ಜಲ್ಲಿಕಟ್ಟುವಿಗೆ ಅನುಮತಿ ನೀಡಿದ ತಮಿಳುನಾಡು ಸರಕಾರ

Update: 2018-12-27 15:45 GMT

ಮದುರೈ,ಡಿ.27: ಜನವರಿಯಲ್ಲಿ ಮಧುರೈಯ ಮೂರು ಕಡೆಗಳಲ್ಲಿ ರಾಜ್ಯದ ಸಾಂಪ್ರದಾಯಿಕ ಎತ್ತಿನ ಓಟ ಸ್ಪರ್ಧೆ ಜಲ್ಲಿಕಟ್ಟು ನಡೆಸಲು ತಮಿಳುನಾಡು ಸರಕಾರ ಅನುಮತಿ ನೀಡಿದೆ.

1960ರ ಪ್ರಾಣಿ ಹಿಂಸೆ ತಡೆ ಕಾಯ್ದೆಯ ಸೆಕ್ಷನ್ 2ರ ಅಡಿಯಲ್ಲಿ ಆಯ್ದ ದಿನಗಳಲ್ಲಿ ಆಯ್ದ ಜಾಗಗಳಲ್ಲಿ ಜಲ್ಲಿಕಟ್ಟು ನಡೆಸಬಹುದು ಎಂದು ತಮಿಳುನಾಡು ರಾಜ್ಯಪಾಲರು ಈ ಮೂಲಕ ಅಧಿಸೂಚನೆ ಜಾರಿ ಮಾಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯ ವರದಿ ಮಾಡಿದೆ.

ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾಗಿರುವ ಜಲ್ಲಿಕಟ್ಟುವಿನಲ್ಲಿ ಎತ್ತನ್ನು ಜನರ ಗುಂಪಿನತ್ತ ಓಡಿಸಲಾಗುತ್ತದೆ. ಎತ್ತಿನ ಕೊಂಬನ್ನು ಹಿಡಿದು ಅದರ ಬೆನ್ನೇರಿ ಕುಳಿತುಕೊಳ್ಳಲು ಯಶಸ್ವಿಯಾಗುವವರನ್ನು ವಿಜೇತರೆಂದು ಘೋಷಿಸಲಾಗುತ್ತದೆ. ಆದರೆ ಈ ಕ್ರೀಡೆಯಲ್ಲಿ ಪ್ರಾಣಿಗಳಿಗೆ ಹಿಂಸೆ ನೀಡಲಾಗುತ್ತದೆ ಎಂದು ಪ್ರಾಣಿ ದಯಾ ಸಂಘಗಳು ಆರೋಪಿಸಿ ಅಭಿಯಾನ ನಡೆಸಿದ ಪರಿಣಾಮ ಸುಮಾರು ಒಂದು ದಶಕದಿಂದ ಜಲ್ಲಿಕಟ್ಟು ಕಾನೂನು ಸಂಕಷ್ಟಕ್ಕೊಳಾಗಿದೆ. 2014ರಲ್ಲಿ ಜಲ್ಲಿಕಟ್ಟುವನ್ನು ಸರ್ವೋಚ್ಚ ನ್ಯಾಯಾಲಯ ನಿಷೇಧಿಸಿತ್ತು.

2016ರ ಜನವರಿಯಲ್ಲಿ ಜನರ ಒತ್ತಡಕ್ಕೆ ಸಿಲುಕಿದ ಕೇಂದ್ರ ಸರಕಾರ ಅಧಿಸೂಚನೆಯ ಮೂಲಕ ಕ್ರೀಡೆಯಲ್ಲಿ ಎತ್ತನ್ನು ಬಳಸುವುದಕ್ಕೆ ಅನುಮತಿ ನೀಡಿತು. ಆದರೆ ಈ ಅಧಿಸೂಚನೆಯ ವಿರುದ್ಧ ಪ್ರಾಣಿ ದಯಾ ಸಂಘಗಳು ಮೇಲ್ಮನವಿ ಸಲ್ಲಿಸಿದ ಪರಿಣಾಮ ಸುಪ್ರೀಂ ಕೋರ್ಟ್ ಈ ಅಧಿಸೂಚನೆಯನ್ನು ರದ್ದುಗೊಳಿಸಿತ್ತು. ನ್ಯಾಯಾಲಯದ ಆದೇಶದ ವಿರುದ್ಧ ತಮಿಳುನಾಡಿನಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿ ವಿದ್ಯಾರ್ಥಿಗಳೂ ಸೇರಿದಂತೆ ಜಲ್ಲಿಕಟ್ಟು ಪ್ರಿಯರು ಬಿದಿಗಿಳಿದು ಪ್ರತಿಭಟನೆ ನಡೆಸಿದ್ದರು. ಅಂತಿಮವಾಗಿ 2017ರಲ್ಲಿ ವಾರಗಳ ಪ್ರತಿಭಟನೆಯ ನಂತರ ರಾಜ್ಯ ಸರಕಾರ 1960ರ ಪ್ರಾಣಿ ಹಿಂಸೆ ತಡೆ ಕಾಯ್ದೆಗೆ ತಿದ್ದುಪಡಿ ತಂದು ಅದಕ್ಕೆ ರಾಷ್ಟ್ರಪತಿಗಳ ಅಂಕಿತವನ್ನೂ ಪಡೆದುಕೊಂಡಿತು.

ಹೀಗೆ ಜಲ್ಲಿಕಟ್ಟುವಿಗೆ ಮತ್ತೆ ಅವಕಾಶ ನೀಡಲಾಯಿತು. ಸರಕಾರದ ನಿರ್ಧಾರದ ವಿರುದ್ಧ ಪೇಟಾ ಮತ್ತೆ ನ್ಯಾಯಾಲಯದಲ್ಲಿ ದಾವೆ ಹೂಡಿತು. ಇದೀಗ ಇದರ ವಿಚಾರಣೆಯು ನ್ಯಾಯಾಲಯದಲ್ಲಿ ಬಾಕಿಯುಳಿದಿದ್ದು ಜಲ್ಲಿಕಟ್ಟು ಸಾಂಸ್ಕೃತಿಕ ಹಕ್ಕಾಗಿದೆಯೇ ಎಂಬುದನ್ನು ಸಾಂವಿಧಾನಿಕ ಪೀಠ ಪರಿಶೀಲಿಸಲಿದೆ ಎಂದು ಸರ್ವೋಚ್ಛ ನ್ಯಾಯಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News