ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಆಗ್ರಹಿಸಿ ಕರ್ನಾಟಕದ ಶಾಸಕರಿಂದ ಪ್ರತಿಭಟನೆ

Update: 2018-12-27 17:06 GMT

ಹೊಸದಲ್ಲಿ, ಡಿ. 27: ತಮಿಳುನಾಡಿನ ಡಿಎಂಕೆ ಹಾಗೂ ಎಐಎಡಿಎಂಕೆ ವಿರೋಧ ವ್ಯಕ್ತಪಡಿಸುತ್ತಿರುವ ಕಾವೇರಿ ನದಿಗೆ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಅವಕಾಶ ನೀಡುವಂತೆ ಕೋರಿ ಕರ್ನಾಟಕದ ಶಾಸಕರು ಪಕ್ಷಬೇಧ ಮರೆತು ಸಂಸತ್ ಸದನದ ಒಳಗೆ ಗುರುವಾರ ಪ್ರತಿಭಟನೆ ನಡೆಸಿದರು. ಇದರಿಂದ ಲೋಕಸಭೆ ಹಾಗೂ ರಾಜ್ಯ ಸಭೆಯ ಕಲಾಪಕ್ಕೆ ಅಡ್ಡಿ ಉಂಟಾಯಿತು.

ತಮಿಳುನಾಡಿನ ಪಕ್ಷಗಳ ವಿರೋಧಕ್ಕೆ ಪ್ರತಿಯಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಸೇರಿದಂತೆ ಕರ್ನಾಟಕದ ಶಾಸಕರು ಸಂಘಟಿತರಾಗಿ ಸಂಸತ್ ಭವನದ ಆವರಣದಲ್ಲಿ ಇರುವ ಮಹಾತ್ಮಾ ಗಾಂಧಿ ಪ್ರತಿಮೆ ಮುಂದೆ ಕೂಡ ಪ್ರತಿಭಟನೆ ನಡೆಸಿದರು. ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಕರ್ನಾಟಕ ಸರಕಾರಕ್ಕೆ ಕೇಂದ್ರ ಸರಕಾರ ಈಗಾಗಲೇ ಅನುಮತಿ ನೀಡಿದ ಮೇಕೆದಾಟು ಯೋಜನೆಗೆ ಲೋಕಸಭೆಯಲ್ಲಿ ಹಾಗೂ ರಾಜ್ಯಸಭೆಯಲ್ಲಿ ತಮಿಳುನಾಡಿನ ಎರಡು ಪಕ್ಷಗಳು ಪ್ರದರ್ಶನಾ ಫಲಕಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದವು.

ಮೇಕೆದಾಟು ಅಣೆಕಟ್ಟು ನಿರ್ಮಾಣದ ಪ್ರಸ್ತಾವದಿಂದ ತೊಂದರೆಗೆ ಒಳಗಾಗುವ ರೈತರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಒಂದು ವಾರಗಳಿಗಿಂತಲೂ ಅಧಿಕ ಕಾಲ ಎರಡೂ ಪಕ್ಷಗಳು ಸಂಸತ್ ಕಲಾಪವನ್ನು ಸ್ಥಗಿತಗೊಳಿಸುತ್ತಿದೆ. ಇಂದು ಕೂಡ ರಾಜ್ಯ ಸಭೆಯ ಕಲಾಪವನ್ನು ಒಂದು ದಿನಕ್ಕೆ ಮುಂದೂಡಲಾಯಿತು. ಕರ್ನಾಟಕದ ಜನಪ್ರತಿನಿಧಿಗಳು ‘‘ನಮಗೆ ಬೇಕು ಮೇಕೆದಾಟು ಯೋಜನೆ’’ ಘೋಷಣೆಗಳನ್ನು ಕೂಗಿದರು ಹಾಗೂ ‘‘ಕರ್ನಾಟಕ ಚರ್ಚೆ ಬಯಸುತ್ತದೆ, ಅಡ್ಡಿಯನ್ನಲ್ಲ’’, ‘‘ರಾಜಕೀಯ ಸಮಸ್ಯೆ ಸೃಷ್ಟಿಸುತ್ತದೆ, ಮೇಕೆದಾಟು ಪರಿಹಾರ ನೀಡಿದೆ’’ ಹಾಗೂ ‘‘ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ಕೇಂದ್ರ ಸರಕಾರ ಗೌರವ ನೀಡಬೇಕು ಎಂದು ನಾವು ಬಯಸುತ್ತೇವೆ’’ ಮೊದಲಾದ ಪ್ರದರ್ಶನಾ ಫಲಕಗಳನ್ನು ಅವರು ಪ್ರದರ್ಶಿಸಿದರು.

ಬಿಜೆಪಿಯ ಶೋಭಾ ಕರಂದ್ಲಾಜೆ, ಪ್ರಹ್ಲಾದ ಜೋಶಿ, ಜಿ.ಎಂ. ಸಿದ್ದೇಶ್ವರ, ಕಾಂಗ್ರೆಸ್‌ನ ಜೈರಾಮ್ ರಮೇಶ್, ಡಿ.ಕೆ. ಹರಿಪ್ರಸಾದ್, ರಾಜೀವ್ ಗೌಡ, ಡಿ.ಕೆ. ಸುರೇಶ್, ಧ್ರುವ ನಾರಾಯಣ, ಜೆಡಿಎಸ್‌ನ ಶಿವರಾಮೆ ಗೌಡ ಸಹಿತ ಕರ್ನಾಟಕದ 12ಕ್ಕೂ ಅಧಿಕ ಶಾಸಕರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಕೇಂದ್ರ ಸಚಿವ ಸದಾನಂದ ಗೌಡ, ನಿರ್ಮಲಾ ಸೀತಾರಾಮನ್, ಅನಂತ್ ಕುಮಾರ್ ಹೆಗಡೆ ಹಾಗೂ ರಮೇಶ್ ಜಿಗಜಿಣಗಿ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ‘‘ತಮಿಳುನಾಡಿನ ನಮ್ಮ ಗೆಳೆಯರು ಕರುಣೆ ತೋರಬೇಕು. ಸಮುದ್ರಕ್ಕೆ ಹರಿದು ಪೋಲಾಗುವ ಕಾವೇರಿ ನದಿಯ ಹೆಚ್ಚುವರಿ ನೀರನ್ನು ಬಳಸಲು ನೀಡಬೇಕೆಂದು ನಾವು ಕೋರುತ್ತಿದ್ದೇವೆ. ಈ ನೀರನ್ನು ನಾವು ಕುಡಿಯುವ ಉದ್ದೇಶಕ್ಕಾಗಿ ಶೇಖರಿಸಿ ಇಡಲಿದ್ದೇವೆ. ಇದು ಕರ್ನಾಟಕದ ನ್ಯಾಯಬದ್ಧ ಬೇಡಿಕೆ ಕೂಡ ಆಗಿದೆ.’’ ಎಂದು ಜೆಡಿಎಸ್ ವರಿಷ್ಠ ದೇವೇ ಗೌಡ ಅವರು ಪ್ರತಿಭಟನೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News