ಗೂಂಡಾಗಳು ಕೂಡ ಬಳಸುವುದಿಲ್ಲ ಎಂದು ಅವರು ಗಮನ ಸೆಳೆದಿದ್ದಾರೆ.

ಎನ್ ಡಿ ಟಿವಿ ಹಿರಿಯ ಪತ್ರಕರ್ತ ಉಮಾಶಂಕರ್ ಸಿಂಗ್ "ಐಸಿಸ್ ಉಗ್ರರು ಭಾರತಕ್ಕೆ ಬಂದು ತೀವ್ರ ಅಸಹಾಯಕರಾಗಿ ದೇಶದ ವಿರುದ್ಧ ಫಿದಾಯೀನ್ ದಾಳಿ ನಡೆಸಲು ದೀಪಾವಳಿಯಲ್ಲಿ ಉಳಿದ ಪಟಾಕಿಗಳನ್ನೇ ಬಳಸಲು ಹೊರಟಿದ್ದರು. ಇದನ್ನು ತಡೆದ ಎನ್ ಐಎಗೆ ಅಭಿನಂದನೆಗಳು. ಅಂದ ಹಾಗೆ ಈ ಮೇಡ್ ಇನ್ ಮುಂಗೇರ್ ( ದೇಸೀ ಪಿಸ್ತೂಲು ತಯಾರಿಸುವ ಬಿಹಾರದ ಊರು ) ಶಸ್ತ್ರಾಸ್ತ್ರಗಳಿಂದ ಸಿರಿಯಾದಲ್ಲಿ ಎಷ್ಟು ಮಂದಿಯನ್ನು ಕೊಲ್ಲಲಾಗಿದೆ?" ಎಂದು ಕಟಕಿಯಾಡಿದ್ದಾರೆ.

ಇನ್ನೋರ್ವ ಹಿರಿಯ ಪತ್ರಕರ್ತೆ ಸ್ವಾತಿ ಚತುರ್ವೇದಿ ಟ್ವೀಟ್ ಮಾಡಿ "ಧನ್ಯವಾದಗಳು ದೋವಲ್ ( ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ), ಐಸಿಸ್ ನವರ ಬಳಿ ಕೇವಲ ಸುತ್ಲಿ ಬಾಂಬ್ ಹಾಗು ದೇಸೀ ಕಟ್ಟ ಪಿಸ್ತೂಲುಗಳಿವೆ ಎಂದು ತೋರಿಸಿದ್ದಕ್ಕೆ. ಈ ಗೋರಕ್ಷಕ ಗೂಂಡಾಗಳಿಗಿಂತ ಇವರು ಕಡಿಮೆ ಅಪಾಯಕಾರಿಗಳು" ಎಂದು ವ್ಯಂಗ್ಯವಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News