ಚುನಾವಣೆ ಸಂದರ್ಭ ಕಾಂಗ್ರೆಸ್ ಗೆ ಢಿಕ್ಕಿ ಹೊಡೆಯಲೆಂದೇ ಬರುತ್ತಿದೆಯೇ ‘ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’?

Update: 2018-12-27 17:30 GMT

#ಮಾಜಿ ಪ್ರಧಾನಿ ಪಾತ್ರದಲ್ಲಿ ರೋಬೊಟ್ ಆದ ಬಿಜೆಪಿಯ ‘ಕೀಲಿ ಗೊಂಬೆ’ ಅನುಪಮ್ ಖೇರ್

ಬಾಲಿವುಡ್ ನ ಬಹುನಿರೀಕ್ಷಿತ ಚಿತ್ರ ‘ದ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಟ್ರೈಲರ್ ಕೊನೆಗೂ ಬಿಡುಗಡೆಯಾಗಿದೆ. ಈ ಚಿತ್ರವು ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ ಬಾರು ಅವರು ಬರೆದ ‘ದ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಎನ್ನುವ ಪುಸ್ತಕವನ್ನಾಧರಿಸಿದೆ. ಮಾಜಿ ಪ್ರಧಾನಿ, ಕಾಂಗ್ರೆಸ್ ನ ಹಿರಿಯ ನಾಯಕ ಮನಮೋಹನ್ ಸಿಂಗ್ ಪಾತ್ರದಲ್ಲಿ ಪ್ರಧಾನಿ ಮೋದಿಯ ಕಟ್ಟಾ ಅಭಿಮಾನಿ ಅನುಪಮ್ ಖೇರ್ ನಟಿಸಿರುವುದು ಚಿತ್ರದ ಇನ್ನೊಂದು ವಿಶೇಷತೆ.

ಅನುಪಮ್ ಖೇರ್ ಅವರು ಮನಮೋಹನ್ ಸಿಂಗ್ ಪಾತ್ರದಲ್ಲಿ, ಅರ್ಜುನ್ ಮಾಥುರ್ ಅವರು ರಾಹುಲ್ ಗಾಂಧಿ ಪಾತ್ರದಲ್ಲಿರುವ ಫಸ್ಟ್ ಲುಕ್ ಗಳನ್ನು ಬಿಡುಗಡೆಗೊಳಿಸಿ ಚಿತ್ರತಂಡ ಚಿತ್ರದ ಕುರಿತ ಕುತೂಹಲ ಹೆಚ್ಚಿಸಿತ್ತು. ಇಂದು ಈ ಚಿತ್ರದ ಟ್ರೈಲರ್ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ.

ಚಿತ್ರದ ಟ್ರೈಲರ್ ವೀಕ್ಷಿಸಿದ ಹಲವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಚಿತ್ರದಲ್ಲಿ ‘ವಿಲನ್’ ರೂಪದಲ್ಲಿ ಚಿತ್ರಿಸಲಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮನಮೋಹನ್ ಸಿಂಗ್ ಆಡಳಿತಾವಧಿಯಲ್ಲಿ ಸೋನಿಯಾ ಗಾಂಧಿಯವರೇ ಸರಕಾರವನ್ನು ನಿಯಂತ್ರಿಸುತ್ತಿದ್ದರು ಮತ್ತು ಮನಮೋಹನ್ ಸಿಂಗ್ ‘ರಬ್ಬರ್ ಸ್ಟ್ಯಾಂಪ್’ ಆಗಿದ್ದರು ಎನ್ನುವ ಹಾಗೆ ಟ್ರೈಲರ್ ನಲ್ಲಿ ತೋರಿಸಲಾಗಿದೆ. ಅಲ್ಲದೆ, ಟ್ರೈಲರ್ ನಲ್ಲಿ ಗಾಂಧಿ ಕುಟುಂಬದ ಬಗ್ಗೆ ‘ಕೆಟ್ಟದಾಗಿ’ ತೋರಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

ಲೋಕಸಭಾ ಚುನಾವಣೆ ಇನ್ನೇನು ಹತ್ತಿರವಾಗುತ್ತಿದ್ದು, ಗಾಂಧಿ ಕುಟುಂಬವನ್ನು ನಕಾರಾತ್ಮಕವಾಗಿ ಬಿಂಬಿಸಿದ ಚಿತ್ರ ಬಿಡುಗಡೆಯಾಗುವುದರಿಂದ ಸಹಜವಾಗಿ ಜನರಿಗೆ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧ ಕೆಟ್ಟ ಅಭಿಪ್ರಾಯ ಮೂಡಬಹುದು. ಚಿತ್ರದಲ್ಲಿ ಸೋನಿಯಾ ಗಾಂಧಿಯವರನ್ನು ಸರ್ವಾಧಿಕಾರಿಯಂತೆ ಬಿಂಬಿಸಲಾಗಿದ್ದು, ಮನಮೋಹನ್ ಸಿಂಗ್ ಪಾತ್ರದಲ್ಲಿ ಅನುಪಮ್ ಖೇರ್ ರೋಬೊಟ್ ನಂತೆ ನಟಿಸಿ, ಮಾಜಿ ಪ್ರಧಾನಿಯ ಇಮೇಜನ್ನು ಹಾಳುಗೆಡವಿದ್ದಾರೆ. ಲೋಕಸಭಾ ಚುನಾವಣೆ ಹೊಸ್ತಿಲಲ್ಲಿರುವಾಗ ಈ ಚಿತ್ರ ಬಿಡುಗಡೆಯಾದರೆ ಅದು ಬಿಜೆಪಿಗೆ ಲಾಭದಾಯಕವಾಗಲಿದ್ದು, ಕಲೆಯ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮತ್ತು ಜನರ ಮನಸ್ಸಲ್ಲಿ ಕಾಂಗ್ರೆಸ್ ಬಗ್ಗೆ ದ್ವೇಷ ಮೂಡಿಸಲು ನಡೆಸಿದ ಷಡ್ಯಂತ್ರ ಎನ್ನುವ ಆರೋಪವೂ ಕೇಳಿಬಂದಿದೆ.

