ಪ್ರಯಾಣಿಕರ ಪಾಲಿಗೆ ಇಂಡಿಗೋ ಅತ್ಯಂತ ಕೆಟ್ಟ ವಿಮಾನಯಾನ ಸಂಸ್ಥೆ: ಸಂಸದೀಯ ಸಮಿತಿ

Update: 2018-12-27 16:00 GMT

ಹೊಸದಿಲ್ಲಿ,ಡಿ.27: ಇಂಡಿಗೋ ಬಳಕೆದಾರರ ಪಾಲಿಗೆ ಅತ್ಯಂತ ಕೆಟ್ಟ ವಿಮಾನಯಾನ ಸಂಸ್ಥೆಯಾಗಿದೆ ಎಂದು ಸಂಸದೀಯ ಸ್ಥಾಯಿ ಸಮಿತಿಯು ಗುರುವಾರ ರಾಜ್ಯಸಭೆಯಲ್ಲಿ ಮಂಡಿಸಿದ ತನ್ನ ವರದಿಯಲ್ಲಿ ಹೇಳಿದೆ.

 ಇಂಡಿಗೋ ಬಳಕೆದಾರರ ಪಾಲಿಗೆ ಅತ್ಯಂತ ಕೆಟ್ಟ ನಿರ್ವಹಣೆಯ ವಿಮಾನಯಾನ ಸಂಸ್ಥೆಯಾಗಿದೆ ಎನ್ನುವುದು ಸಮಿತಿಯ ಸ್ಪಷ್ಟ ಅಭಿಪ್ರಾಯವಾಗಿದೆ. ಹಲವಾರು ದೂರುಗಳಿದ್ದರೂ ಆ ಸಂಸ್ಥೆಯು ಸ್ಪಂದಿಸಿಲ್ಲ. ಒಂದೆರಡು ಕೆಜಿ ಹೆಚ್ಚುವರಿ ತೂಕವಿದ್ದರೂ ಇಂಡಿಗೋ ಅದಕ್ಕೆ ಶುಲ್ಕ ವಿಧಿಸುತ್ತಿದೆ. ಇದನ್ನು ಸಮಿತಿಯು ಗಂಭೀರವಾಗಿ ಪರಿಶೀಲಿಸುತ್ತಿದೆ ಎಂದು ಸಮಿತಿಯ ಅಧ್ಯಕ್ಷ ಹಾಗೂ ತೃಣಮೂಲ ಕಾಂಗ್ರೆಸ್ ಸದಸ್ಯ ಡೆರೆಕ್ ಒಬ್ರಿಯೆನ್ ಹೇಳಿದರು.

ಸಮಿತಿಯು ಇಂಡಿಗೋವನ್ನು ತರಾಟೆಗೆತ್ತಿಕೊಂಡಿರುವುದು ಈ ವರ್ಷದಲ್ಲಿ ಇದು ಎರಡನೇ ಬಾರಿಯಾಗಿದೆ. ಸಮಿತಿಯು ಕಳೆದ ಜನವರಿಯಲ್ಲಿ ಸಲ್ಲಿಸಿದ್ದ ತನ್ನ ವರದಿಯಲ್ಲಿ ಸಿಬ್ಬಂದಿಗಳ ಒರಟು ವರ್ತನೆ,ತರಬೇತಿಯ ಕೊರತೆ,ಹೆಚ್ಚಿನ ಪ್ರಯಾಣ ದರಗಳು ಮತ್ತು ಆಹಾರದ ಅಲಭ್ಯತೆ ಸೇರಿದಂತೆ ಹಲವಾರು ವಿಷಯಗಳಲ್ಲಿ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ,ವಿಶೇಷವಾಗಿ ಇಂಡಿಗೋಕ್ಕೆ ಹೆಚ್ಚಿನ ಛೀಮಾರಿಯನ್ನು ಹಾಕಿತ್ತು.

ಪ್ರಯಾಣಿಕರು ತಮ್ಮ ಟಿಕೆಟ್‌ಗಳನ್ನು ರದ್ದುಗೊಳಿಸಿದರೆ ರದ್ದತಿ ಶುಲ್ಕವು ಮೂಲದರದ ಶೇ.50ನ್ನು ಮೀರುವಂತಿಲ್ಲ. ಅವರಿಂದ ಸಂಗ್ರಹಿಸಲಾದ ತೆರಿಗೆ ಮತ್ತು ಇಂಧನ ಮೇಲ್ತೆರಿಗೆಯನ್ನು ಮರಳಿಸಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ. ಹಾಲಿ ವಿಮಾನಯಾನ ಸಂಸ್ಥೆಗಳು ಹೆಚ್ಚಿನ ಶುಲ್ಕಗಳನ್ನು ವಿಧಿಸುತ್ತಿವೆ ಎಂದರು.

ಹಬ್ಬಗಳ ಸಂದರ್ಭದಲ್ಲಿ ಕೆಲವು ವಿಮಾನಯಾನ ಸಂಸ್ಥೆಗಳು ಪ್ರಯಾಣದರಗಳನ್ನು 8-10 ಪಟ್ಟು ಹೆಚ್ಚಿಸುತ್ತಿವೆ. ಇದಕ್ಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂಬ ಕಠಿಣ ಸಂದೇಶವನ್ನು ಸಚಿವಾಲಯದ ಮೂಲಕ ಅವುಗಳಿಗೆ ನಾವು ರವಾನಿಸುತ್ತಿದ್ದೇವೆ ಎಂದು ವರದಿಯು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News