ಸರಕಾರಿ ಸಮಾರಂಭದಲ್ಲಿ ಕೇಜ್ರಿವಾಲ್ ಕೆಮ್ಮನ್ನು ಅಣಕಿಸಿದವರನ್ನು ಸುಮ್ಮನಾಗಿ ಎಂದು ಗದರಿಸಿದ ಗಡ್ಕರಿ

Update: 2018-12-28 11:24 GMT

ಹೊಸದಿಲ್ಲಿ,ಡಿ.28:  ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸೆಪ್ಟೆಂಬರ್ 2016ರಲ್ಲಿ ಶಸ್ತ್ರಕ್ರಿಯೆ ನಡೆಯುವುದಕ್ಕಿಂತ ಮುನ್ನ 40 ವರ್ಷಗಳಿಗೂ ಅಧಿಕ ಸಮಯದಿಂದ ಅವರು ವಿಪರೀತ ಕೆಮ್ಮಿನಿಂದ ಬಳಲುತ್ತಿದ್ದರು. ಇದನ್ನೇ ನೆಪವಾಗಿಟ್ಟುಕೊಂಡು ರಾಜಧಾನಿಯಲ್ಲಿ ಗುರುವಾರ ಆಯೋಜಿಸಲಾಗಿದ್ದ ಸಾರ್ವಜನಿಕ ಸಮಾರಂಭವೊಂದರ ವೇಳೆ ಮೊದಲ ಸಾಲಿನಲ್ಲಿದ್ದ ಜನರು ನಿಂತುಕೊಂಡು ಒಂದೇ ಸಮನೆ ಕೃತಕವಾಗಿ ಕೆಮ್ಮುತ್ತಾ ಅವರನ್ನು ಅಣಕಿಸಲು ಆರಂಭಿಸಿದ್ದರು. ಇದು ನಿಜವಾಗಿಯೂ ಒಂದು ಮುಜುಗರಕಾರಿ ಸನ್ನಿವೇಶವಾಗಿತ್ತು. ಕೊನೆಗೆ ವೇದಿಕೆಯಲ್ಲಿದ್ದ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಹಾಗೂ ಹರ್ಷ ವರ್ಧನ್ ಈ ರೀತಿ ಮಾಡುತ್ತಿದ್ದ ಜನರ ಬಾಯಿ ಮುಚ್ಚಿಸಲು ಮುಂದಾಗಬೇಕಾಯಿತು. “ದಯವಿಟ್ಟು ಸುಮ್ಮನಾಗಿ ಬಿಡಿ, ಇದು ಅಧಿಕೃತ ಕಾರ್ಯಕ್ರಮ,'' ಎಂದು ಗಡ್ಕರಿ ಹೇಳಿದರು.

ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ ಹಾಗೂ ದಿಲ್ಲಿ ಜಲ ಮಂಡಳಿಯ ಪ್ರಾಯೋಜಕತ್ವದಲ್ಲಿ ನಡೆದ ಈ ಕಾರ್ಯಕ್ರಮ ಯಮುನಾ ನದಿಯನ್ನು ಶುದ್ಧೀಕರಿಸುವ ಅಭಿಯಾನದ ಆರಂಭಕ್ಕಾಗಿ ಆಯೋಜಿಸಲಾಗಿತ್ತು. ಕೇಜ್ರಿವಾಲ್ ಹಾಗೂ ಇಬ್ಬರು ಕೇಂದ್ರ ಸಚಿವರ ಹೊರತಾಗಿ ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಜಲಸಂಪನ್ಮೂಲಗಳ ಖಾತೆಯ ಸಹಾಯಕ ಸಚಿವ ಸತ್ಯಪಾಲ್ ಸಿಂಗ್ ಹಾಗೂ ದಿಲ್ಲಿಯ ಹಲವಾರು ಸಂಸದರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕೇಜ್ರಿವಾಲ್ ಅವರು ಈ ಹಿಂದೆ ಅನುಭವಿಸುತ್ತಿದ್ದ ಕೆಮ್ಮಿನ ಸಮಸ್ಯೆಯನ್ನು ಕೆಲವರು ಅಣಕವಾಡಿರುವುದು ಇದೇ ಮೊದಲ ಬಾರಿಯಲ್ಲ. ಎರಡು ವರ್ಷಗಳ ಹಿಂದೆ ರಾಜಕಾರಣಿ ಹಾಗೂ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರು ಕೇಜ್ರಿವಾಲ್ ಕೆಮ್ಮನ್ನು ಅಣಕವಾಡಿದ್ದು ಸಾಮಾಜಿಕ ಜಾತಾಣಗಳಲ್ಲಿ ವೈರಲ್ ಆಗಿತ್ತು.

ಕೇಜ್ರಿವಾಲ್ ಶಸ್ತ್ರಕ್ರಿಯೆಯ ನಂತರವೂ ಆಗಿನ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರನ್ನು ಅಪಹಾಸ್ಯಗೈದಿದ್ದರಲ್ಲದೆ ತಮ್ಮ ಹಾಗೂ ಪ್ರಧಾನಿಯ ವಿರುದ್ಧ ಅವರು ನೀಡಿದ ಹೇಳಿಕೆಗಳಿಂದ ಅವರ ನಾಲಗೆ ಉದ್ದವಾಗಿದ್ದರಿಂದ ವೈದ್ಯರು ಅದನ್ನು ಟ್ರಿಮ್ ಮಾಡಬೇಕಾಗಿ ಬಂದಿತ್ತು, ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News