ಇನ್ನು ಮನಮೋಹನ್ ಸಿಂಗ್ ಪಾತ್ರವನ್ನು ನಿರ್ವಹಿಸಿರುವ ಅನುಪಮ್ ಖೇರ್ ನಾಟಕೀಯವಾಗಿ, ಮಾಜಿ ಪ್ರಧಾನಿಯ ‘ಬಾಡಿ ಲಾಂಗ್ವೇಜ್’ ಅನ್ನು ಇನ್ನೂ ಕೆಟ್ಟದಾಗಿ ನಿರ್ವಹಿಸಿದ್ದಾರೆ. ಕೆಲವೊಂದು ದೃಶ್ಯಗಳಲ್ಲಿ ಅವರು ರೋಬೋಟ್ ನಂತೆಯೇ ನಟಿಸಿದ್ದಾರೆ ಮತ್ತು ಉತ್ತಮ ಮಾತುಗಾರನಾಗಿರುವ ಸಿಂಗ್ ಅವರು ಮಾತನಾಡಲೂ ಕಷ್ಟಪಡುತ್ತಿದ್ದರು ಎನ್ನುವಂತಹ ದೃಶ್ಯಗಳು ಚಿತ್ರದಲ್ಲಿದೆ ಎನ್ನುವ ಆರೋಪವೂ ಕೇಳಿಬಂದಿದೆ.  

ಈ ಚಿತ್ರವು ಲೋಕಸಭೆ ಚುನಾವಣೆಯ ಆಸುಪಾಸಿನಲ್ಲಿ ಬಿಡುಗಡೆಯಾದರೆ ಈಗಾಗಲೇ ಪಂಚರಾಜ್ಯಗಳ ಚುನಾವಣೆಯಲ್ಲಿ ಹೀನಾಯವಾಗಿ ಸೋತು ನೈತಿಕತೆ ಕಳೆದುಕೊಂಡಿರುವ ಬಿಜೆಪಿಗೆ ವರದಾನವಾಗಲಿದ್ದು, ಈಗಾಗಲೇ ಗೆಲುವಿನ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ಬಗ್ಗೆ ಜನರಿಗೆ ನಕಾರಾತ್ಮಕ ಅಭಿಪ್ರಾಯ ಮೂಡಲಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಂದೊಮ್ಮೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರನ್ನು ‘ಮೌನಮೋಹನ ಸಿಂಗ್’ ಎಂದು ಲೇವಡಿ ಮಾಡಿದವರು ಇದೀಗ ಅವರ ಆಡಳಿತಾತ್ಮಕ ನಿರ್ಧಾರ, ಆರ್ಥಿಕ ನಡೆಗಳನ್ನು ಶ್ಲಾಘಿಸುತ್ತಿದ್ದಾರೆ. ಇಷ್ಟೇ ಅಲ್ಲದೆ ಮನಮೋಹನ್ ಸಿಂಗ್ ರ ಆಡಳಿತಾವಧಿಯಲ್ಲಿ ನಡೆದಿತ್ತು ಎನ್ನಲಾದ ಹಗರಣಗಳ ಆರೋಪಿಗಳ ಆರೋಪ ಸಾಬೀತಾಗದೆ ನ್ಯಾಯಾಲಯವು ಅವರನ್ನು ಖುಲಾಸೆಗೊಳಿಸಿದೆ. ಈ ಎಲ್ಲಾ ವಿಚಾರಗಳು ಮತ್ತು ವಾಸ್ತವಗಳು ನಮ್ಮ ಕಣ್ಣ ಮುಂದೆಯೇ ಇರುವಾಗ ಮನಮೋಹನ್ ಸಿಂಗ್ ರನ್ನು ‘ರಬ್ಬರ್ ಸ್ಟ್ಯಾಂಪ್’ ಎಂದು ಬಿಂಬಿಸುವ, ಸೋನಿಯಾ ಗಾಂಧಿಯವರನ್ನು ಸರ್ವಾಧಿಕಾರಿಯಂತೆ ತೋರಿಸುವ ಚಿತ್ರವನ್ನು ಬಿಡುಗಡೆಗೊಳಿಸುವುದು ಎಷ್ಟು ಸರಿ ಎಂದು ಸಾಮಾಜಿಕ ಜಾಲತಾಣದ ಬಳಕೆದಾರರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News